Site icon Kundapra.com ಕುಂದಾಪ್ರ ಡಾಟ್ ಕಾಂ

ಸಾಂಸ್ಕೃತಿಕ ಒಲವು ಸಮಾಜಮುಖಿ ಚಿಂತನೆಗೆ ದಾರಿ: ಗೋವಿಂದ ಪೂಜಾರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಾಂಸ್ಕೃತಿಕ ಪ್ರೀತಿ ಮಾನವೀಯ ಮೌಲ್ಯ ವೃದ್ಧಿಸಿ ಸಮಾಜಮುಖಿ ಚಿಂತನೆಗಳನ್ನು ಕಲ್ಪಿಸುತ್ತದೆ. ಹಾಗೆಯೇ ಕೇವಲ ಪುಸ್ತಕದ ಜ್ಞಾನ ಜೀವನಕ್ಕೆ ಸಾಕಾಗುವುದಿಲ್ಲ. ಶಿಕ್ಷಣೇತರ ಚಟುವಟಿಕೆಗಳು ಜೀವನದದ್ದುಕ್ಕಕ್ಕೂ ನೆನಪಿನಲ್ಲಿ ಉಳಿದು ಸಾಂಸ್ಕೃತಿಕವಾಗಿ ಎಲ್ಲವನ್ನು ಎದುರಿಸುವ ಧೈರ್ಯ ಮಕ್ಕಳಲ್ಲಿ ತುಂಬಲು ರಂಗ ಶಿಬಿರಗಳು ಸಹಕಾರಿಯಾಗುತ್ತದೆ ಎಂದು ಮುಂಬೈ ಉದ್ಯಮಿ ಗೋವಿಂದ ಬಾಬು ಪೂಜಾರಿ ಹೇಳಿದರು.

ಇಲ್ಲಿನ ಶ್ರೀ ಶಾರದಾ ವೇದಿಕೆಯಲ್ಲಿ ಲಾವಣ್ಯ ಮಕ್ಕಳ ರಂಗ ತರಬೇತಿ ಶಿಬಿರದಲ್ಲಿ ರೂಪುಗೊಂಡ ಎರಡು ನಾಟಕ ಪ್ರದರ್ಶನಗಳನ್ನು ಉದ್ಘಾಟಿಸಿ ಮಾತನಾಡಿದರು.

ಸ್ವಕೇಂದ್ರಿತ ಸಮಾಜ ನಿರ್ಮಾಣವಾಗುತ್ತಿರುವ ಕಾಲಘಟ್ಟದಲ್ಲಿ ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿರುವ ರಂಗ ಚಟುವಟಿಕೆಗಳು ಮುಖ್ಯ ಎಂದೆನಿಸಿಕೊಳ್ಳುತ್ತವೆ. ರಂಗಭೂಮಿಗಳು ಸಮಾಜಕ್ಕೆ ಹೊಸ ಸಂದೇಶ ನೀಡಿ, ಮನುಷ್ಯನ ಜೀವನ ರೂಪಿಸಿಕೊಳ್ಳಲು ಮಾರ್ಗದರ್ಶನ ನೀಡುವುದಲ್ಲದೇ, ಜೀವನದಲ್ಲಿನ ಲೋಪದೋಷಗಳನ್ನು ತಿದ್ದಿಕೊಳ್ಳಲು ಸಹಕಾರಿಯಾಗುತ್ತದೆ. ಬೈಂದೂರಿನ ಲಾವಣ್ಯ ಸಂಸ್ಥೆ ಕಳೆದ ನಾಲ್ಕು ದಶಕಗಳಿಂದ ತಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲದೇ, ಪರಸ್ಪರ ವಿಶ್ವಾಸದಿಂದ ಮುನ್ನೆಡೆದುಕೊಂಡು ಹೋಗುತ್ತಿರುವುದಲ್ಲದೇ, ಈ ಭಾಗದ ಜನರಿಗೆ ಮನೋರಂಜನೆಯೊಂದಿಗೆ ಉತ್ತಮ ಸಂದೇಶ ನೀಡುವ ಕೆಲಸ ಮಾಡುತ್ತಿದೆ ಎಂದರು.

ಲಾವಣ್ಯ ಗೌರವಾಧ್ಯಕ್ಷ ಯು. ಶ್ರೀನಿವಾಸ ಪ್ರಭು ಅಧ್ಯಕ್ಷತೆವಹಿಸಿದ್ದರು. ಹಿರಿಯ ರಂಗನಟ ಅನಿಲ್‌ಕುಮಾರ್ ಶ್ಯಾನುಭಾಗ್, ಮಹೇಶ್ ನಾಯಕ್, ಪ್ರಧಾನ ಕಾರ್ಯದರ್ಶಿ ಬಿ. ಮೋಹನ ಕಾರಂತ್, ರಂಗನಿರ್ದೇಶಕ ಬಿ. ಗಣೇಶ ಕಾರಂತ್ ಉಪಸ್ಥಿತರಿದ್ದರು. ಲಾವಣ್ಯ ಅಧ್ಯಕ್ಷ ಗಿರೀಶ್ ಬೈಂದೂರು ಸ್ವಾಗತಿಸಿ, ಉತ್ಸವ ಸಮಿತಿ ಅಧ್ಯಕ್ಷ ಸದಾಶಿವ ಪಡುವರಿ ವಂದಿಸಿದರು. ನಿಕಟಪೂರ್ವ ಕಾರ್ಯದರ್ಶಿ ನರಸಿಂಹ. ನಾಯಕ್ ನಿರೂಪಿಸಿದರು. ನಂತರ ಸೊಲ್ಲಾಪುರ ಸಹೋದರಿಯರಾದ ರೋಶನಿ ಮತ್ತು ಮೆಘನಾರಿಂದ ನೃತ್ಯವೈಭವ, ಎಚ್. ರಾಮಚಂದ್ರ ಬೈಂದೂರು ಇವರಿಂದ ಗಾನಸುಧೆ ಹಾಗೂ ಶಿಬಿರದ ೮೫ ಮಕ್ಕಳಿಂದ ಅಜ್ಜೀಕತೆ, ನಾಣಿಭಟ್ಟನ ಸ್ವರ್ಗದ ಕನಸು ಎಂಬೆರಡು ಮಕ್ಕಳ ನಾಟಕ ಪ್ರದರ್ಶನಗೊಂಡಿತು.

Exit mobile version