Kundapra.com ಕುಂದಾಪ್ರ ಡಾಟ್ ಕಾಂ

ಗಾಣಿಗ ಸೇವಾ ಸಂಘ ಉಪ್ಪುಂದ ಘಟಕದ ವಾರ್ಷಿಕೋತ್ಸವ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸೇವಾ ಕಾರ್ಯದಲ್ಲಿ ಹೊಂದಿರುವ ಪ್ರೀತಿಗೆ ಸಮಾನವಾದ ತೃಪ್ತಿ, ಮಾಡಿದವನಿಗೆ ಲಭಿಸುತ್ತದೆ. ಈ ನಿಟ್ಟಿನಲ್ಲಿ ಉಪ್ಪುಂದ ಗಾಣಿಗ ಸೇವಾ ಸಂಘ ಸಮುದಾಯದ ಶಿಕ್ಷಣ ಮತ್ತು ಆರೋಗ್ಯದ ಕಡೆಗೆ ತೋರುತ್ತಿರುವ ಕಾಳಜಿ ಅನುಕರಣೀಯ. ಸಮಾಜಮುಖಿ ಕಾರ್ಯಗಳಲ್ಲಿ ಫಲಾಪೆಕ್ಷೆ ನುಸುಳದಿದ್ದರೆ ಮಾತ್ರ ಅವುಗಳು ಸೇವೆ ಎನಿಸುತ್ತವೆ ಎಂದು ಶಿವಮೊಗ್ಗ ಜಿಲ್ಲಾ ಗಾಣಿಗ ಸಂಘದ ಮಾಜಿ ಅಧ್ಯಕ್ಷ ಎಚ್. ಸುಬ್ಬಯ್ಯ ಗಾಣಿಗ ಹೇಳಿದರು.

ಉಪ್ಪುಂದ ಶಂಕರ ಕಲಾಮಂದಿರದ ಸಮೃದ್ಧ ಸಭಾಭವನದಲ್ಲಿ ನಡೆದ ಉಪ್ಪುಂದ ಘಟಕದ ಗಾಣಿಗ ಸೇವಾ ಸಂಘದ ಚತುರ್ಥ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ, ಕಲಿಕಾ ಸಾಮಗ್ರಿ ವಿತರಣೆ ಹಾಗೂ ಹಿರಿಯರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಮ್ಮ ಹಿರಿಯರು ಹಿಂದಿನ ಕಷ್ಟದ ಪರಿಸ್ಥಿತಯಲ್ಲಿಯೂ ಕೂಡಾ ತಮ್ಮ ಜೀವನವನ್ನು ಗಂಧದ ಕೊರಡಿನ ಹಾಗೆ ಸೆವೆಸುವ ಮೂಲಕ ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ, ವಿದ್ಯೆಯನ್ನು ನೀಡಿದ್ದರ ಫಲವಾಗಿ ನಮ್ಮ ಸಮಾಜವು ಇಂದು ಈ ಮಟ್ಟಕ್ಕೆ ಬೆಳೆಯಲು ಸಹಕಾರಿಯಾಗಿದೆ. ಈ ನೆಲೆಯಲ್ಲಿ ಇಂದು ಹಿರಿಯರನ್ನು ಗೌರವಿಸಿದ್ದು, ಮುಂದಿನ ಮಕ್ಕಳಿಗೂ ಪೀಠಿಕೆ ಹಾಕಿಕೊಟ್ಟು ಸಂಪ್ರದಾಯ ವಿಸ್ತರಿಸಿದಂತಾಗಿದೆ. ಯಾವುದೇ ಕ್ಷೇತ್ರದಲ್ಲಿ ದುಡಿಯುವವರಿಗೆ ಹತ್ತಾರು ತೊಡಕುಗಳು ಎದುರಾಗುವುದು ಸಹಜ. ಅವುಗಳನ್ನು ಸವಾಲಿನಂತೆ ಸ್ವೀಕರಿಸಿ ಮುನ್ನುಗ್ಗಿದರೆ ಗುರಿ ಸಾಧನೆ ಸಾಧ್ಯವಾಗುತ್ತದೆ ಎಂದರು.

ಘಟಕದ ಅಧ್ಯಕ್ಷ ಬವಳಾಡಿ ರಾಘವೇಂದ್ರ ಗಾಣಿಗ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಶತಾಯುಷಿ ಶೇಷಿ ಗಾಣಿಗ (೧೦೬) ಸೇರಿದಂತೆ ೯೦ ವಯಸ್ಸಿನ ಮೇಲ್ಪಟ್ಟ ಸಮುದಾಯದ ಹಿರಿಯರನ್ನು ಗೌರವಿಸಲಾಯಿತು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತೀಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ಹಾಗೂ ಸಮುದಾಯದ ಮಕ್ಕಳಿಗೆ ಕಲಿಕಾ ಸಾಮಗಿಗಳನ್ನು ವಿತರಿಸಲಾಯಿತು.

ಪ್ರಗತಿಪರ ಕೃಷಿಕ ರಾಜು ಗಾಣಿಗ ಹುಳುವಾಡಿ, ಗ್ರಾಮಲೆಕ್ಕಿಗ ಮಂಜುನಾಥ ಪಾಟೀಲ್, ಸಂಸ್ಥೆಯ ಗೌರವಾಧ್ಯಕ್ಷ ಗಣಪಯ್ಯ ಗಾಣಿಗ, ಪ್ರಾಯೋಜಕ ಭಾಸ್ಕರ ಗಾಣಿಗ, ಬೈಂದೂರು ಗಾಣಿಗ ಯುವ ಸಂಘಟನೆಯ ಅಧ್ಯಕ್ಷ ಗಣೇಶ ಗಾಣಿಗ ಉಪಸ್ಥಿತರಿದ್ದರು. ಘಟಕದ ಸ್ಥಾಪಕಾಧ್ಯಕ್ಷ ಅನಂತ ಗಾಣಿಗ ಪ್ರಾಸ್ತಾವಿಸಿದರು. ಕಾರ್ಯದರ್ಶಿ ಗೋಪಾಲಕೃಷ್ಣ ಗಾಣಿಗ ಸ್ವಾಗತಿಸಿ, ಕೋಶಾಧಿಕಾರಿ ಅನುಸೂಯಾ ಗಾಣಿಗ ವಂದಿಸಿದರು. ಸುಬ್ರಹ್ಮಣ್ಯ ಗಾಣಿಗ ನಿರೂಪಿಸಿದರು.

 

Exit mobile version