Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ ಗ್ರಾಮ ಕುಂದಾಪ್ರ ತಾಲೂಕಿನಲ್ಲಿಯೇ ಇರಲಿ: ಸಾಂಕೇತಿಕ ಪ್ರತಿಭಟನೆಯಲ್ಲಿ ಆಗ್ರಹ

????????????????????????????????????

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ರಾಜ್ಯ ಸರಕಾರ ಬಜೆಟ್‌ನಲ್ಲಿ ಬೈಂದೂರು ತಾಲೂಕನ್ನು ಹುಟ್ಟುಹಾಕಿ ಗಂಗೊಳ್ಳಿ ಗ್ರಾಮವನ್ನು ನೂತನ ಬೈಂದೂರು ತಾಲೂಕಿಗೆ ಸೇರ್ಪಡೆಯಾಗುವಂತೆ ಮಾಡಲಿದೆ ಎಂಬ ಮಾಹಿತಿ ದೊರೆಯುತ್ತಿರುವುದು ಗಂಗೊಳ್ಳಿಯ ನಾಗರಿಕರ ಮೇಲೆ ಕೊಡಲಿ ಪೆಟ್ಟು ಬಿದ್ದಂತೆ ಆಗಿದೆ. ಪ್ರಮುಖವಾಗಿ ಇಲ್ಲಿನ ಜನರ ಮತ್ಸ್ಯೋದ್ಯಮ, ಉನ್ನತ ಶಿಕ್ಷಣ, ಆರೋಗ್ಯ ಕ್ಷೇತ್ರಗಳ ಮೇಲೆ ಪ್ರಬಲವಾದ ಆಘಾತವಾಗಿದೆ. ಆದ್ದರಿಂದ ನೂತನವಾಗಿ ರಚನೆಯಾಗಲಿರುವ ಬೈಂದೂರು ತಾಲೂಕಿಗೆ ಗಂಗೊಳ್ಳಿ ಗ್ರಾಮವನ್ನು ಯಾವುದೇ ಕಾರಣಕ್ಕೂ ಸೇರ್ಪಡೆಗೊಳಿಸಬಾರದು ಎಂದು ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ ಹೇಳಿದರು.

ಗಂಗೊಳ್ಳಿ ಗ್ರಾಮವನ್ನು ನೂತನವಾಗಿ ರಚನೆಯಾಗಿರುವ ಬೈಂದೂರು ತಾಲೂಕಿಗೆ ಸೇರ್ಪಡೆಗೊಳಿಸುವುದನ್ನು ವಿರೋಧಿಸಿ ನಾಗರಿಕ ಹೋರಾಟ ಸಮಿತಿ ನೇತೃತ್ವದಲ್ಲಿ ಗಂಗೊಳ್ಳಿ ಗ್ರಾಮ ಪಂಚಾಯತ್ ಎದುರು ನಡೆದ ಸಾಂಕೇತಿಕ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ಗಂಗೊಳ್ಳಿಯ ಜನರಿಗೆ ಕುಂದಾಪುರದೊಂದಿಗೆ ಅನೇಕ ದಶಕಗಳ ಅವಿನಾಭಾವ ಸಂಬಂಧವಿದೆ. ಗಂಗೊಳ್ಳಿಯ ಜನರು ತಮ್ಮ ದೈನಂದಿನ ಚಟುವಟಿಕೆಗಳಿಗೆ ಕುಂದಾಪುರವನ್ನೇ ಅವಲಂಬಿಸಿದ್ದಾರೆ. ಕುಂದಾಪುರಕ್ಕೆ ಸಾರಿಗೆ ವ್ಯವಸ್ಥೆ ಕೂಡ ಉತ್ತಮವಾಗಿದೆ. ಗಂಗೊಳ್ಳಿ-ಕುಂದಾಪುರ ನಡುವೆ ಸೇತುವೆ ನಿರ್ಮಾಣಗೊಂಡಲ್ಲಿ ಗಂಗೊಳ್ಳಿ ಜನರು ಕೇವಲ ಒಂದುವರೆ ಕಿಮೀ ದೂರ ಕ್ರಮಿಸಿದರೆ ಕುಂದಾಪುರ ತಲುಪಬಹುದು. ಬೈಂದೂರಿನಲ್ಲಿ ತಾಲೂಕು ಕೇಂದ್ರ ನಿರ್ಮಾಣಗೊಂಡರೆ ಅನಾನುಕೂಲಗಳೇ ಹೆಚ್ಚು. ಹೀಗಾಗಿ ಗಂಗೊಳ್ಳಿ ಗ್ರಾಮವನ್ನು ಕುಂದಾಪುರ ತಾಲೂಕಿನಲ್ಲಿಯೇ ಉಳಿಸಿಕೊಳ್ಳಬೇಕು. ಗಂಗೊಳ್ಳಿ ಗ್ರಾಮವನ್ನು ಬೈಂದೂರು ತಾಲೂಕಿಗೆ ಸೇರ್ಪಡೆಗೊಳಿಸುವ ನಿರ್ಧಾರ ಕೈಗೊಂಡಲ್ಲಿ ಗ್ರಾಮಸ್ಥರೆಲ್ಲರೂ ಒಟ್ಟುಗೂಡಿ ಸಂಘಟಿತ ಹೋರಾಟ ನಡೆಸಲಾಗುವುದು ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ತಾಪಂ ಸದಸ್ಯ ಸುರೇಂದ್ರ ಖಾರ್ವಿ, ಗಂಗೊಳ್ಳಿ ಜಮಾತುಲ್ಲ ಮುಸ್ಲಿಮಿನ್ ಅಧ್ಯಕ್ಷ ಜಿ.ಮಹಮ್ಮದ್ ರಫೀಕ್, ಹಿಂದೂ ಜಾಗರಣ ವೇದಿಕೆಯ ಉಡುಪಿ ಜಿಲ್ಲಾ ಸಹಸಂಚಾಲಕ ಟಿ.ವಾಸುದೇವ ದೇವಾಡಿಗ, ಗ್ರಾಪಂ ಮಾಜಿ ಸದಸ್ಯ ಉಮಾನಾಥ ದೇವಾಡಿಗ, ಗ್ರಾಪಂ ಸದಸ್ಯರಾದ ಮುಜಾಹಿದ್ ನಾಕುದಾ, ನ್ಯಾಯಾಲಯದ ನಿವೃತ್ತ ಶಿರಸ್ತೇದಾರ್ ಜಿ.ಭಾಸ್ಕರ ಕಲೈಕಾರ್, ಗಂಗೊಳ್ಳಿ ಚರ್ಚಿನ ಆಡಳಿತ ಮಂಡಳಿ ಸದಸ್ಯೆ ಪ್ರೀತಿ ಫೆರ್ನಾಂಡಿಸ್, ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ಎಂ.ಜಿ.ರಾಘವೇಂದ್ರ ಭಂಡಾರ್‌ಕಾರ್ ಮೊದಲಾದವರು ಮಾತನಾಡಿ ಗಂಗೊಳ್ಳಿಯನ್ನು ಬೈಂದೂರು ತಾಲೂಕಿಗೆ ಸೇರ್ಪಡೆಗೊಳಿಸದಂತೆ ಸಂಬಂಧಪಟ್ಟ ಶಾಸಕರು, ಜನಪ್ರತಿನಿಧಿಗಳ ಮೂಲಕ ಸರಕಾರದ ಮೇಲೆ ಒತ್ತಡ ಹೇರಬೇಕು. ಸರಕಾರವನ್ನು, ಆಡಳಿತವನ್ನು ಎಚ್ಚರಿಸುವ ದೃಷ್ಟಿಯಿಂದ ಗಂಗೊಳ್ಳಿಯಲ್ಲಿ ಬೃಹತ್ ಆಂದೋಲನ ರೂಪಿಸಬೇಕು. ಗಂಗೊಳ್ಳಿ ಗ್ರಾಮವು ಕುಂದಾಪುರ ತಾಲೂಕಿನಲ್ಲಿ ಉಳಿಯುವ ತನಕ ಹೋರಾಟ ನಡೆಯಬೇಕು ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಇದೇ ಸಂದರ್ಭ ಉಡುಪಿ ಜಿಲ್ಲಾಧಿಕಾರಿಯವರಿಗೆ ಮನವಿಯನ್ನು ಗಂಗೊಳ್ಳಿ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಸೀತಾರಾಮ ಶೆಟ್ಟಿ ಮತ್ತು ಗ್ರಾಮ ಕರಣಿಕ ರಾಘವೇಂದ್ರ ದೇವಾಡಿಗ ಅವರಿಗೆ ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಎಚ್.ಎಸ್.ಚಿಕ್ಕಯ್ಯ ಪೂಜಾರಿ ಸಲ್ಲಿಸಿದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಿ.ಮಾಧವ, ಗಂಗೊಳ್ಳಿ ಗ್ರಾಪಂ ಸದಸ್ಯರು, ಗಂಗೊಳ್ಳಿ ಗ್ರಾಮದ ವಿವಿಧ ಸಂಘ ಸಂಸ್ಥೆಗಳ, ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.

ನಾಗರಿಕ ಹೋರಾಟ ಸಮಿತಿ ಸಂಚಾಲಕ ಬಿ.ರಾಘವೇಂದ್ರ ಪೈ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗ್ರಾಪಂ ಸದಸ್ಯ ಬಿ.ಲಕ್ಷ್ಮೀಕಾಂತ ಮಡಿವಾಳ ವಂದಿಸಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಗಂಗೊಳ್ಳಿಯನ್ನು ಕುಂದಾಪುರ ತಾಲೂಕಿನಲ್ಲಿ ಉಳಿಸಿಕೊಳ್ಳಲು ಪಕ್ಷಾತೀತ, ಜಾತ್ಯಾತೀತ ಸಂಘಟಿತ ಹೋರಾಟ ನಡೆಸಲು ಎಲ್ಲರೂ ಸಹಕಾರ ನೀಡಬೇಕು. ಈ ವಿಚಾರದಲ್ಲಿ ಆರಂಭದಲ್ಲೇ ಎಚ್ಚೆತ್ತುಕೊಂಡ ಹೋರಾಟ ನಡೆಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಗಂಗೊಳ್ಳಿ ನಾಗರಿಕರು ಪಶ್ಚಾತ್ತಾಪ ಪಡಬೇಕಾದಿತು. ಹೀಗಾಗಿ ಗ್ರಾಮಸ್ಥರು ಏಕ ಮನಸ್ಸಿನಿಂದ ಗಂಗೊಳ್ಳಿ ಗ್ರಾಮದ ಉಳಿವು ಹಾಗೂ ಅಭಿವೃದ್ಧಿಗೆ ಕೈಜೋಡಿಸಿ ಹೋರಾಟಕ್ಕೆ ಸಹಕಾರ ನೀಡಬೇಕು – ಪ್ರೀತಿ ಫೆರ್ನಾಂಡಿಸ್, ಗಂಗೊಳ್ಳಿ ಚರ್ಚಿನ ಆಡಳಿತ ಮಂಡಳಿ ಸದಸ್ಯೆ.

ಗಂಗೊಳ್ಳಿಯನ್ನು ಕುಂದಾಪುರ ತಾಲೂಕಿನಲ್ಲಿ ಉಳಿಸಿಕೊಳ್ಳಲು ನಡೆಸುವ ಎಲ್ಲಾ ಹೋರಾಟಕ್ಕೆ ಬೆಂಬಲ ನೀಡಲಾಗುವುದು. ಗ್ರಾಮಸ್ಥರು ಜಾತಿ ಮತ ಪಕ್ಷಬೇಧ ಮರೆತು ಹೋರಾಟದಲ್ಲಿ ಪಾಲ್ಗೊಳ್ಳಬೇಕು. ಗಂಗೊಳ್ಳಿ ಗ್ರಾಮವು ಕುಂದಾಪುರ ತಾಲೂಕಿನಲ್ಲಿ ಉಳಿಯುವ ತನಕ ಹೋರಾಟ ನಿಲ್ಲಬಾರದು – ಜಿ.ಮಹಮ್ಮದ್ ರಫೀಕ್, ಅಧ್ಯಕ್ಷ, ಗಂಗೊಳ್ಳಿ ಜಮಾತುಲ್ಲ ಮುಸ್ಲಿಮಿನ್.

ಮುಂದಿನ ದಿನಗಳಲ್ಲಿ ಗಂಗೊಳ್ಳಿ ಗ್ರಾಮವನ್ನು ಬೈಂದೂರು ತಾಲೂಕಿಗೆ ಸೇರ್ಪಡೆಗೊಳಿಸುವುದಿಲ್ಲ ಎಂಬುದಕ್ಕೆ ಯಾವುದೇ ಖಾತ್ರಿಯಿಲ್ಲ. ಸರಕಾರದ ಹಾಗೂ ಸಂಬಂಧಪಟ್ಟ ಜನಪ್ರತಿನಿಧಿಗಳ ಮೇಲೆ ನಿರಂತರ ಒತ್ತಡ ಹೇರುವ ದೃಷ್ಟಿಯಿಂದ ಪ್ರತಿಭಟನೆ, ಸಹಿ ಸಂಗ್ರಹ ಅಭಿಯಾನ ಸಹಿತ ವಿವಿಧ ರೀತಿಯ ಹೋರಾಟ ಸಂಘಟಿಸಬೇಕು. ಸಂಬಂಧಪಟ್ಟ ಇಲಾಖಾಧಿಕಾರಿಗಳಿಂದ ಲಿಖಿತ ಭರವಸೆ ದೊರೆಯುವ ತನಕ ಗಂಗೊಳ್ಳಿ ಗ್ರಾಮಸ್ಥರು ಹೋರಾಟ ನಡೆಸುವುದು ಅನಿವಾರ್ಯ – ಸುರೇಂದ್ರ ಖಾರ್ವಿ, ತಾಪಂ ಸದಸ್ಯ.

Exit mobile version