ನಾಡ: ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಕುಂದಾಪುರ ತಾಲೂಕು ಸಮಿತಿ, ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವೇಶನ ರಹಿತರ ಹೋರಾಟ ಸಮಿತಿಗಳ ನೇತೃತ್ವದಲ್ಲಿ ನಾಡ, ಹಡವು, ಸೇನಾಪುರ, ಬಡಾಕೆರೆ, ಗ್ರಾಮಗಳ ನಿವೇಶನ ರಹಿತರ ಬೃಹತ್ ಸಮಾವೇಶವು ನಾಡ ಸಮುದಾಯ ಭವನದಲ್ಲಿ ಜರುಗಿತು.
ಕರ್ನಾಟಕ ಪ್ರಾಂತ ರೈತ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ ಕೂಲಿಕಾರರ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಾ ದೇಶಕ್ಕೆ ಸ್ವಾತಂತ್ರ್ಯ ಬಂದು ೬ ದಶಕಗಳು ಕಳೆದರೂ ಇಂದಿಗೂ ಗ್ರಾಮೀಣ ಪ್ರದೇಶದ ಬಡಜನರಿಗೆ ಕನಿಷ್ಠ ಮೂಲಭೂತ ಸೌಕರ್ಯವನ್ನು ಸರಕಾರಕ್ಕೆ ಒದಗಿಸಲಾಗಲಿಲ್ಲ. ಕುಡಿಯುವ ನೀರು, ಮನೆ ನಿವೇಶನ, ಪಡಿತರ ಚೀಟಿ ಇತ್ಯಾದಿ ಸಮಸ್ಯೆ ಪರಿಹರಿಸಲು ಬೀದಿಗಿಳಿದು ಹೋರಾಟ ಮಾಡುವ ದುಸ್ಥಿತಿಗೆ ಬಂದಿರುವುದು ನಾಗರಿಕರಾದ ನಾವೆಲ್ಲ ನಾಚಿಕೆಯಿಂದ ತಲೆ ತಗ್ಗಿಸಬೇಕಾದ ವಿಚಾರವಾಗಿದೆ ಎಂದು ಹೇಳಿದರು.
ಏಪ್ರಿಲ್ 28 ರಂದು ಭೂಮಿ ಮತ್ತು ನೀರು ನಮ್ಮ ಹಕ್ಕುಗಳಿಗಾಗಿ ಬೆಂಗಳೂರಿನಲ್ಲಿ ವಿಧಾನ ಸೌಧ ಚಲೋ ಹೋರಾಟಕ್ಕೆ ಬೆಂಬಲಿಸಿ, ಬಡನಿವೇಶನ ರಹಿತರು ಭಾಗವಹಿಸುವುದಕ್ಕೆ ಸಮಾವೇಶದಲ್ಲಿ ತೀರ್ಮಾನಿಸಲಾಯಿತು. ಸಿಐಟಿಯು ತಾಲೂಕು ಅಧ್ಯಕ್ಷ ಎಚ್.ನರಸಿಂಹ, ಕೂಲಿಕಾರರ ಸಂಘದ ಮುಖಂಡರಾದ ನಾಗರತ್ನ ನಾಡ, ಕರಿಯ ದೇವಾಡಿಗ, ಪಂಚಾಯತ್ ಸದಸ್ಯ ಮನೋರಮ ಭಂಡಾರಿ, ಮತ್ತು ಶೀಲಾವತಿ ಉಪಸ್ಥಿತರಿದ್ದರು. ಕೂಲಿಕಾರರ ಸಂಘದ ತಾಲೂಕು ಅಧ್ಯಕ್ಷ ರಾಜೀವ ಪಡುಕೋಣೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ವೆಂಕಟೇಶ ಕೋಣಿ ಕಾರ್ಯಕ್ರಮ ನಿರೂಪಿಸಿದರು.