Kundapra.com ಕುಂದಾಪ್ರ ಡಾಟ್ ಕಾಂ

ಮೇ.30: ಕುಂದಾಪುರದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ರಿಸರ್ವೇಶನ್ ಚಿತ್ರ ಪ್ರದರ್ಶನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಾಷ್ಟ್ರ ಪ್ರಶಸ್ತಿ ವಿಜೇತ ರಿಸರ್ವೇಶನ್ ಕನ್ನಡ ಸಿನೆಮಾ ಮೇ.30ರ ಮಂಗಳವಾರ ಕೋಟೇಶ್ವರ ಯುವ ಮೆರಿಡಿಯನ್‌ನಲ್ಲಿ ಸಂಜೆ 6:30ಕ್ಕೆ ಪ್ರದರ್ಶನಗೊಳ್ಳಲಿದೆ. ಸಿನೆಮಾ ಪ್ರಿಯರು ಮುಕ್ತವಾಗಿ ಪಾಲ್ಗೊಂಡು ಸಿನೆಮಾ ಪ್ರದರ್ಶನ ಹಾಗೂ ಚರ್ಚೆಯಲ್ಲಿ ಪಾಲ್ಗೊಳ್ಳಬಹುದಾಗಿದೆ.

ಗುಲ್ವಾಡಿ ಟಾಕೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡ ಕುಂದಗನ್ನಡದ ಸೊಗಡಿನ, ಮೀಸಲಾತಿಯ ಹಿಂದಿನ ತಲ್ಲಣಗಳನ್ನು ತೆರೆದಿಟ್ಟ ಪ್ರಾದೇಶಿಕ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ದೊರೆತಿರುವುದು ಕುಂದನಾಡಿಗರ ಸಾಧನೆಯ ಮುಕುಟದಲ್ಲೊಂದು ಗರಿ ಮೂಡಿದಂತಾಗಿದೆ.

ಜಾತಿ ಹಾಗೂ ಮೀಸಲಾತಿ ವ್ಯವಸ್ಥೆಯು ಮಧ್ಯಮ ವರ್ಗದ ಕುಟುಂಬದ ಮೇಲೆ ಬೀರಬಹುದಾದ ಪ್ರಭಾವ – ತಲ್ಲಣಗಳು ಹಾಗೂ ಅದರಾಚೆಗಿನ ಪರಿಣಾಮವನ್ನು ಕಥಾವಸ್ತುವಾಗಿಸಿಕೊಂಡ ’ರಿಸರ್ವೆಶನ್’ ಕಲಾತ್ಮಕ ಚಿತ್ರವನ್ನು ಖ್ಯಾತ ನಿರ್ದೇಶಕ ನಿಖಿಲ್ ಮಂಜು ನಿರ್ದೇಶಿಸಿದ್ದರು. ಗುಲ್ವಾಡಿ ಟಾಕೀಸ್ ಬ್ಯಾನರ್‌ನಲ್ಲಿ ನಟ, ಸಾಹಿತಿ ಯಾಕೂಬ್ ಖಾದರ್ ಗುಲ್ವಾಡಿ ಚಿತ್ರ ನಿರ್ಮಾಣ ಮಾಡಿದ್ದರು. ಶ್ರೀಲಲಿತೆ ಅವರ ಕಥೆಯನ್ನಾಧರಿಸಿದ ಚಿತ್ರಕ್ಕೆ ಬಿ. ಶಿವಾನಂದ್ ಸಂಭಾಷಣೆ ಬರೆದಿದ್ದರೇ, ಪ್ರದೀಪ್ ಶೆಟ್ಟಿ ಕೆಂಚನೂರು, ನಿಖಿಲ್ ಮಂಜು ಹಾಗೂ ಬಿ. ಶಿವಾನಂದ ಚಿತ್ರಕಥೆ ಬರೆದಿದಾರೆ. ಪಿವಿಆರ್ ಸ್ವಾಮಿ ಅವರ ಛಾಯಾಗ್ರಹಣ, ಸಮೀರ್ ಅವರ ಸಂಗೀತದಲ್ಲಿ ಮಾನಸಿ ಸುಧೀರ್ ಸೇರಿದಂತೆ ಹಲವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು.

ಯುವ ಮೆರಿಡಿಯನ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ದೂರದರ್ಶನ ಕೇಂದ್ರದ ಹೆಚ್ಚುವರಿ ಮಹಾನಿರ್ದೇಶಕ ಮಹೇಶ್ ಜೋಶೀ ಚಿತ್ರ ಪ್ರದರ್ಶನದ ಪೋಸ್ಟರ್ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಬೆಂಗಳೂರು ದೂರದರ್ಶನ ಕೇಂದ್ರದ ಉಪ ಮಹಾನಿರ್ದೇಶಕ ಎನ್. ಚಂದ್ರಶೇಖರ್, ಕಸಪಾ ಜಿಲ್ಲಾ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಉಪನ್ಯಾಸಕ ಪ್ರದೀಪ್ ಶೆಟ್ಟಿ ಕೆಂಚನೂರು, ಕುಂದಾಪುರ ಮಾತಾ ಆಸ್ಪತ್ರೆ ನಿರ್ದೇಶಕ ಡಾ. ಸತೀಶ್ ಪೂಜಾರಿ, ಮೊದಲಾದವರು ಉಪಸ್ಥಿತರಿದ್ದರು.

► ಮೀಸಲಾತಿ ತಲ್ಲಣ ತೆರೆದಿಟ್ಟ ‘ರಿಸರ್ವೇಶನ್’ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಗರಿ – http://kundapraa.com/?p=22563
► ಇದನ್ನೂ ಓದಿ: ಗುಲ್ವಾಡಿ ಟಾಕೀಸ್ ನಿರ್ಮಾಣದ ‘ರಿಸರ್ವೆಶನ್’ ಚಿತ್ರ ಮುಹೂರ್ತ, ಚಿತ್ರೀಕರಣಕ್ಕೆ ಚಾಲನೆ – http://kundapraa.com/?p=18420
► ಎಲ್ಲರನ್ನೂ ಒಗ್ಗೂಡಿಸಿ ಮುನ್ನಡೆಯುವ ಕಾರ್ಯ ದೊಡ್ಡದು: ಎಸ್. ಜಿ. ಸಿದ್ಧರಾಮಯ್ಯ – http://kundapraa.com/?p=22599

Exit mobile version