ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶ್ರೀ ಬೊಬ್ಬರ್ಯ ಮತ್ತು ಶ್ರೀ ನಾಗದೇವರ ದೇವಸ್ಥಾನ, ಹಟ್ಟಿಕುದ್ರು ಇದರ ೧೧ನೇ ವರ್ಷದ ವಾರ್ಷಿಕ ಪ್ರತಿಷ್ಠಾ ವರ್ಧಂತಿ ಉತ್ಸವವು ಸಕಲ ಧಾರ್ಮಿಕ ವಿಧಿವಿದಾನಗಳೋಂದಿಗೆ ಸಂಭ್ರಮ ಸಡಗರದಲ್ಲಿ ಜರುಗಿತು.
ಶ್ರೀ ನಾಗ ದೇವರ ಸಂದರ್ಶನ ಸೇವೆ, ಶ್ರೀ ಬೊಬ್ಬರ್ಯ ದೇವರ ಸನ್ನಿಧಿಯಲ್ಲಿ ಮಹಾಪೂಜೆ, ಅನ್ನಸಂತರ್ಪಣೆಯಲ್ಲಿ ಭಕ್ತರು ಪಾಲ್ಗೊಂಡು ವರ್ಷಂಪ್ರತಿಯಂತೆ ಸೇವೆ ಸಲ್ಲಿಸಿದರು.
ಸನ್ಮಾನ : ದೇವಳದ ಪ್ರತಿಷ್ಠಾ ವರ್ಧಂತಿಯ ಅಂಗವಾಗಿ ನಡೆದ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಯಕ್ಷವೇದಿಕೆಯಲ್ಲಿ ಯಕ್ಷ ಧ್ರುವ ಬಿರುದಾಂಕಿತ ಖ್ಯಾತ ಯಕ್ಷಗಾನ ಭಾಗವತ ಸತೀಶ್ ಶೆಟ್ಟಿ ಪಟ್ಲ ಅವರನ್ನು ಬಸ್ರೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಬಿ. ಅಪ್ಪಣ್ಣ ಹೆಗ್ಡೆಯವರು ದೇವಳ ಹಾಗೂ ಹಟ್ಟಿಕುದ್ರು ಊರಿನ ಹತ್ತು ಸಮಸ್ತರ ವತಿಯಿಂದ ಸನ್ಮಾನಿಸಿದರು.
ಸನ್ಮಾನವನ್ನು ನೆರವೇರಿಸಿದ ಅಪ್ಪಣ್ಣ ಹೆಗ್ಡೆಯವರು ಮಾತನಾಡಿ ಹಟ್ಟಿಕುದ್ರುವಿನ ಶ್ರೀ ಬೊಬ್ಬರ್ಯ ಮತ್ತು ಶ್ರೀ ನಾಗದೇವರ ದೇವಸ್ಥಾನದಲ್ಲಿ ಯಕ್ಷರಂಗದಲ್ಲಿ ಅಪ್ರತಿಮ ಸಾಧನೆ ಮಾಡಿರುವ ಪ್ರತಿಭಾನ್ವಿತ ಭಾಗವತರನ್ನು ಗೌರವಿಸುವ ಮೂಲಕ ಕಲಾಮಾತೆಯ ಸೇವೆಯನ್ನು ಮಾಡಿದ್ದಾರೆ. ಇಲ್ಲಿನ ಸನ್ಮಾನದ ಪ್ರೇರಣೆ ಸತೀಶ್ ಶೆಟ್ಟಿಯವರನ್ನು ಕಲಾ ಜಗತ್ತಿನಲ್ಲಿ ಇನ್ನಷ್ಟು ಎತ್ತರಕ್ಕೇರಿಸಲಿ ಎಂದು ಶುಭಹಾರೈಸಿದರು.
ಸನ್ಮಾನಕ್ಕೆ ಉತ್ತರಿಸಿದ ಸತೀಶ್ ಶೆಟ್ಟಿ ಪಟ್ಲ ಅವರು, ಹಟ್ಟಿಕುದ್ರು ಗ್ರಾಮಸ್ಥರು ಅಭಿಮಾನದಿಂದ ನೀಡಿದ ಸನ್ಮಾನ ಪಡೆದು ಹೃದಯ ತುಂಬಿ ಬಂದಿದೆ. ನಿಮ್ಮೆಲ್ಲರ ಪ್ರೀತಿ ಹಾರೈಕೆಯಿಂದ ಕಲಾಜಗತ್ತಿನಲ್ಲಿ ಉನ್ನತ ಸ್ಥಾನ ಪಡೆಯುವಂತಾಗಿದೆ. ಇಲ್ಲಿನ ದುಡಿಮೆಯ ಒಂದು ಭಾಗವನ್ನು ಕಲಾಜಗತ್ತಿನ ಅಶಕ್ತರ ಸಹಾಯಕ್ಕೆ ಮೀಸಲಿಡುತ್ತಾ ಬಂದಿದ್ದು, ಮುಂದೆಯೂ ಮುಂದೂವರಿಸಿಕೊಂಡು ಹೋಗುತ್ತೇನೆ ಎಂದರು.
ಈ ಸಂದರ್ಭದಲ್ಲಿ ಕುಂದಾಪುರ ತಾ. ಪಂ. ಮಾಜಿ ಸದಸ್ಯ ಹಟ್ಟಿಕುದ್ರು ಬಾಬು ಪೂಜಾರಿ, ಹಟ್ಟಿಕುದ್ರುವಿನ ಶ್ರೀ ಮಹಾಗಣಪತಿ ಯುವಕ ಮಂಡಲದ ಗೌರವಾಧ್ಯಕ್ಷ ಬಸ್ರೂರು ಜಯಸೂರ್ಯ ಪೂಜಾರಿ, ಬಸ್ರೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್‌ಕುಮಾರ್ ಎಚ್. ಇನ್ನಿತರರು ಉಪಸ್ಥಿತರಿದ್ದರು. ಅಶೋಕ ಪೂಜಾರಿ ಬಳ್ಕೂರು ಕಾರ್ಯಕ್ರಮ ನಿರ್ವಹಿಸಿದರು.