Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಸೂಪರ್‌ ಸ್ಪೆಶಾಲಿಟಿ ಮಹಿಳಾ, ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಸಿದ್ಧ – ಜಿ. ಶಂಕರ್‌

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಮಹಿಳೆಯರು ಹಾಗೂ ಮಕ್ಕಳ ಆರೋಗ್ಯ ಕಾಳಜಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸರಕಾರ ಅವಕಾಶ ನೀಡಿದಲ್ಲಿ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಮಹಿಳಾ ಮತ್ತು ಮಕ್ಕಳ ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸದಾ ಸಿದ್ಧ. ಸ್ಥಳಾವಕಾಶ ಕಲ್ಪಿಸಿಕೊಟ್ಟಲ್ಲಿ ಈಗಿರುವ ಲಕ್ಷ್ಮೀ ಸೋಮ ಬಂಗೇರ ಹೆರಿಗೆ ವಾರ್ಡನ್ನು ಇನ್ನಷ್ಟು ವಿಸ್ತರಿಸಿ ಇನ್ನೂ ನೂರು ಹಾಸಿಗೆಗಳ ವಾರ್ಡುಗಳ ಕೊಡುಗೆ ನೀಡಲು ಸಿದ್ಧ ಎಂದು ನಾಡೋಜ ಡಾ| ಜಿ. ಶಂಕರ್‌ ಹೇಳಿದರು.

ಅವರು ಕುಂದಾಪುರ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಗೆ ಡಾ| ಜಿ. ಶ‌ಂಕರ್‌ ಫ್ಯಾಮಿಲಿ ಟ್ರಸ್ಟ್‌ನಿಂದ ಕೊಡುಗೆಯಾಗಿ ನೀಡಲಾದ ಸುಮಾರು 6 ಲಕ್ಷ ರೂ. ವೆಚ್ಚದ ಡಯಾಲಿಸಿಸ್‌ ಯಂತ್ರವನ್ನು ಹಸ್ತಾಂತರಿಸಿ ಮಾತನಾಡಿದರು.

ಬಹಳಷ್ಟು ಬಡ ಜನರು ಚಿಕಿತ್ಸೆಗೆ ಆಗಮಿಸುವ ಕುಂದಾಪುರದ ಸರಕಾರಿ ಆಸ್ಪತ್ರೆಯಲ್ಲಿ ಈಗಾಗಲೇ ಡಾ| ಜಿ. ಶ‌ಂಕರ್‌ ಫ್ಯಾಮಿಲಿ ಟ್ರಸ್ಟ್‌ನಿಂದ ಹೆರಿಗೆ ವಾರ್ಡಿನ ಕೊಡುಗೆ ಹಾಗೂ ನಿರ್ವಹಣೆ ಮಾಡುತ್ತಾ ಬಂದಿದ್ದು, ಸೂಕ್ತ ಸ್ಥಳಾವಕಾಶ ನೀಡಿದ್ದಲ್ಲಿ ಹೆರಿಗೆ ವಾರ್ಡನ್ನು ಇನ್ನಷ್ಟು ವಿಸ್ತರಿಸುವ ಚಿಂತನೆ ಇದೆ. ಸರಕಾರ ಹಾಗೂ ಉಸ್ತುವಾರಿ ಸಚಿವರ ಸಹಕಾರದಿಂದ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಸೂಪರ್‌ ಸ್ಪೆ³ಶಾಲಿಟಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.

ಕುಂದಾಪುರ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಉದಯಶಂಕರ್‌ ಪ್ರಸ್ತಾವನೆಗೈದರು. ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ಗಣೇಶ್‌ ಕಾಂಚನ್‌, ಕಾರ್ಯದರ್ಶಿ ರಾಘವೇಂದ್ರ ಬೈಕಾಡಿ, ನಿಕಟಪೂರ್ವ ಅಧ್ಯಕ್ಷ ಸದಾನಂದ ಬಳ್ಕೂರು, ಮಾಜಿ ಅಧ್ಯಕ್ಷರಾದ ಜಯ ಸಿ.ಕೋಟ್ಯಾನ್‌, ಸತೀಶ್‌ ಎಂ. ನಾಯಕ್‌, ಮುಖಂಡರಾದ ಗೋಪಾಲ ಪುತ್ರನ್‌, ಜಗದೀಶ್‌, ಸುಧಾಕರ ಕಾಂಚನ್‌, ದಿವಾಕರ್‌ ಮೆಂಡನ್‌, ಶ್ರೀಧರ್‌ ಮೆಂಡನ್‌, ರವೀಶ್‌, ಶ್ರೀಧರ್‌, ಶೈಲೇಶ್‌ ಮೊದಲಾದವರು ಉಪಸ್ಥಿತರಿದ್ದರು. ಸಮಾರಂಭದ ಬಳಿಕ ಡಾ| ಜಿ. ಶಂಕರ್‌ ಅವರು ಹೆರಿಗೆ ವಾರ್ಡುಗಳಿಗೆ ಭೇಟಿ ಮಾಡಿ ರೋಗಿಗಳ ಆರೋಗ್ಯ ವಿಚಾರಿಸಿದರು.

 

Exit mobile version