Kundapra.com ಕುಂದಾಪ್ರ ಡಾಟ್ ಕಾಂ

ನೂತನ ಬೈಂದೂರು ತಾಲೂಕಿಗೆ ಗಂಗೊಳ್ಳಿ ಗ್ರಾಮ ಸೇರಿಸದಂತೆ ಗ್ರಾಮಸ್ಥರ ಆಗ್ರಹ

?

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ನೂತನವಾಗಿ ರಚನೆಯಾಗಲಿರುವ ಬೈಂದೂರು ತಾಲೂಕಿಗೆ ಗಂಗೊಳ್ಳಿ ಗ್ರಾಮವನ್ನು ಯಾವುದೇ ಕಾರಣಕ್ಕೂ ಸೇರ್ಪಡೆಗೊಳಿಸಬಾರದು. ಗಂಗೊಳ್ಳಿ ಗ್ರಾಮವನ್ನು ಕುಂದಾಪುರ ತಾಲೂಕಿನಲ್ಲಿಯೇ ಉಳಿಸಿಕೊಳ್ಳಬೇಕು. ಗಂಗೊಳ್ಳಿ ಗ್ರಾಮವನ್ನು ಬೈಂದೂರು ತಾಲೂಕಿಗೆ ಸೇರ್ಪಡೆಗೊಳಿಸುವ ನಿರ್ಧಾರ ಕೈಗೊಂಡಲ್ಲಿ ಗ್ರಾಮಸ್ಥರೆಲ್ಲರೂ ಒಟ್ಟುಗೂಡಿ ಸಂಘಟಿತ ಹೋರಾಟ ನಡೆಸಲು ಹಾಗೂ ಎಪ್ರಿಲ್ ೧೨ರಂದು ಗಂಗೊಳ್ಳಿ ಗ್ರಾಮ ಪಂಚಾಯತ್ ಮುಂಭಾಗ ಸಾಂಕೇತಿಕ ಧರಣಿ ನಡೆಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲು ಗಂಗೊಳ್ಳಿ ಗ್ರಾಮಸ್ಥರು ನಿರ್ಧರಿಸಿದ್ದಾರೆ.

ಗಂಗೊಳ್ಳಿಯ ಶ್ರೀ ವೀರೇಶ್ವರ ಮಾಂಗಲ್ಯ ಮಂದಿರದಲ್ಲಿ ಗಂಗೊಳ್ಳಿ ನಾಗರಿಕ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ನಾಗರಿಕರ ಸಭೆಯಲ್ಲಿ ಈ ಒಕ್ಕೊರಲ ನಿರ್ಣಯವನ್ನು ಕೈಗೊಳ್ಳಲಾಗಿದೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ, ಗಂಗೊಳ್ಳಿಯ ಜನರಿಗೆ ಕುಂದಾಪುರದೊಂದಿಗೆ ಅನೇಕ ದಶಕಗಳ ಅವಿನಾಭಾವ ಸಂಬಂಧವಿದೆ. ಗಂಗೊಳ್ಳಿಯ ಜನರು ತಮ್ಮ ದೈನಂದಿನ ಚಟುವಟಿಕೆಗಳಿಗೆ ಕುಂದಾಪುರವನ್ನೇ ಅವಲಂಬಿಸಿದ್ದಾರೆ. ಕುಂದಾಪುರಕ್ಕೆ ಸಾರಿಗೆ ವ್ಯವಸ್ಥೆ ಕೂಡ ಉತ್ತಮವಾಗಿದೆ. ಗಂಗೊಳ್ಳಿ-ಕುಂದಾಪುರ ನಡುವೆ ಸೇತುವೆ ನಿರ್ಮಾಣಗೊಂಡಲ್ಲಿ ಗಂಗೊಳ್ಳಿ ಜನರು ಕೇವಲ ಒಂದುವರೆ ಕಿಮೀ ದೂರ ಕ್ರಮಿಸಿದರೆ ಕುಂದಾಪುರ ತಲುಪಬಹುದು. ಬೈಂದೂರಿನಲ್ಲಿ ತಾಲೂಕು ಕೇಂದ್ರ ನಿರ್ಮಾನಗೊಂಡರೆ ಅನಾನುಕೂಲಗಳೇ ಹೆಚ್ಚು. ಹೀಗಾಗಿ ಗಂಗೊಳ್ಳಿಯನ್ನು ಕುಂದಾಪುರ ತಾಲೂಕಿನಲ್ಲಿಯೇ ಉಳಿಸಿಕೊಳ್ಳಲು ಎಲ್ಲರೂ ಸಂಘಟಿತ ಪ್ರಯತ್ನ ನಡೆಸಬೇಕು ಎಂದರು.

ಹಿಂದೂ ಜಾಗರಣ ವೇದಿಕೆ ಗಂಗೊಳ್ಳಿ ಘಟಕದ ಅಧ್ಯಕ್ಷ ಗೋವಿಂದ್ರಾಯ ಶೇರುಗಾರ್ ಮಾತನಾಡಿ, ಗಂಗೊಳ್ಳಿಯನ್ನು ಬೈಂದೂರು ತಾಲೂಕಿಗೆ ಸೇರ್ಪಡೆಗೊಳಿಸದಂತೆ ಸಂಬಂಧಪಟ್ಟ ಶಾಸಕರು, ಜನಪ್ರತಿನಿಧಿಗಳ ಮೂಲಕ ಸರಕಾರದ ಮೇಲೆ ಒತ್ತಡ ಹೇರಬೇಕು. ಸರಕಾರವನ್ನು, ಆಡಳಿತವನ್ನು ಎಚ್ಚರಿಸುವ ದೃಷ್ಟಿಯಿಂದ ಗಂಗೊಳ್ಳಿಯಲ್ಲಿ ಬೃಹತ್ ಆಂದೋಲನ ರೂಪಿಸಬೇಕು. ಗಂಗೊಳ್ಳಿ ಗ್ರಾಮವು ಕುಂದಾಪುರ ತಾಲೂಕಿನಲ್ಲಿ ಉಳಿಯುವ ತನಕ ಹೋರಾಟ ನಡೆಯಬೇಕು ಎಂದರು.

ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಎಚ್.ಎಸ್.ಚಿಕ್ಕಯ್ಯ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಮಾಜಿ ಸದಸ್ಯರಾದ ಉಮಾನಾಥ ದೇವಾಡಿಗ, ರಾಮಪ್ಪ ಖಾರ್ವಿ, ಗ್ರಾಪಂ ಸದಸ್ಯರಾದ ಮುಜಾಹಿದ್ ನಾಕುದಾ, ಲಕ್ಷ್ಮೀಕಾಂತ ಮಡಿವಾಳ, ಸುಧಾಕರ ಖಾರ್ವಿ, ರಾಜ ಖಾರ್ವಿ, ನಾಗರಾಜ ಖಾರ್ವಿ, ಬಿ.ಗಣೇಶ ಶೆಣೈ, ಗಂಗೊಳ್ಳಿ ಟ್ಯಾಕ್ಸಿಮೆನ್ ಅಸೋಶಿಯೇಶನ್ ಅಧ್ಯಕ್ಷ ಮಹಾಬಲ ಪೂಜಾರಿ, ಹಿಂದು ಸಂಘಟನೆಯ ಪ್ರಮುಖರಾದ ಸತೀಶ ಜಿ., ರಾಘವೇಂದ್ರ ಗಾಣಿಗ, ರತ್ನಾಕರ ಗಾಣಿಗ, ಸ್ಥಳೀಯರಾದ ಮಹಮ್ಮದ್ ಇಕ್ಬಾಲ್, ಗಣೇಶ ಖಾರ್ವಿ, ಕೇಶವ ಪೈ, ನವೀನ್ ದೊಡ್ಡಹಿತ್ಲು, ಕೃಷ್ಣ ಪೂಜಾರಿ, ಅಶೋಕ ಪೂಜಾರಿ, ಆಟೋ ಚಾಲಕರ ಪರವಾಗಿ ರಾಜ ಟಿ.ಎಸ್. ಮೊದಲಾದವರು ಸಲಹೆ ಸೂಚನೆ ನೀಡಿದರು. ಗಂಗೊಳ್ಳಿ ಗ್ರಾಪಂ ಸದಸ್ಯರು, ವಿವಿಧ ಸಂಘಟನೆಗಳ ಪ್ರಮುಖರು, ಗ್ರಾಮಸ್ಥರು ಉಪಸ್ಥಿತರಿದ್ದರು.

ವಾಸುದೇವ ದೇವಾಡಿಗ ಸ್ವಾಗತಿಸಿದರು. ನಾಗರಿಕ ಹೋರಾಟ ಸಮಿತಿ ಸಂಚಾಲಕ ಬಿ.ರಾಘವೇಂದ್ರ ಪೈ ಪ್ರಾಸ್ತಾವಿಕ ಮಾತುಗಳನ್ನಾಡಿ ಹೋರಾಟದ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದರು. ರವೀಂದ್ರ ಪಟೇಲ್ ವಂದಿಸಿದರು.

ಗಂಗೊಳ್ಳಿಯನ್ನು ಕುಂದಾಪುರ ತಾಲೂಕಿನಲ್ಲಿ ಉಳಿಸಿಕೊಳ್ಳಲು ಪಕ್ಷಾತೀತ, ಜಾತ್ಯಾತೀತ ಸಂಘಟಿತ ಹೋರಾಟ ನಡೆಸಲು ಎಲ್ಲರೂ ಸಹಕಾರ ನೀಡಬೇಕು. ಈ ವಿಚಾರದಲ್ಲಿ ಆರಂಭದಲ್ಲೇ ಎಚ್ಚೆತ್ತುಕೊಂಡ ಹೋರಾಟ ನಡೆಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಗಂಗೊಳ್ಳಿ ನಾಗರಿಕರು ಪಶ್ಚಾತ್ತಾಪ ಪಡಬೇಕಾದಿತು. ಹೀಗಾಗಿ ಗ್ರಾಮಸ್ಥರು ಏಕ ಮನಸ್ಸಿನಿಂದ ಗಂಗೊಳ್ಳಿ ಗ್ರಾಮದ ಉಳಿವು ಹಾಗೂ ಅಭಿವೃದ್ಧಿಗೆ ಕೈಜೋಡಿಸಿ ಹೋರಾಟಕ್ಕೆ ಸಹಕಾರ ನೀಡಬೇಕು – ಬಿ.ರಾಘವೇಂದ್ರ ಪೈ, ಸಂಚಾಲಕ, ನಾಗರಿಕ ಹೋರಾಟ ಸಮಿತಿ ಗಂಗೊಳ್ಳಿ.

ಗಂಗೊಳ್ಳಿಯನ್ನು ಕುಂದಾಪುರ ತಾಲೂಕಿನಲ್ಲಿ ಉಳಿಸಿಕೊಳ್ಳಲು ಸ್ಥಳೀಯ ಗ್ರಾಮ ಪಂಚಾಯತ್ ವಿಶೇಷ ಗ್ರಾಮಸಭೆಯನ್ನು ಕರೆದು ಸಭೆಯಲ್ಲಿ ಈ ಸಂಬಂಧ ನಿರ್ಣಯಕೈಗೊಂಡು ಸರಕಾರ ಹಾಗೂ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಕಳುಹಿಸಿಕೊಡಬೇಕು. ಎಲ್ಲರೂ ಪಕ್ಷಬೇಧ ಮರೆತು ಹೋರಾಟದಲ್ಲಿ ಪಾಲ್ಗೊಳ್ಳಬೇಕು. ಗಂಗೊಳ್ಳಿ ಗ್ರಾಮವು ಕುಂದಾಪುರ ತಾಲೂಕಿನಲ್ಲಿ ಉಳಿಯುವ ತನಕ ಹೋರಾಟ ನಿಲ್ಲಬಾರದು – ಉಮಾನಾಥ ದೇವಾಡಿಗ, ಗ್ರಾಪಂ ಮಾಜಿ ಸದಸ್ಯ, ಗಂಗೊಳ್ಳಿ

ಸರಕಾರದ ಹಾಗೂ ಸಂಬಂಧಪಟ್ಟ ಜನಪ್ರತಿನಿಧಿಗಳ ಮೇಲೆ ನಿರಂತರ ಒತ್ತಡ ಹೇರುವ ದೃಷ್ಟಿಯಿಂದ ಪ್ರತಿಭಟನೆ, ಸಹಿ ಸಂಗ್ರಹ ಅಭಿಯಾನ ಸಹಿತ ವಿವಿಧ ರೀತಿಯ ಹೋರಾಟ ಸಂಘಟಿಸಬೇಕು. ಜನರು ಈ ಹೋರಾಟಕ್ಕೆ ಬೆಂಬಲ ಸೂಚಿಸಿ ಗ್ರಾಮದ ಅಭಿವೃದ್ಧಿಗೆ ಸಹಕಾರ ನೀಡಬೇಕು – ಗಣೇಶ ಖಾರ್ವಿ, ಗಂಗೊಳ್ಳಿ

ಬೈಂದೂರು ಹೋಬಳಿಯನ್ನು ಸೇರಿಸಿಕೊಂಡು ಬೈಂದೂರು ತಾಲೂಕು ರಚನೆ ಮಾಡುವುದಾಗಿ ಶಾಸಕರು ನೀಡಿರುವ ಹೇಳಿಕೆ ಸ್ವಾಗತಾರ್ಹ. ಆದರೆ ಮುಂದಿನ ದಿನಗಳಲ್ಲಿ ಗಂಗೊಳ್ಳಿ ಗ್ರಾಮವನ್ನು ಬೈಂದೂರು ತಾಲೂಕಿಗೆ ಸೇರ್ಪಡೆಗೊಳಿಸುವುದಿಲ್ಲ ಎಂಬುದಕ್ಕೆ ಯಾವುದೇ ಖಾತ್ರಿಯಿಲ್ಲ. ಹೀಗಾಗಿ ಸಂಬಂಧಪಟ್ಟ ಇಲಾಖಾಧಿಕಾರಿಗಳಿಂದ ಲಿಖಿತ ಭರವಸೆ ದೊರೆಯುವ ತನಕ ಗಂಗೊಳ್ಳಿ ಗ್ರಾಮಸ್ಥರು ಹೋರಾಟ ನಡೆಸುವುದು ಅನಿವಾರ್ಯ – ನವೀನ ದೊಡ್ಡಹಿತ್ಲು, ಗಂಗೊಳ್ಳಿ ನಾಗರಿಕ

Exit mobile version