ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ : ಗಂಗೊಳ್ಳಿ ಕೊಸೆಸಾಂವ್ ಅಮ್ಮನವರ ಇಗರ್ಜಿಯ ನವೀಕೃತ ಕಟ್ಟಡದ ಆಶೀರ್ವಚನ ಮತ್ತು ಉದ್ಘಾಟನೆಯ ಪೂರ್ವಭಾವಿಯಾಗಿ ಭ್ರಾತೃತ್ವದ ಭಾನುವಾರದ ಆಚರಣೆಯು ಜರುಗಿತು.
ಭ್ರಾತೃತ್ವದ ಭಾನುವಾರದ ಪ್ರಯುಕ್ತ ಕನ್ನಡಕುದ್ರು ಸಂತ ಜೊಸೇಫ್ ವಾಜ್ ಪುಣ್ಯಕ್ಷೇತ್ರದಿಂದ ಗಂಗೊಳ್ಳಿ ಚರ್ಚಿಗೆ ವಾಹನಗಳ ಮೂಲಕ ಕೊಸೆಸಾಂವ್ ಅಮ್ಮನವರ ಪ್ರತಿಮೆಯ ಅದ್ದೂರಿ ಮೆರವಣಿಗೆ ನಡೆಯಿತು. ಮೆರವಣಿಗೆಗೆ ಮುನ್ನ ಕನ್ನಡಕುದ್ರು ಸಂತ ಜೊಸೇಫ್ ವಾಜ್ ಪುಣ್ಯಕ್ಷೇತ್ರದಲ್ಲಿ ಕುಂದಾಪುರ ವಲಯ ಪ್ರಧಾನ ಧರ್ಮಗುರು ವಂ|ಅನಿಲ್ ಡಿಸೋಜಾ ಅವರು ಕೊಸೆಸಾಂವ್ ಅಮ್ಮನವರ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಬಳಿಕ ಸುಮಾರು 50 ಕ್ಕೂ ಅಧಿಕ ವಿವಿಧ ವಾಹನಗಳ ಮೂಲಕ ಮೆರವಣಿಗೆಯ ಕನ್ನಡಕುದ್ರು ಪುಣ್ಯಕ್ಷೇತ್ರದಿಂದ ಹೊರಟು, ಮುವತ್ತಮುಡಿ ಕ್ರಾಸ್ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ, ಹೆಮ್ಮಾಡಿ, ಮುಳ್ಳಿಕಟ್ಟೆ, ತ್ರಾಸಿಯಿಂದ ಗಂಗೊಳ್ಳಿ ಚರ್ಚಿಗೆ ಸಾಗಿ ಬಂತು.
ಸತತ ಒಂದು ವರ್ಷ ಕೊಸೆಸಾಂವ್ ಅಮ್ಮನವರ ಪ್ರತಿಮೆಯು ಚರ್ಚಿನ ಎಲ್ಲಾ ಕುಟುಂಬಗಳಿಗೆ ಸಾಗಿ ಪ್ರಾರ್ಥನೆ ನಡೆಸಿದ ಪುನಃ ಭಾನುವಾರ ಚರ್ಚಿಗೆ ವಾಪಾಸ್ ತರಲಾಯಿತು. ಮೆರವಣಿಗೆಯ ಬಳಿಕ ಕುಂದಾಪುರ ವಲಯ ಪ್ರಧಾನ ಧರ್ಮಗುರು ವಂ|ಅನಿಲ್ ಡಿಸೋಜಾ ಅವರ ನೇತೃತ್ವದಲ್ಲಿ ಪವಿತ್ರ ಬಲಿಪೂಜೆ ಜರುಗಿತು.
ಚರ್ಚಿನ ಧರ್ಮಗುರು ವಂ ಆಲ್ಬರ್ಟ್ ಕ್ರಾಸ್ತಾ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಜೆರಾಲ್ಡ್ ನ್ಯೂಟನ್ ಕ್ರಾಸ್ತಾ, ಕಾರ್ಯದರ್ಶಿ ಪ್ರೀತಿ ಫೆರ್ನಾಂಡಿಸ್, ಪಾಲನಾ ಮಂಡಳಿಯ ಸದಸ್ಯರು, ಭಕ್ತವೃಂದ ಉಪಸ್ಥಿತರಿದ್ದರು.
ಚರ್ಚ್ ಉದ್ಘಾಟನೆಯ ಪ್ರಯುಕ್ತ ಮೇ 16ರಂದು ಸಂಜೆ ಹಸಿರು ಹೊರೆಕಾಣಿಕೆ ಮೆರವಣಿಗೆ, ಸರ್ವಧರ್ಮ ಸೌಹಾರ್ದ ಕೂಟ ಜರುಗಲಿದ್ದು, ಮೇ 18ರಂದು ಬೆಳಿಗ್ಗೆ 9:15ಕ್ಕೆ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ ಡಾ ಜೆರಾಲ್ಡ್ ಐಸಾಕ್ ಲೋಬೊ, ಗುಲ್ಬರ್ಗಾ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ ಡಾ ರೋಬರ್ಟ್ ಮಿರಾಂದಾ ಹಾಗೂ ಇತರ ಗಣ್ಯರ ಉಪಸ್ಥಿತಿಯಲ್ಲಿ ನವೀಕೃತ ಚರ್ಚಿನ ಉದ್ಘಾಟನೆ ಜರುಗಲಿದೆ.
