Kundapra.com ಕುಂದಾಪ್ರ ಡಾಟ್ ಕಾಂ

ನಾಗೂರು: ಭಗವಂತನ ಆರಾಧನೆ, ನಾಮಸ್ಮರಣೆಯಿಂದ ಸಮಾಜದಲ್ಲಿ ಶಾಂತಿ ಸಮಾಧಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಭಗವಂತ ಸರ್ವವ್ಯಾಪಿಯಾದರೂ ಕಣ್ಣಿಗೆ ಕಾಣಲಾರನು. ಆತನಲ್ಲಿ ನಮ್ಮ ಸುಖ-ಕಷ್ಟಗಳನ್ನು ನಿವೇದಿಸಿಕೊಳ್ಳುವ ಉದ್ದೇಶದಿಂದ ಪರ್ಯಾಯವಾಗಿ ದೇವರ ಮೂರ್ತಿ ಪ್ರತಿಷ್ಠಾಪಿಸಿ ಆರಾಧಿಸಿ ಭಜಿಸುವ ನೆಲೆಯಲ್ಲಿ ಶಾಸ್ತ್ರೀಯವಾಗಿ ನಿರ್ಮಾಣ ಮಾಡಿಕೊಂಡ ಧಾರ್ಮಿಕ ಚೌಕಟ್ಟಿನ ಭವ್ಯವಾದ ವ್ಯವಸ್ಥೆಯೇ ದೇವಾಲಯ ಎಂದು ಶೃಂಗೇರಿ ಕಮ್ಮರಡಿಯ ವೇಮೂ ಲಕ್ಷ್ಮೀನಾರಾಯಣ ಸೋಮಯಾಜಿ ಹೇಳಿದರು.

ನಾಗೂರು ಶ್ರೀ ವೀರ ಹನುಮಾನ್ ದೇವಸ್ಥಾನದ ಆವರಣದಲ್ಲಿ ನೂತನ ನಿರ್ಮಾಣದ ಶ್ರೀ ಉಮಾಮಹೇಶ್ವರ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇಗುಲಗಳ ಅಷ್ಟಬಂಧ-ಬ್ರಹ್ಮಕಲಶೋತ್ಸವ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.

ಧರ್ಮವನ್ನು ತಿಳಿಯುತ್ತಲೇ ಆಚರಣೆಯಲ್ಲಿಯೂ ತರಬೇಕು. ಸಮರ್ಪಣಾ ಮನೋಭಾವದಿಂದ ಕಾರ್ಯತತ್ವರಾಗುವುದು ಧಾರ್ಮಿಕ ಮನೋಭಾವದ ಮೊದಲ ಹೆಜ್ಜೆಯಾಗಿದೆ. ಧರ್ಮವು ಒಬ್ಬೊಬ್ಬ ವ್ಯಕ್ತಿಗೆ ಒಂದೊಂದು ಸನ್ನಿವೇಶದಲ್ಲಿ ಒಂದೊಂದು ರೀತಿಯಲ್ಲಿ ದಾರಿ ದೀಪವಾಗಬಲ್ಲುದು. ಸಂಸ್ಕೃತಿ, ಸಂಸ್ಕಾರಗಳನ್ನು ರಕ್ಷಣೆ ಮಾಡುವುದರ ಜತೆಗೆ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ನಮ್ಮ ಪರಮೋನ್ನತಿಗಾಗಿ ಪ್ರಾರ್ಥಿಸಬೇಕು. ಭಗವಂತನ ಆರಾಧನೆ, ನಾಮಸ್ಮರಣೆ ಮಾಡಿದರೆ ಸಮಾಜದಲ್ಲಿ ಶಾಂತಿ ಸಮಾಧಾನ ನೆಲೆಸುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ಪಿ. ಸುಖಾನಂದ ಶೆಟ್ಟಿ ಮಾತನಾಡಿ, ಸಮಾಜದಲ್ಲಾಗುವ ವ್ಯತ್ಯಾಸ ಸರಿಪಡಿಸುವ ಹೊಣೆ ತಾಯಂದಿರ ಮೇಲಿದೆ. ವ್ಯಕ್ತಿ ಹಾಗೂ ವ್ಯಕ್ತಿತ್ವದ ನಿರ್ಮಾಣವೇ ಉತ್ತಮ ಸಮಾಜದ ನಿರ್ಮಾಣ. ಸಂಸ್ಕಾರದ ಶಿಕ್ಷಣ ಮನೆಯಿಂದಲೇ ಮೊದಲು ಪ್ರಾರಂಭವಾಗುವುದರಿಂದ ತಾಯಂದಿರು ತಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಜೀವನ ಎಂಬ ಶಿಕ್ಷಣದ ಅರಿವು ನೀಡುವುದರ ಮೂಲಕ ರಾಷ್ಟ್ರಕ್ಕೆ ಪೂರಕವಾಗಿ ಬೆಳೆಯುವಂತಾಗಲು ಯೋಚಿಸಬೇಕು. ಇದರಿಂದ ಸಶಕ್ತ ಸಮಾಜದ ನಿರ್ಮಾಣ ಸಾಧ್ಯ ಎಂದರು.

ಕೊಲ್ಲೂರು ದೇವಳದ ಮಾಜಿ ಆಡಳಿತ ಧರ್ಮದರ್ಶಿ ಬಿ. ಎಂ. ಸುಕುಮಾರ್ ಶೆಟ್ಟಿ ಧಾರ್ಮಿಕ ಸಭೆ ಉದ್ಘಾಟಿಸಿದರು. ಉದ್ಯಮಿಗಳಾದ ಎಚ್. ಜಯಶೀಲ ಶೆಟ್ಟಿ ಘಟಪ್ರಭಾ, ಎನ್. ಡಿ. ಚಂದನ್ ಮುಂಬೈ, ಧಗ್ರಾಯೋ ಕೃಷಿ ಅಧಿಕಾರಿ ಚೇತನ್ ಕುಮಾರ್, ಹನುಮಾನ್ ದೇವಳದ ಸಂಚಾಲಕ ರಾಮಚಂದ್ರ ಭಟ್, ಅಡಳಿತ ಮೊಕ್ತೇಸರ ಗಿರಿ. ಎಸ್. ಶೆಟ್ಟಿ ಉಪಸ್ಥಿತರಿದ್ದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನವೀನಚಂದ್ರ ಉಪ್ಪುಂದ ಸ್ವಾಗತಿಸಿ, ನಾಗೇಶ ಶೇಟ್ ವಂದಿಸಿದರು.

Exit mobile version