Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ ಕೊಸೆಸಾಂವ್ ಅಮ್ಮನವರ ಚರ್ಚ್ ಲೋಕಾರ್ಪಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ಭಾರತೀಯ ಸಂಸ್ಕೃತಿಯಲ್ಲಿ ದೇವಾಲಯಗಳಿಗೆ ಅರ್ಥಪೂರ್ಣ ಸ್ಥಾನವಿದೆ. ದೇವರು ವಾಸಿಸುವ, ದೇವರು ಅಸ್ತಿತ್ವದಲ್ಲಿರುವ ದೇವಾಲಯವು ದೇವರು ಹಾಗೂ ಮನುಷ್ಯರ ನಡುವೆ ನಿಕಟ ಸಂಪರ್ಕ ಕಲ್ಪಿಸುವ ಪವಿತ್ರವಾದ ತಾಣವಾಗಿದೆ. ದೇವರು ನಮ್ಮ ಮಧ್ಯ ಸದಾ ನೆಲೆ ನಿಲ್ಲುತ್ತಾನೆ, ಜನರ ಮಧ್ಯೆ ಸದಾ ವಾಸಿಸುತ್ತಾನೆ. ಕ್ರೈಸ್ತ ಸಮುದಾಯದವರಿಗೆ ದೇವಾಲಯ ಸ್ವರ್ಗದ ದಾರಿ. ಪವಿತ್ರ ಪ್ರೀತಿಯ ತಾಣವಾಗಿರುವ ದೇವಾಲಯಕ್ಕೆ ಬಂದು ದೇವರ ಆಶೀರ್ವಾದ, ಕೃಪಾವರ ಬೇಡಿದರೆ ದೇವರು ಯಾರನ್ನೂ ಬರಿಗೈಯಲ್ಲಿ ಕಳುಹಿಸದೆ ನಮ್ಮ ಬೇಡಿಕೆಗಳನ್ನು ಈಡೇರಿಸುತ್ತಾನೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ರೆ.ಫಾ. ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.

ನವೀಕೃತ ಗಂಗೊಳ್ಳಿ ಕೊಸೆಸಾಂವ್ ಅಮ್ಮನವರ ದೇವಾಲಯವನ್ನು ಲೋಕಾರ್ಪಣೆಗೊಳಿಸಿ ಬಳಿಕ ನಡೆದ ಆಶೀರ್ವಚನ ಹಾಗೂ ಉದ್ಘಾಟನಾ ಕಾರ್ಯಕ್ರಮದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. 400 ವರ್ಷಗಳ ಅಧ್ಭುತ ಇತಿಹಾಸವಿರುವ ಗಂಗೊಳ್ಳಿಯ ಕೊಸೆಸಾಂವ್ ಅಮ್ಮನವರ ದೇವಾಲಯ ಯಾವುದೇ ಜಾತಿ ಮತಕ್ಕೆ ಸೀಮಿತವಾಗಿಲ್ಲ. ಎಲ್ಲಾ ಸಮಾಜದ ಜನರು ಯಾವುದೇ ಬೇಧವಿಲ್ಲದೆ ಇಲ್ಲಿಗೆ ಬಂದು ಪ್ರಾರ್ಥನೆ ಸಲ್ಲಿಸಬಹುದು. ಗಂಗೊಳ್ಳಿಯ ಕ್ರೈಸ್ತ ಸಮಾಜಬಾಂಧವರು ಎಲ್ಲಾ ವರ್ಗದ ಜನರ ಸಹಕಾರ ಪಡೆದು ಬಹಳ ಆಸಕ್ತಿಯಿಂದ ನಿರ್ಮಿಸಿರುವ ಈ ದೇವಾಲಯ ತ್ಯಾಗ ಪರಿಶ್ರಮದ ಪ್ರತೀಕವಾಗಿದೆ. ತ್ಯಾಗ ಪ್ರೀತಿಯ ಸಂಕೇತವಾಗಿರುವ ಕೊಸೆಸಾಂವ್ ಅಮ್ಮನವರ ದೇವಾಲಯ ನಿರ್ಮಾಣ ಕಾರ್ಯದಲ್ಲಿ ಒಂದೇ ಮನಸ್ಸಿನಿಂದ ಒಂದೇ ಕುಟುಂಬದವರಂತೆ ಶ್ರಮಿಸಿರುವುದು ಶ್ಲಾಘನೀಯ ಎಂದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಗಂಗೊಳ್ಳಿ ಚರ್ಚಿಗೆ ಅಧ್ಭುತ ಧರ್ಮ ಪರಂಪರೆ ಇದೆ. ಗಂಗೊಳ್ಳಿಯಲ್ಲಿ ಸುಂದರವಾದ ಚರ್ಚ್ ನಿರ್ಮಾಣ ಮಾಡುವ ಮೂಲಕ ಎಲ್ಲಾ ಸಮಾಜದ ಜನರು ಉತ್ತಮ ಸಂದೇಶವನ್ನು ಸಮಾಜಕ್ಕೆ ನೀಡಿದ್ದಾರೆ. ಗಂಗೊಳ್ಳಿಯ ಹೊಸ ಪರಂಪರೆ ಹಾಗೂ ಜನರು ಹಾಕಿಕೊಟ್ಟಿರುವ ಮೇಲ್ಪಂಕ್ತಿ ಮುಂದುವರಿಸಿಕೊಂಡು ಹೋದರೆ ದೇಶವನ್ನು ಸುಭದ್ರವಾಗಿ ಕಟ್ಟಿಕೊಂಡು ಉನ್ನತಿಗೆ ಕೊಂಡೊಯ್ಯಲು ಸಾಧ್ಯವಾಗುತ್ತದೆ. ಸುಂದರ ಚರ್ಚ್ ನಿರ್ಮಾಣವಾಗಿದ್ದು ಜನರ ವಿದ್ಯಾಭ್ಯಾಸ, ಆರೋಗ್ಯ ಹಾಗೂ ಸಾಮಾಜಿಕ ಸಂಯಮಗಳ ಬಗ್ಗೆ ಚಿಂತನೆಗಳು ನಡೆಯಬೇಕು ಎಂದರು.

ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಶುಭಾಶಂಸನೆಗೈದರು. ಮುಖ್ಯ ಅತಿಥಿಗಳಾದ ಗುಲ್ಬರ್ಗ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ರೆ.ಫಾ. ಡಾ.ರಾಬರ್ಟ್ ಮಿರಾಂದಾ, ಕುಂದಾಪುರ ವಲಯ ಪ್ರಧಾನ ಧರ್ಮಗುರು ರೆ.ಫಾ. ಅನಿಲ್ ಡಿಸೋಜಾ, ಶಾಸಕ ಐವನ್ ಡಿಸೋಜ, ಚರ್ಚಿನ ನಿಕಪೂರ್ವ ಧರ್ಮಗುರು ರೆ.ಫಾ. ಅಲ್ಫೋನ್ಸ್ ಡಿಲೀಮಾ ಶುಭ ಹಾರೈಸಿದರು.

ಇದೇ ಸಂದರ್ಭ ನೂತನ ದೇವಾಲಯ ನಿರ್ಮಾಣಕ್ಕೆ ಕಾರಣೀಭೂತರಾದ ಚರ್ಚಿನ ಧರ್ಮಗುರು ರೆ.ಫಾ. ಅಲ್ಬರ್ಟ್ ಕ್ರಾಸ್ತಾ ಹಾಗೂ ನಿಕಪೂರ್ವ ಧರ್ಮಗುರು ರೆ.ಫಾ. ಅಲ್ಫೋನ್ಸ್ ಡಿಲೀಮಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಚರ್ಚ್ ನಿರ್ಮಾಣಕ್ಕೆ ಸಹಾಯ ನೀಡಿದ ದಾನಿಗಳನ್ನು ಗೌರವಿಸಲಾಯಿತು. ಬ್ಲೋಸಮ್ ಫೆರ್ನಾಂಡಿಸ್, ಉದ್ಯಮಿ ಎಂ. ಎಂ.ಇಬ್ರಾಹಿಂ, ಗಂಗೊಳ್ಳಿ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಸೀತಾರಾಮ ಶೆಟ್ಟಿ, ಕಾರ್ಮೆಲ್ ಕಾನ್ವೆಂಟ್‌ನ ಮುಖ್ಯಸ್ಥೆ ಸಿಸ್ಟರ್ ಜ್ಯೂಲಿಯಾನ್, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಜೆರಾಲ್ಡ್ ಕ್ರಾಸ್ತಾ, ಕಾರ್ಯದರ್ಶಿ ಪ್ರೀತಿ ಫೆರ್ನಾಂಡಿಸ್ ಉಪಸ್ಥಿತರಿದ್ದರು. ಚರ್ಚಿನ ಧರ್ಮಗುರು ರೆ.ಫಾ. ಅಲ್ಬರ್ಟ್ ಕ್ರಾಸ್ತಾ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಓವಿನ್ ರೆಬೆಲ್ಲೊ ಮತ್ತು ಲವಿಟಾ ಪಿಂಟೋ ಕಾರ್ಯಕ್ರಮ ನಿರೂಪಿಸಿದರು.

Exit mobile version