ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮಾನವೀಯ ಹಾಗೂ ಭಾವನಾತ್ಮಕ ಸಂಬಂಧಗಳ ಕೊರತೆಯ ನಡುವೆ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಕೌಟುಂಬಿಕ ವ್ಯವಸ್ಥೆಗಳ ಅರಿವು ಮೂಡಿಸುವ ಜತೆಗೆ ಸಂಘಟನೆಯನ್ನು ಬಲಪಡಿಸುವ ಅನಿವಾರ್ಯತೆಯಿದೆ. ಕ್ರೀಯಾತ್ಮಕ ಚಟುವಟಿಕೆಗಳಿಂದ ಸಂಘಟನೆಯ ಮೂಲಕ ಸಮಾಜಮುಖಿ ಕಾರ್ಯಕ್ರಮಗಳನ್ನು ರೂಪಿಸಲು ಸಾಧ್ಯ ಎಂದು ಲಾವಣ್ಯ ಕಲಾಕುಟುಂಬದ ಹಿರಿಯ ಕಲಾವಿದ ಬಿ. ಮಾಧವ ರಾವ್ ಹೇಳಿದರು.
ಬೈಂದೂರು ದೇವಾಡಿಗರ ಒಕ್ಕೂಟ ಇವರ ವತಿಯಿಂದ ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದಲ್ಲಿ ನಡೆದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಘಟನೆ ಅತೀ ಮುಖ್ಯವಾಗಿದ್ದು, ನಮ್ಮ ಹಿರಿಯರಿಂದ ಬಳುವಳಿಯಾಗಿ ಬಂದ ಆಚರಣೆ, ಅನುಭವ, ಸಮೂಹ ಜೀವನ ಹಾಗೂ ಸಂಸ್ಕಾರ ನಮ್ಮ ಸಮಾಜದ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದರು.
ಸಂಘದ ಅಧ್ಯಕ್ಷ ಕೆ. ಜೆ. ಸುಬ್ಬ ದೇವಾಡಿಗ ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭದಲ್ಲಿ ಸಂಘದ ವತಿಯಿಂದ ಕುಂದಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ನಿದೇರ್ಶಕ ಮಂಜು ದೇವಾಡಿಗ, ನಾರಾಯಣ ದೇವಾಡಿಗ ಕೂಡ್ಲು, ದುರ್ಗಾ ದೇವಾಡಿಗ ಸೂರ‍್ಕೂಂದ, ಅಣ್ಣಪ್ಪ ದೇವಾಡಿಗ ಕೆರೆಕಟ್ಟೆ ಇವರನ್ನು ಸನ್ಮಾನಿಸಲಾಯಿತು. ಯೋಗ ಶಿಕ್ಷಕ ಬಿಜೂರು ಮಂಜುನಾಥ ದೇವಾಡಿಗ, ಯೋಧ ನಾಗರಾಜ ದೇವಾಡಿಗ ಹಾಗೂ ಶಿಲ್ಪಾ ಎಸ್ ದೇವಾಡಿಗ ಇವರನ್ನು ಅಭಿನಂದಿಸಲಾಯಿತು
ಸಂಘದ ಗೌರವಾಧ್ಯಕ್ಷ ಕೆ. ನಾರಾಯಣ ದೇವಾಡಿಗ, ನಿವೃತ್ತ ಅರಣ್ಯ ನೀರಿಕ್ಷಕ ಬಿ. ಗೋವಿಂದ ದೇವಾಡಿಗ, ನಾರಾಯಣ ದೇವಾಡಿಗ ಹೊಸಾಡು, ಉದ್ಯಮಿ ಬಿ. ಮಹಾಲಿಂಗ ದೇವಾಡಿಗ, ಮಹಿಳಾ ಸಂಘದ ಅಧ್ಯಕ್ಷೆ ಮಾಲತಿ ದೇವಾಡಿಗ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ರಾಘವೇಂದ್ರ ದೇವಾಡಿಗ ವಾರ್ಷಿಕ ವರದಿ ಮತ್ತು ಲೆಕ್ಕಪತ್ರ ಮಂಡನೆ ಮಾಡಿದರು. ಮಣಿಕಂಠ ದೇವಾಡಿಗ ಸ್ವಾಗತಿಸಿ, ಸತ್ಯಪ್ರಸನ್ನ ವಂದಿಸಿದರು, ನಾರಾಯಣರಾಜು ನಿರೂಪಿಸಿದರು. ಬೆಳಿಗ್ಗೆ ಸಂಘದ ವತಿಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಿತು.