Kundapra.com ಕುಂದಾಪ್ರ ಡಾಟ್ ಕಾಂ

ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಗೆ 2 ವರ್ಷ ಸಂಭ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗೊಂಬೆಯಾಟ ಎಂದೊಡನೆ ಮೊದಲು ಕೇಳಿ ಬರುವ ಹೆಸರು ಉಪ್ಪಿನಕುದು. ಕಲಾ ಪ್ರಪಂಚಕ್ಕೆ ‘ಗೊಂಬೆಯಾಟ’ ಎನ್ನುವ ವಿಶಿಷ್ಟ ರೀತಿಯ ಕಲೆಯ ಕೊಡುಗೆಯನ್ನು ಕೊಟ್ಟವರು ಉಪ್ಪಿನಕುದ್ರು ಕಾಮತ್ ಮನೆತನದವರು. ಈ ಬೊಂಬೆಯಾಟ ಕಲೆಗೆ ಸುಮಾರು 350 ವರ್ಷಗಳ ಇತಿಹಾಸವಿದೆ. ಇಂದು ಈ ಕಲೆಯನ್ನು ವಿಶ್ವ ವಿಖ್ಯಾತಗೊಳಿಸಿದವರು ಈ ಮನೆತನದ 6ನೇ ತಲೆಮಾರಿನವರಾದ ಭಾಸ್ಕರ್ ಕೊಗ್ಗ ಕಾಮತ್‌ರು. ಸುದೀರ್ಘ ಇತಿಹಾಸ ಇರುವ ಈ ಗೊಂಬೆಯಾಟವು ಈ ಕಲಾ ಜಗತ್ತಿನಲ್ಲಿ ಶಾಶ್ವತವಾಗಿ ಉಳಿಯಬೇಕೆಂಬ ನಿಟ್ಟಿನಲ್ಲಿ ಗೊಂಬೆಯಾಟ ಅಕಾಡೆಮಿಯನ್ನು ನಿರ್ಮಿಸಿ, ತನ್ಮೂಲಕ ನಿರಂತರವಾಗಿ ಕಲಾ ಚಟುವಟಿಕೆಗಳನ್ನು ನಡೆಸುವ ಕನಸು ಕಂಡು ಅದನ್ನು ಸಾಕಾರಗೊಳಿಸಿಕೊಂಡು ಮುನ್ನಡೆಯುತ್ತಿರುವ ಅಂತರಾಷ್ಟ್ರೀಯ ಯಕ್ಷಗಾನ ಗೊಂಬೆಯಾಟ ಕಲಾವಿದ ಭಾಸ್ಕರ್ ಕೊಗ್ಗ ಕಾಮತ್ ಅವರ ಶ್ರಮದ ಫಲ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಗೆ ಇದೀಗ 2ವರ್ಷ ಸಂಭ್ರಮ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಎ.16 ರಂದು ಮಧ್ಯಾಹ್ನ ೨ಕ್ಕೆ ನಡೆಯುವ 2ನೇ ವಾರ್ಷಿಕ ಆಚರಣೆಯ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ವಹಿಸಲಿದ್ದು, ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್‌ನ ಆಡಳಿತಾಧಿಕಾರಿ ಡಾ. ಹೆಚ್, ಶಾಂತಾರಾಮ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಗೊಂಬೆ ಪ್ರಪಂಚ ಪತ್ರಿಕೆಯನ್ನು ಮಂಗಳೂರಿನ ಕೊಂಕಣಿ ಲ್ಯಾಂಗ್ವೇಜ್ ಎಂಡ್ ಕಲ್ಚರಲ್ ಸೆಂಟರ್‌ನ ಅದ್ಯಕ್ಷ ಬಸ್ತಿ ವಾಮನ ಶೆಣೈ ಅವರು ಬಿಡುಗಡೆಗೊಳಿಸಲಿದ್ದಾರೆ. ರಾಜ್ಯ ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಕೆ. ಗೋಪಾಲ ಪೂಜಾರಿ, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಸಂಸ್ಕೃತ ಕಾಲೇಜಿನ ನಿವೃತ್ತ ಪ್ರಾಂಶುಪಾಲ ವಿ.ಜಿ.ಹೆಗಡೆ, ನಿವೃತ್ತ ಬ್ಯಾಂಕ್ ಮೆನೇಜರ್ ಬಾಬುರಾಯ ಶೆಣೈ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿ, ಏಕವ್ಯಕ್ತಿ ಯಕ್ಷಗಾನ ಕ್ಷೇತ್ರದಲ್ಲಿ ತನ್ನ ಅಪ್ರತಿಮ ಪ್ರತಿಭೆಯ ಮೂಲಕ ಅನನ್ಯ ಕೊಡುಗೆ ನೀಡಿದ ಮಂಟಪ ಪ್ರಭಾಕರ ಉಪಾಧ್ಯಾಯರಿಗೆ ಪ್ರಸ್ಕ್ತ ಸಾಲಿನ ಪ್ರತಿಷ್ಠಿತ ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ ಹಾಗೂ ನಗದು ಪುರಸ್ಕಾರ ದೊರೆಯಲಿದೆ. ಸಾಧಕರಾದ ಚೋಲ್ಪಾಡಿ ದೇವದಾಸ್ ಕಾಮತ್ ಮಂಗಳೂರು, ಸುರೇಶ್ ಪ್ರಭು ಬೆಂಗಳೂರು ಅವರನ್ನು ಗೌರವಿಸಲಾಗುವುದು. ವಿವಿಧ ಸ್ಪರ್ಧಾ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ, ಗೊಂಬೆಯಾಟ ಅಕಾಡೆಮಿ ವಿದ್ಯಾರ್ಥಿಗಳಾದ ಸಂತೋಷ್ ಪ್ರಭು, ಅಭಿಷೇಕ್ ದೇವಾಡಿಗ, ಸುದೀಪ್ ಸೇರುಗಾರ್ ಅವರಿಗೆ ಸನ್ಮಾನ ಹಾಗೂ ಅರ್ಹತಾ ಪತ್ರ ವಿತರಿಸಲಾಗುವುದು ಎಂದು ಅಕಾಡೆಮಿಯ ಅಧ್ಯಕ್ಷ ಭಾಸಕರ ಕೊಗ್ಗ ಕಾಮತ್ ತಿಳಿಸಿದ್ದಾರೆ.

ಅಂತರಾಷ್ಟ್ರೀಯ ಮನ್ನಣೆ : ಉಪ್ಪಿನಕುದ್ರು ಗೊಂಬೆಯಾಟ ಮಂಡಳಿ ಅಂತರಾಷ್ಟ್ರೀಯ ಮನ್ನಣೆಯನ್ನು ಪಡೆದುಕೊಂಡಿದೆ. ಇಲ್ಲಿನ ಗೊಂಬೆಗಳು ಪ್ರಪಂಚದ ವಿವಿಧ ದೇಶಗಳಲ್ಲಿ ಕುಣಿದು ಅಲ್ಲಿನ ಜನರಿಗೆ ಗೊಂಬೆಯಾಟವನ್ನು ಪರಿಚಯಿಸಿ ಬಂದವುಗಳು. ಬೆಲ್ಜಿಯಂ, ಆಸ್ಟ್ರೇಲಿಯಾ, ಜರ್ಮನಿ, ಗ್ರೀಸ್, ಹಾಲೆಂಡ್, ಪಾಕಿಸ್ತಾನ, ಲಂಡನ್, ಜಪಾನ್, ಸ್ವಿಜರ್ಲ್ಯಾಂಡ್, ಸಿಂಗಾಪುರ, ಥೈಲ್ಯಾಂಡ್, ಪ್ರಾನ್ಸ್.. ಮುಂತಾದ ದೇಶದ ಜನರಿಗೆಲ್ಲ ಈಗ ಉಪ್ಪಿನಕುದ್ರು ಊರಿನ ಪರಿಚಯವಿದೆ. ವಿದೇಶದವರು ಉಪ್ಪಿನಕುದ್ರು ಪುಟ್ಟ ಊರಿಗೆ ಬಂದು ಹೋಗುತ್ತಾರೆ ಎನ್ನುವುದು ವಿಶೇಷ ಸಂಗತಿ.

 

► ವಿಶ್ವ ರಂಗಸ್ಥಳದಲ್ಲಿ ಹೆಜ್ಜೆ ಹಾಕಿದ ಉಪ್ಪಿನಕುದ್ರು ಗೊಂಬೆಗಳು –  http://kundapraa.com/?p=1806

 

Exit mobile version