ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಹಾಗೂ ಮರವಂತೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವೇಶನ ರಹಿತರ ಹೋರಾಟ ಸಮಿತಿಗಳ ನೇತೃತ್ವದಲ್ಲಿ ಮನೆ, ನಿವೇಶನ ರಹಿತ ಅರ್ಜಿದಾರರ ಬೃಹತ್ ಸಮಾವೇಶವು ಮರವಂತೆ ಸಾಧನ ಸಭಾ ಭವನದಲ್ಲಿ ಯಶಸ್ವಿಯಾಗಿ ಜರಗಿತು.
ಮರವಂತೆ ಗ್ರಾಮ ಮನೆ, ನಿವೇಶನ ರಹಿತರ ಹೋರಾಟ ಸಮಿತಿ ಅಧ್ಯಕ್ಷ ಮನ್ಸೂರ್ ಇಬ್ರಾಹಿಂ ಮರವಂತೆ- ನಿವೇಶನ ರಹಿತರ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡುತ್ತಾ, ಮರವಂತೆ ಗ್ರಾಮ ಪಂಚಾಯತ್ ವ್ಯಾಪ್ತಿಯ – ನಿವೇಶನ ರಹಿತ ೫೩೧ ಅರ್ಜಿಗಳನ್ನು ಗ್ರಾಮ ಪಂಚಾಯತ್ ಕಛೇರಿ ವತಿಯಿಂದ ಪರಿಶೀಲಿಸಿ, ನಿವೇಶನ ರಹಿತರ ಅಂತಿಮ ಪಟ್ಟಿ ಸಿದ್ಧಪಡಿಸಿ ೨ ವರ್ಷ ಸಂದರೂ ಈತನಕ ಸರಕಾರಿ ಜಾಗ ಗುರುತಿಸಿ ನಿವೇಶನದ ಭೂಮಿ ಹಕ್ಕು ಪತ್ರ ಮಂಜೂರು ಮಾಡದ ಸ್ಥಳೀಯ ಆಡಳಿತ ಕ್ರಮವನ್ನು ಖಂಡಿಸಿದರು. ಮನೆ ನಿವೇಶನ ರಹಿತ ಅರ್ಹ ಫಲಾನುಭವಿಗಳಿಗೆ ನಿವೇಶನ – ಭೂಮಿ ಹಕ್ಕು ಪತ್ರ ಸಿಗುವ ತನಕ ಭೂಮಿ ಹಕ್ಕಿನ ಹೋರಾಟ ಹಂತ ಹಂತವಾಗಿ ತೀವ್ರಗೊಳಿಸಲಾಗುವುದು. ಈ ಹಿನ್ನಲೆಯಲ್ಲಿ ಭೂಮಿ ಹಕ್ಕಿನ ಹೋರಾಟದ ಅಂಗವಾಗಿ ಏಪ್ರಿಲ್ ೧೮ ಮಂಗಳವಾರ ಬೆಳಿಗ್ಗೆ ೧೦ ಗಂಟೆಯಿಂದ ಬೈಂದೂರು ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ಮನೆ ಚಲೋ ಹೋರಾಟ ದಲ್ಲಿ ಮನೆ ನಿವೇಶನ ರಹಿತರೆಲ್ಲರೂ ಸಕ್ರೀಯವಾಗಿ ಭಾಗವಹಿಸಿ, ಯಶಸ್ವಿಗೊಳಿಸಲು ಮನ್ಸೂರ್ ಕರೆಕೊಟ್ಟರು.
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ ನಿವೇಶನ ರಹಿತರ ಸಮಾವೇಶವನ್ನುದ್ದೇಶಿಸಿ ಮಾತನಾಡುತ್ತಾ- ಈಗಾಗಲೇ ಕುಂದಾಪುರ ತಹಶೀಲ್ದಾರ್ ಕಛೇರಿ ಕಂದಾಯ ಇಲಾಖೆಯಿಂದ – ಸರಕಾರಿ ಸ್ಥಳವನ್ನು ಅತಿಕ್ರಮಣ ಮಾಡಿಕೊಂಡಿರುವ ೨೨೪ ಮಂದಿ ಹೆಸರು ವಿಳಾಸವುಳ್ಳ ಕ್ರಿಯಾಯೋಜನೆ ಪಟ್ಟಿಯಂತೆ ಒಟ್ಟು ಸರಕಾರಿ ಸ್ಥಳ ವಿಸ್ತೀರ್ಣ ೩೬೯.೧೮ ಎಕ್ರೆಯನ್ನು ಕೂಡಲೇ ತೆರವುಗೊಳಿಸಿ ನಿವೇಶನ ರಹಿತರಿಗೆ ಭೂಮಿ ಹಕ್ಕು ಪತ್ರ ಮಂಜೂರು ಮಾಡಲು – ಸರಕಾರ ಕ್ರಮವಹಿಸಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.
ಕೃಷಿ ಕೂಲಿಕಾರರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ನಾಗರತ್ನ ನಾಡ – ಪ್ರಾಸ್ತಾವಿಕವಾಗಿ ಮಾತನಾಡಿ, ಎಲ್ಲರನ್ನೂ ಸ್ವಾಗತಿಸಿದರು. ಮುಖಂಡರಾದ ಶೀಲಾವತಿ ಪಡುಕೋಣೆ, ಪದ್ಮಾವತಿ ಶೆಟ್ಟಿ, ಸದಾನಂದ ಪೂಜಾರಿ ಮರವಂತೆ, ಚೆನ್ನಯ್ಯ ಭಂಡಾರಿ-ಮುಂತಾದವರು ಉಪಸ್ಥಿತರಿದ್ದರು.