ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರು ಆಕ್ಷೇಪಾರ್ಹ ಕಾಮೆಂಟ್‍ಗಳನ್ನು ಹಾಕಿದರೆ ಅವರು ಶಿಕ್ಷಾರ್ಹ ಅಪಾರಾಧ ಮಾಡಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಗೆ ತಿಳಿಸಿದೆ.
ಆಕ್ಷೇಪಾರ್ಹ ಕಾಮೆಂಟ್ ಹಾಕಿದ ಮಾತ್ರಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯದ ದುರ್ಬಳಕೆ ಆಗಿದೆ ಎಂದು ಪರಿಗಣಿಸುವುದಿಲ್ಲ. ಹೀಗಾಗಿ ಆಕ್ಷೇಪಾರ್ಹ ಕಾಮೆಂಟ್‍ಗಳನ್ನು ದಾಖಲಿಸಿದರನ್ನು ಐಟಿ ಕಾಯ್ದೆಯಡಿ ಬಂಧಿಸುವುದಿಲ್ಲ ಎಂದು ಸುಪ್ರೀಂಗೆ ಕೇಂದ್ರ ಸರ್ಕಾರ ಹೇಳಿದೆ.
ಮಾಹಿತಿ ತಂತ್ರಜ್ಞಾನದ 66ಎ ಕಾಯ್ದೆಯ ಪ್ರಕಾರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಿಯ ಬಗ್ಗೆ ಅವಹೇಳನಕಾರಿಯಾಗಿ ನಿಂದಿಸುವುದು ಅಪರಾಧ. ಅವರನ್ನು ಬಂಧಿಸುವ ಅವಕಾಶವಿತ್ತು. ಈ ಕಾಯ್ದೆಯ ಪ್ರಕಾರ ದೇಶದಲ್ಲಿ ಹಲವು ಮಂದಿಯನ್ನು ಬಂಧಿಸಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಜನರು ವ್ಯಾಪಕವಾಗಿ ಟೀಕಿಸಿದ್ದರು.
ಸಂವಿಧಾನದ ಕಲಂ 19(1)ರ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 66ಎಯಿಂದ ಯಾವುದೇ ರೀತಿ ಧಕ್ಕೆ ಆಗದು. ಕಲಂ 19 (1) ಅಡಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಪರಿಪೂರ್ಣ ಸ್ವಾತಂತ್ರ್ಯ ನೀಡಿಲ್ಲ. ಕೆಲ ನಿರ್ಬಂಧಗಳನ್ನೂ ವಿಧಿಸಲಾಗಿದೆ ಎಂದು ಸಂಪರ್ಕ , ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಈ ಹಿಂದೆ ಸುಪ್ರೀಂಗೆ ಪ್ರಮಾಣ ಪತ್ರದಲ್ಲಿ ತಿಳಿಸಿತ್ತು.