Kundapra.com ಕುಂದಾಪ್ರ ಡಾಟ್ ಕಾಂ

ಶಿರೂರಿನಲ್ಲಿ ಸಚಿವರುಗಳಿಂದ ಭರಪೂರ ಭರವಸೆ. ಅಭಿವೃದ್ಧಿ ಪರ ಸಮಾರಂಭಕ್ಕೆ ಸಾಕ್ಷಿಯಾಯ್ತು ಶಿರೂರು ಉತ್ಸವ

ಶಿರೂರಿಗೆ ಹರಿದು ಬಂದ ಸಚಿವರ ದಂಡು, ಆದರ್ಶಗ್ರಾಮ ಯೋಜನೆಯಡಿಯಲ್ಲಿ ಊರಿನ ಅಭಿವೃದ್ಧಿ


ಬೈಂದೂರು: ಯಾವುದೇ ಊರಿನ ಅಭಿವೃದ್ಧಿಯಾಗಬೇಕಾದರೂ ಖಾಸಗಿ ವ್ಯಕ್ತಿಗಳ ಸಹಭಾಗಿತ್ವ ಅಗತ್ಯವಾದದು. ಸರಕಾರದೊಂದಿಗೆ ಖಾಸಗಿ ವ್ಯಕ್ತಿಗಳು ಕೈಜೋಡಿಸಿದಾಗಲೇ ಸಾಮಾಜಿಕ ಕಾರ್ಯಗಳು ಯಶಸ್ವಿಯಾಗಲು ಸಾಧ್ಯ ಎಂದು ಕರ್ನಾಟಕ ಸರಕಾರದ ಪಶಸಂಗೋಪನಾ ಸಚಿವ ಟಿ. ಬಿ. ಜಯಚಂದ್ರ ಹೇಳಿದರು.

ಅವರು ಶಿರೂರು ಉತ್ಸವ 2015ರ ಎರಡನೇ ದಿನದ ಕಾರ್ಯಕ್ರಮದಲ್ಲಿ ಶಿರೂರಿನ ಅರ್ಹ ಫಲಾನುಭವಿಗಳಿಗೆ ಜಾನುವಾರುಗಳನ್ನು ದಾನ ನೀಡಿ ಮಾತನಾಡಿದರು. ಹಿಂದೂ ಧರ್ಮದಲ್ಲಿ ಗೋದಾನ ಶ್ರೇಷ್ಠವಾದದ್ದು. ಊರಿನ ಉದ್ಯಮಿಯೊಬ್ಬರು ಬಡವರ ಜೀವನ ನಿರ್ವಹಣೆಗಾಗಿ ಗೋವುಗಳನ್ನು ನೀಡುತ್ತಿರುವ ಕಾರ್ಯ ಶ್ಲಾಘನೀಯ. ಮಂದಿನ ದಿನಗಳಲ್ಲಿ ಗೋವುಗಳ ಚಿಕಿತ್ಸೆಗಾಗಿ ಬಹುಕಾಲದ ಬೇಡಿಕೆಯಾದ ಪಶುಆಸ್ಪತ್ರೆಯನ್ನು ನೀಡುವುದಾಗಿ ಅವರು ಭರವಸೆ ನೀಡಿದ ಅವರು ದೇವಸ್ಥಾನಗಳನ್ನು ಕಟ್ಟುವುದರಿಂದ ನಮಗೆ ದೇವರು ಹತ್ತಿರವಾಗುವುದಿಲ್ಲ ಬದಲಿಗೆ ಸಮಾಜದ ಕಟ್ಟಕಡೆಯ ಜನರಿಗೆ ಸಹಾಯ ಮಾಡುವ ಮೂಲಕ ದೇವರು ಹತ್ತಿರವಾಗುತ್ತಾನೆ ಎಂದರು.

ಈ ಭಾಗದಲ್ಲಿ ಪ್ರಾಯೋಗಿಕವಾಗಿ ಶುದ್ಧ ಕುಡಿಯುವ ನೀರಿನ ಘಟಕ

ಸಮಾರಂಭದಲ್ಲಿ ಅತಿಥಿಯಾಗಿದ್ದ ಕರ್ನಾಟಕ ಸರಕಾರದ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಹೆಚ್. ಕೆ. ಪಾಟೀಲ್ ಮಾತನಾಡಿ ಸಮದ್ರದ ತಟದಲ್ಲಿಯೇ ಇರುವ ಜನರಿಗೆ ಕುಡಿಯುವ ನೀರಿನದ್ದು ಬಹುದೊಡ್ಡ ಸಮಸ್ಯೆ. ಇದಕ್ಕೆ ಪರಿಹಾರೋಪಾಯವಾಗಿ ಸಮುದ್ರದ ನೀರನ್ನು ಶುದ್ಧೀಕರಿಸಿ ನೀರಿನ ಕೊರತೆಯನ್ನು ನೀಗಿಸುವ ಕೆಲಸವನ್ನು ಮಾಡಬೇಕಾಗಿದೆ. ಪ್ರಯೋಗಾರ್ಥವಾಗಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಶಿರೂರಿನಲ್ಲಿಯೇ ಸಮುದ್ರದ ನೀರನ್ನು ಶುದ್ಧೀಕರಿಸುವ ಘಟಕ ಆರಂಭಿಸುವ ಭರವಸೆ ನೀಡಿದರು.

ದೇಶದ ಹಳ್ಳಿಗರಿಗೆ ಒಳ್ಳೆಯ ಜೀವನವನ್ನು ನೀಡಬೇಕು ಎಂದು ನಮ್ಮ ಜನ ಯೋಚಿಸಿದವರಲ್ಲ. ಪ್ರತಿ ಹಳ್ಳಿಗನಿಗೂ ಶುದ್ಧ ಕುಡಿಯುವ ನೀರು, ತಂತ್ರಜ್ಞಾನದ ಬಳಕೆ ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳ ಓದಗಿಸುವ ಮೂಲಕ ಸಮಾನತೆಯನ್ನು ಸಾಧಿಸಬೇಕಿದೆ. ಸಂಸದರ ಆದರ್ಶಗ್ರಾಮ ಯೋಜನೆ ಹಾಗೂ ಶಾಸಕರ ಗ್ರಾಮ ವಿಕಾಸ ಯೋಜನೆಯ ಸಮರ್ಪಕ ಅನುಷ್ಠಾನದಿಂದ ಇದು ಸಾಧ್ಯವಾಗಲಿದೆ. ಕೇಂದ್ರ ಸರಕಾರವು ಆದರ್ಶಗ್ರಾಮ ಯೋಜನೆಯಡಿಯಲ್ಲಿ ಕನಿಷ್ಠ 5ಕೋಟಿಯನ್ನು ಒದಗಿಸುವಂತಾದರೇ, ಯೋಜನೆಯು ಸಂಪೂರ್ಣವಾಗಿ ಯಶಸ್ವಿಯಾಗುತ್ತದೆ. ರಾಜ್ಯ ಸರಕಾರದ ಶಾಸಕರ ಗ್ರಾಮ ವಿಕಾಸ ಯೋಜನೆಯ ಮೂಲಕ ಶಾಸಕರು ಐದು ಗ್ರಾಮಗಳನ್ನು ಕೈಗೆತ್ತಿಕೊಳ್ಳಬಹುದಾಗಿದ್ದು, ಪ್ರತಿ ಗ್ರಾಮಕ್ಕೆ 75ಲಕ್ಷ ಅನುದಾನ ದೊರೆಯುತ್ತಲಿದೆ ಎಂದರು.

ಬಳಿಕ ಅರಣ್ಯ ಸಚಿವ ರಮಾನಾಥ ರೈ ಮಾತನಾಡಿ ಕರಾವಳಿಗರಿಗೆ ಸಿ.ಆರ್.ಝಡ್ ಗಡಿ 200ಮೀ ದೂರದವರೆಗೆ ಇರುವುದರಿಂದ ಸಮಸ್ಯೆಯಾಗಿದೆ. ಗೋವಾ ಕೇರಳದಂತೆ ಅವರ ಮಿತಿಯನ್ನು 100ಮೀ. ಗುರುತಿಸುಲು ಕೇಂದ್ರ ಸರಕಾರ ಅನುವು ಮಾಡಿಕೊಡಬೇಕಾಗಿದೆ. ಕಸ್ತೂರಿರಂಗನ್ ವರದಿಯಲ್ಲಿ ಇಲ್ಲದೇ ಇರುವ ವಿಚಾರಗಳು ಚರ್ಚಿಗೆ ಬಂದು ದಾರಿ ತಪ್ಪಿಸುವ ಕೆಲಸ ಮಾಡಲಾಗಿತ್ತು ಎಂದು ವಿಷಾದ ವ್ಯಕ್ತಪಡಿಸಿದರು.

ಆರೋಗ್ಯ ಸಚಿವ ಯು.ಟಿ ಖಾದರ್ ಮಾತನಾಡಿ ಇಂದು ಜನರಲ್ಲಿ ಸಾಮಾಜಿಕ ಮನೋಭಾವ ಕಡಿಮೆಯಾಗುತ್ತಿದೆ. ಯಾವುದೇ ಕಾರ್ಯಕ್ರಮದಲ್ಲಾದರೂ ಜನಸಾಮಾನ್ಯವರು ಸಕ್ರೀಯವಾಗಿ ತೊಡಗಿಸಿಕೊಂಡು ಊರಿನ ಅಭಿವೃದ್ಧಿಯಲ್ಲಿ ಭಾಗಿದಾರರಾಗಬೇಕು. ಸ್ವಚ್ಚತೆ ಹಾಗೂ ಆರೋಗ್ಯದ ಕಡೆಗೂ ಜನರು ವಿಶೇಷವಾದ ಗಮನ ಹರಿಸಬೇಕು ಎಂದರು.

ಬೈಂದೂರು ಶಾಸಕ ಗೋಪಾಲ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಜಿಲ್ಲಾ ಉಸ್ತುವಾರಿ ಸಚಿವ ವಿಜಯಕುಮಾರ್ ಸೊರಕೆ, ವಿಧಾನ ಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯ ರಾಜು ಪೂಜಾರಿ, ಸಾವಿತ್ರಿ ಅಳ್ವೆಗದ್ದೆ ಶಿರೂರು ವೆಲ್ಫೇರ್ ಟ್ರಸ್ಟ್ ನ ಸೈಯದ್ ಅಬ್ದುಲ್ ಖಾದರ್ ಬಾಶು, ಗ್ರಾ,ಪಂ. ಅಧ್ಯಕ್ಷ ರಾಮು ಮೇಸ್ತ, ಕಾಂಗ್ರೆಸ್ ಮುಖಂಡ ಎಂ. ಎ. ಗಪೂರ್ ಮೊದಲಾದವರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಹಾಗೂ ಶಿರೂರು ವೆಲ್ಫೇರ್ ಟ್ರಸ್ಟ್ ನ ಅಧ್ಯಕ್ಷ ಸೈಯದ್ ಅಬ್ದುಲ್ ಖಾದರ್ ಬಾಶು ಅವರನ್ನು ಗೌರವಿಸಲಾಯಿತು.
ಶಿರೂರು ಉತ್ಸವವ ಸಂಯೋಜಕ ಅರುಣಕುಮಾರ್ ಶಿರೂರು ಕಾರ್ಯಕ್ರಮವನ್ನು ನಿರ್ವಹಿಸಿ, ಕಾರ್ಯದರ್ಶಿ ಪುಪ್ಪರಾಜ ಶೆಟ್ಟಿ ವಂದಿಸಿದರು.

Exit mobile version