ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ಸರಕಾರಿ ಶಾಲೆಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕಾರ್ಯ ನಡೆಯಬೇಕು. ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕಡಿಮೆಯಾಗುತ್ತಿರುವ ಮತ್ತು ಆಂಗ್ಲ ಮಾಧ್ಯಮ ಶಾಲೆಗಳತ್ತ ಪೋಷಕರು ಹೆಚ್ಚಿನ ಒಲವು ತೋರಿಸುತ್ತಿರುವ ಹಿನ್ನಲೆಯಲ್ಲಿ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಆಂಗ್ಲ ಭಾಷೆ ಬೋಧನೆಗೆ ಸರಕಾರ ಅನುಮತಿ ನೀಡಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಇಮ್ಮಡಿಗೊಳ್ಳುವ ಸಾಧ್ಯತೆ ಇದೆ ಎಂದು ಬೈಂದೂರು ಶಾಸಕ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಕೆ.ಗೋಪಾಲ ಪೂಜಾರಿ ಹೇಳಿದರು.
ಅವರು ಗುಜ್ಜಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ಜರಗಿದ ಶಾಲಾ ವಾಹನ ಹಸ್ತಾಂತರ ಸಮಾರಂಭದಲ್ಲಿ ಐಶ್ವರ್ಯ ಡಿ.ಮೇಸ್ತ ಅವರು ಶಾಲೆಗೆ ಕೊಡುಗೆಯಾಗಿ ನೀಡಿದ ನೂತನ ಶಾಲಾ ವಾಹನವನ್ನು ಉದ್ಘಾಟಿಸಿ ಮಾತನಾಡಿದರು.
ಶತಮಾನದ ಹೊಸ್ತಿಲಲ್ಲಿರುವ ಗುಜ್ಜಾಡಿ ಶಾಲೆಯು ಕಟ್ಟಡ ನವೀಕರಣವನ್ನು ದಾನಿಗಳ ಸಹಕಾರದಿಂದ ಮಾಡಿಕೊಂಡಿದ್ದು, ಇದೀಗ ಶಾಲೆಯ ಮಕ್ಕಳ ಅನುಕೂಲಕ್ಕಾಗಿ ದಾನಿಗಳಾದ ಐಶ್ವರ್ಯ ಡಿ.ಮೇಸ್ತ ಮುಖಾಂತರ ಶಾಲಾ ಬಸ್ ವ್ಯವಸ್ಥೆಯನ್ನು ಮಾಡಿಕೊಂಡಿರುವುದು ಶ್ಲಾಘನೀಯ. ಶಾಲೆಯಲ್ಲಿ ನೂತನ ಕಟ್ಟಡ ನಿರ್ಮಾಣ ಸಹಿತ ಶಾಲೆಯ ಬೆಳವಣಿಗೆಗೆ ಅಗತ್ಯವಿರುವ ಸೌಲಭ್ಯವನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು. ಶಾಲೆಯಲ್ಲಿ ಸೇವೆ ಸಲ್ಲಿಸಿ ಪ್ರತಿಯೊಬ್ಬ ಎಸ್‌ಡಿಎಂಸಿ ಅಧ್ಯಕ್ಷರು ಒಂದಲ್ಲ ಒಂದು ಸಾಧನೆ ಮಾಡಿದ್ದು ಹಾಲಿ ಅಧ್ಯಕ್ಷರ ಅವಧಿಯಲ್ಲಿ ಶಾಲೆಗೆ ಉತ್ತಮ ಕೊಡುಗೆಗಳು ಬಂದಿದ್ದು ಶಾಲೆ ಪ್ರಗತಿ ಕಾಣುತ್ತಿರುವುದು ಅಭಿನಂದನೀಯ ಎಂದರು.
ಗುಜ್ಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಹರೀಶ ಮೇಸ್ತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ದಾನಿಗಳಾದ ಐಶ್ವರ್ಯ ಡಿ.ಮೇಸ್ತ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ತಾಲೂಕು ಪಂಚಾಯತ್ ಸದಸ್ಯರಾದ ನಾರಾಯಣ ಕೆ. ಗುಜ್ಜಾಡಿ, ರಾಜು ದೇವಾಡಿಗ, ಗುಜ್ಜಾಡಿ ಗ್ರಾಪಂ ಸದಸ್ಯರಾದ ಶೇಖರ ದೇವಾಡಿಗ, ತಮ್ಮಯ್ಯ ದೇವಾಡಿಗ, ರಾಜು ಪೂಜಾರಿ, ಕಾವ್ಯ ಶೇರುಗಾರ್, ಉದ್ಯಮಿ ದಯಾಕರ ಮೇಸ್ತ, ಪದ್ಮಾವತಿ ದಯಾಕರ ಮೇಸ್ತ, ಸಿಆರ್‌ಪಿ ಆಶಾ, ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಕಾಶ ಎನ್.ಮೇಸ್ತ, ಎಸ್‌ಡಿಎಂಸಿ ಸದಸ್ಯರು, ಪೋಷಕರು, ಹಳೆ ವಿದ್ಯಾರ್ಥಿಗಳು, ಸಹಶಿಕ್ಷಕರು ಮತ್ತಿತರರು ಉಪಸ್ಥಿತರಿದ್ದರು.
ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ಜಯರಾಮ ಶೆಟ್ಟಿ ಸ್ವಾಗತಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ರಾಮನಾಥ ಚಿತ್ತಾಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹಶಿಕ್ಷಕಿ ಆಶಾ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕಿ ಲತಾ ವಂದಿಸಿದರು.