Kundapra.com ಕುಂದಾಪ್ರ ಡಾಟ್ ಕಾಂ

ಕೃಷಿ ಆವಿಷ್ಕಾರಗಳಿಂದ ಯುವ ಪೀಳಿಗೆಯನ್ನು ಸೆಳೆಯಲು ಸಾಧ್ಯ: ಎಸ್. ಪ್ರಕಾಶ್ಚಂದ್ರ ಶೆಟ್ಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಹಳ್ಳಿಯ ಪ್ರದೇಶಗಳಲ್ಲಿ ರೈತರು ಹಿಂದಿನಿಂದಲೂ ನಡೆದುಬಂದ ಸಂಪ್ರದಾಯದಂತೆ ಕೃಷಿ ಹಾಗೂ ತೋಟಗಾರಿಕೆ ಮಾಡುತ್ತಿದ್ದಾರೆ. ಆದರೆ ಇಂದಿನ ಆಧುನಿಕ ಪದ್ದತಿಯ ಬಗ್ಗೆ ತಿಳುವಳಿಕೆ ಕಡಿಮೆ ಹಾಗೂ ಸಮರ್ಪಕ ಮಾಹಿತಿ ಕೊರತೆಯಿಂದಾಗಿ ಕೃಷಿಯಲ್ಲಿ ಸ್ವಲ್ಪಮಟ್ಟಿನ ನಷ್ಟ ಅನುಭವಿಸುತ್ತಿದ್ದಾರೆ. ಕೃಷಿ ಸಂಬಂಧಿತ ಎಲ್ಲ ಇಲಾಖೆಗಳು ಸಮನ್ವಯತೆಯಿಂದ ಕೃಷಿಯ ಕುರಿತಾದ ಸಮಗ್ರ ಮಾಹಿತಿ, ಸರಕಾರದ ಯೋಜನೆಗಳನ್ನು ರೈತರಿಗೆ ಮನವರಿಕೆ ಮಾಡುವುದರ ಮೂಲಕ ಅವರಿಗೆ ಸ್ಪಂದಿಸಬೇಕು ಎಂದು ಕಾಲ್ತೋಡು ಗ್ರಾಪಂ ಅಧ್ಯಕ್ಷ ಬಿ. ಅಣ್ಣಪ್ಪ ಶೆಟ್ಟಿ ಭಟ್ನಾಡಿ ಹೇಳಿದರು.

ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಪ್ರಾಯೋಜಿತ ರೈತ ಶಕ್ತಿ, ರೈತ ಸೇವಾ ಒಕ್ಕೂಟ, ಉಪ್ಪುಂದ ಇವರ ಸಹಯೋಗದೊಂದಿಗೆ ಶನಿವಾರ ಕಾಲ್ತೋಡು ಅಂಬೇಡ್ಕರ ಭವನದಲ್ಲಿ ನಡೆದ ಅಡಿಕೆ, ತೆಂಗು, ಕಾಳುಮೆಣಸು ಬೇಸಾಯ ಕ್ರಮ ಹಾಗೂ ತೋಟಗಾರಿಕಾ ಮತ್ತು ಕೃಷಿ ಇಲಾಖೆಯಿಂದ ಸಿಗುವ ಸರಕಾರಿ ಸೌಲಭ್ಯಗಳ ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದರು. ಮಣ್ಣಿನ ಫಲವತ್ತತೆಯ ಅರಿವು, ನೀರಿನ ಸಂರಕ್ಷಣೆ ಮತ್ತು ಸಮರ್ಪಕ ಬಳಕೆ ರೈತರ ಮೂಲಭೂತ ಅರಿವು ಮತ್ತು ಕಾರ್ಯಗಳಿಗೆ ಕ್ಲಪ್ತ ಸಮಯದಲ್ಲಿ ಸೂಕ್ತ ಮಾಹಿತಿ ಮತ್ತು ತರಬೇತಿಯನ್ನ ಶಿಬಿರಗಳ ಮೂಲಕ ರೈತರಿಗೆ ನೀಡುತ್ತಿರುವ ಸಂಘದ ಕಾರ್ಯದಕ್ಷತೆ ಶ್ಲಾಘನೀಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಖಂರೈಸೇಸ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ, ರೈತರು ತಾನೊಬ್ಬ ಭೂಮಾಲಿಕ ಎಂಬ ಭ್ರಮೆಯಿಂದ ಹೊರಬಂದು ಸಾಮಾನ್ಯ ರೈತ ಎಂಬ ಭಾವನೆಯಿಂದ ಸ್ವತಃ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಾಗ ಮಾತ್ರ ಯಶಸ್ಸಿನ ಮೇಟ್ಟಿಲೇರಬಹುದು. ನಮ್ಮಲ್ಲಿ ಯಾವುದೇ ಸಮಸ್ಯೆಗಳಿದ್ದರೂ ಕೂಡಾ ಕೃಷಿಯನ್ನು ಉಳಿಸಿಕೊಳ್ಳುವ ಅನಿವಾರ್ಯತೆಯಿದೆ. ಕಾಲಕಾಲಕ್ಕೆ ತಕ್ಕಂತೆ ಬದಲಾವಣೆಯೊಂದಿಗೆ ಹೆಜ್ಜೆ ಹಾಕದಿದ್ದರೆ ಕೃಷಿಯಲ್ಲಿ ಮುಂದುವರಿಯಲು ಸಾಧ್ಯವಾಗದು. ಹೊಸ ಆವಿಷ್ಕಾರಗಳ ಮೂಲಕ ಯೋಜನೆ ಹಾಗೂ ಪೂರಕ ಅಂಶಗಳಿಂದ ಕೃಷಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಬಹುದು. ಆಗ ಮಾತ್ರ ಯುವ ಪೀಳಿಗೆ ಕೃಷಿಯಿಂದ ವಿಮುಖರಾಗದಂತೆ ತಡೆಯಬಹುದು ಎಂದರು.

ಅಡಿಕೆ ಬರುವ ಕೊಳೆರೋಗ ಒಂದು ಸಮಸ್ಯೆಯೇ ಅಲ್ಲ. ಮುಂಗಾರು ಪ್ರಾರಂಭದಲ್ಲಿ ಒಮ್ಮೆ ಬೋರ್ಡೋ ದ್ರಾವಣ (ಮೈಲ್‌ತುತ್ತು ಮತ್ತು ಸುಣ್ಣದ ಮಿಶ್ರಣ) ಸಿಂಪಡಿಸಬೇಕು. ಬಳಿಕ ೪೫ ದಿನ ಕಳೆದ ಮೇಲೆ ಪುನಃ ಈ ದ್ರಾವಣವನ್ನು ಅಡಿಕೆ ಮರಕ್ಕೆ ಸಿಂಪಡಿಸುವುದರಿಂದ ಯಾವುದೇ ರೋಗ ಬರುವ ಸಂಭವವಿಲ್ಲ. ಈ ನೆಲೆಯಲ್ಲಿ ಮಾಹಿತಿಯಿಂದಾಗುವ ಪ್ರಯೋಜನವನ್ನು ರೈತರಿಗೆ ನೀಡುವ ಉದ್ದೇಶದಿಂದ ಸಂಘ ಈ ಕಾರ್ಯಕ್ರಮವನ್ನು ಆಯೋಜಿಸಿದೆ. ಅಲ್ಲದೇ ಸಂಘದ ಲಾಭಾಂಶವನ್ನು ರೈತರಿಗೆ ವರ್ಗಾಯಿಸುವ ಬಗ್ಗೆ ಅವರಿಗೆ ಪೂರಕವಾದ ಕಾರ್ಯಕ್ರಮಗಳು, ಒಂಭತ್ತು ಗ್ರಾಮಗಳ ರೈತರ ಮಕ್ಕಳಿಗೆ ಶೈಕ್ಷಣಿಕವಾಗಿ ನೆರವು ನೀಡುವ ಉದ್ದೇಶವನ್ನು ಕೂಡಾ ಸಂಘ ಹೊಂದಿದೆ ಎಂದರು.

ಕಾಲ್ತೋಡು ಗ್ರಾಪಂ ಉಪಾಧ್ಯಕ್ಷ ರಾಜು ಪೂಜಾರಿ, ಸಂಘದ ನಿರ್ದೇಶಕ ಮೋಹನ ಪೂಜಾರಿ, ಉಪಸ್ಥಿತರಿದ್ದರು. ಸಂಘದ ನಿರ್ದೇಶಕ ಬಿ. ಎಸ್. ಸುರೇಶ್ ಶೆಟ್ಟಿ ಪ್ರಾಸ್ತಾವಿಸಿದರು. ಸಿಇಒ ಸತೀಶ್ ಪೈ ಸ್ವಾಗತಿಸಿ, ವ್ಯವಸ್ಥಾಪಕ ಹಾವಳಿ ಬಿಲ್ಲವ ನಿರೂಪಿಸಿದರು. ವಿಷ್ಣು ಪೈ ವಂದಿಸಿದರು.

ನಂತರ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಧನಂಜಯ, ವಿಷಯ ತಜ್ಞ ಡಾ. ನವೀನ್ ಎನ್.ಈ., ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ವಿಠಲರಾವ್, ತೋಟಗಾರಿಕಾ ನಿರ್ದೇಶಕ ಅಜಿತ್, ಕೃಷಿವಿಜ್ಞಾನ ಕೇಂದ್ರದ ಸಹಾಯಕ ಪ್ರಾಧ್ಯಾಪಕಿ ಕಾವ್ಯಶ್ರೀ ಸಂಪನ್ಮೂಲ ವ್ಯಕ್ತಿಗಳಾಗಿ ಅಡಿಕೆ ಬೆಳೆಗಳ ಆಧುನಿಕ ಬೇಸಾಯ, ತೋಟಗಾರಿಕೆ ಬೆಳೆಗಳ ರೋಗಗಳು ಮತ್ತು ಅವುಗಳ ಹತೋಟಿ, ತೋಟಗಾರಿಕೆ ಬೆಳೆಗಳಲ್ಲಿ ಸಾವಯವ ಪದ್ದತಿ ಎಂಬ ವಿಷಯಗಳ ಕುರಿತು ವಿಚಾರಗೋಷ್ಠಿ, ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ನಡೆಸಿದರ.

Exit mobile version