Kundapra.com ಕುಂದಾಪ್ರ ಡಾಟ್ ಕಾಂ

ಒತ್ತಿನಣೆ ಗುಡ್ಡ ಕುಸಿತ ಪ್ರದೇಶಕ್ಕೆ ಬೈಂದೂರು ಶಾಸಕರ ಭೇಟಿ. ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಶಾಸಕ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸತತ ಮಳೆಯಿಂದಾಗಿ ಚತುಷ್ಪಥ ಕಾಮಗಾರಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಪಕ್ಕದ ಒತ್ತಿನಣೆ ಗುಡ್ಡ ಜರಿದು ಹೆದ್ದಾರಿ ತಡೆಯುಂಟಾದ ಪ್ರದೇಶಕ್ಕೆ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಅವರು ಭೇಟಿ ನೀಡಿ ವೀಕ್ಷಿಸಿದರು. ಇಲಾಖೆ ಹಾಗೂ ಗುತ್ತಿಗೆ ಪಡೆದ ಕಂಪೆನಿಯ ಅಭಿಯಂತರರಿಗೆ ಸತತವಾಗಿ ಮುನ್ನೆಚ್ಚರಿಕೆ ನೀಡಿದ್ದರೂ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಯೋಜನಾ ನಿರ್ದೇಶಕರು ಹಾಗೂ ಅರಣ್ಯ ಇಲಾಖೆಯ ಡಿಎಫ್‌ಓ ಅವರಿಗೆ ಕರೆಮಾಡಿದ ಶಾಸಕರು, ಕಳೆದ ಆರು ತಿಂಗಳುಗಳಿಂದ ಕಾಮಗಾರಿಯಿಂದ ಎದುರಾಗಬಹುದಾದ ಅಪಾಯದ ಮನ್ಸೂಚನ್ನೆಯನ್ನು ನೀಡಲಾಗಿತ್ತು. ಆದಾಗ್ಯೂ ಯಾರೋಬ್ಬರೂ ಈ ಬಗ್ಗೆ ಗಮನ ಹರಿಸದೇ ನಿರ್ಲಕ್ಷ್ಯ ಧೋರಣೆ ತಳೆದಿದ್ದೀರಿ. ಪ್ರತಿನಿತ್ಯ ಸಾವಿರಾರು ವಾಹನಗಳು ತಿರುಗಾಡುವ ಹೆದ್ದಾರಿಯಲ್ಲಿ ಗುಡ್ಡ ಕುಸಿತದಿಂದ ಆಗುವ ಅನಾಹುತಗಳಿಗೆ ಹೊಣೆ ಯಾರು ಎಂದು ಪ್ರಶ್ನಿಸಿದರು. ನಿಮ್ಮ ನಿರ್ಲಕ್ಷ್ಯ ಅಮಾಯಕರ ಸಮಯ ಹಾಗೂ ಬದುಕಿನೊಂದಿಗೆ ಚಲ್ಲಾಟವಾಡುವಂತಿರಬಾರದು. ಕೂಡಲೇ ಎಲ್ಲರೂ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶಿಸಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕರು, ಅರಣ್ಯ ಇಲಾಖೆಯ ಜಾಗದಲ್ಲಿ ಒತ್ತಿನಣೆ ಗುಡ್ಡದ ಮೇಲಿನಿಂದ ಹರಿದು ಬರುವ ನೀರು ಹೆದ್ದಾರಿಗೆ ಬೀಳದೇ ತಿರುವು ಮಾಡಿಕೊಟ್ಟಿದ್ದರೇ ಗುಡ್ಡ ಕುಸಿಯುವ ಪ್ರಮಾಣ ತೀವ್ರ ಕಡಿಮೆಯಾಗುತ್ತಿತ್ತು. ಗುತ್ತಿಗೆ ಕಂಪೆನಿಯವರಿಗೆ ನೀರು ಡೈವರ್ಷನ್ ಮಾಡಿ ಬಿಡಲು ಅರಣ್ಯ ನಿಯಮ ತಡೆಯುಂಟು ಮಾಡಿದೆ ಎನ್ನುತ್ತಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಾಸ್ತವವನ್ನು ಅರಿತು ಕ್ರಮ ಕೈಗೊಳ್ಳಲು ಒಪ್ಪಿಕೊಂಡಿದ್ದಾರೆ ಎಂದರು.

ಗುತ್ತಿಗೆ ನಡೆಸುತ್ತಿರುವ ಐಆರ್‌ಬಿ ಕಂಪೆನಿ ತೀವ್ರ ಕಳಪೆ ಕಾಮಗಾರಿ ನಡೆಸುತ್ತಿದ್ದು ಹೇಗೆಂದರೆ ಹಾಗೆ ಕಾಮಗಾರಿ ನಡೆದಿದೆ. ತಲ್ಲೂರಿನಿಂದ ಶಿರೂರಿನ ತನಕ ರಸ್ತೆ, ಚರಂಡಿ, ಡೈವರ್ಷನ್ ಎಲ್ಲವೂ ಅಪಾಯಕಾರಿಯಾಗಿ ಪರಿಣಮಿಸಿದೆ. ಹತ್ತಾರು ಎಕರೆ ಕೃಷಿ ಗದ್ದೆಗಳಿಗೆ ಜೇಡಿ ಮಣ್ಣು ನುಗ್ಗಿ ಕೃಷಿ ಮಾಡದಂತಾಗಿದೆ. ಸುರತ್ಕಲ್‌ನಿಂದ ಕುಂದಾಪುರದವರೆಗೆ ನಡೆದ ಬೇರೊಂದು ಕಂಪೆನಿಯ ಕಾಮಗಾರಿ ಹಾಗೂ ಇಲ್ಲಿ ನಡೆಯುತ್ತಿರುವ ಐಆರ್‌ಬಿ ಕಂಪೆನಿಯ ಕಾಮಗಾರಿಯನ್ನು ತುಲನೆ ಮಾಡಿದರೆ ನಿಜಸ್ಥಿತಿ ಅರಿವಿಗೆ ಬರಲಿದೆ. ಒತ್ತಿನಣೆ ಅವಾಂತರದ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಯೋಜನಾ ನಿರ್ದೇಶಕರ ಗಮನಕ್ಕೆ ತರಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಎಚ್ಚರಿಕೆ ನೀಡಲಾಗಿದೆ ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಜಿಲ್ಲಾ ಕೆಡಿಪಿ ಸದಸ್ಯ ಎಸ್. ರಾಜು ಪೂಜಾರಿ ಮಾತನಾಡಿ ಕಾಮಗಾರಿಯಂದಾಗಿ ಮಳೆಗಾಲದಲ್ಲಿ ಆಗಬಹುದಾದ ಅಪಾಯದ ಬಗೆಗೆ ಸತತವಾಗಿ ಎಚ್ಚರಿಸಿದ್ದರೂ ಸಂಬಂಧಿಸಿದ ಕಂಪೆನಿಯಾಗಲಿ, ಇಲಾಖಾ ಅಧಿಕಾರಿಗಳಾಗಲಿ ಗಮನ ಹರಿಸಿಲ್ಲ. ಕರಾವಳಿಯ ಮಳೆಯ ಪ್ರಮಾಣ, ಮಣ್ಣಿನ ಗುಣಲಕ್ಷಣದ ಬಗೆಗೆ ಅರಿವಿದ್ದರೂ ಇಂತಹ ನಿರ್ಲಕ್ಷ್ಯ ಧೋರಣೆ ತೋರುವುದು ಸರಿಯಲ್ಲ. ಇದು ಹೀಗೆಯೇ ಮುಂದುವರಿದರೆ ಬೈಂದೂರಿನ ನಾಗರಿಕರು ತೀವ್ರ ಪ್ರತಿಭಟನೆ ನಡೆಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನ್ ಕುಮಾರ್, ಗೋಕುಲ್ ಶೆಟ್ಟಿ, ಯುವ ಕಾಂಗ್ರೆಸ್‌ನ ಶೇಖರ್ ಪೂಜಾರಿ, ಪಡುವರಿ ಗ್ರಾಮ ಪಂಚಾಯತ್ ಸದಸ್ಯ ಮಾಣಿಕ್ಯ ಹೋಬಳಿದಾರ್ ಮೊದಲಾದವರು ಜೊತೆಗಿದ್ದರು.

Exit mobile version