Kundapra.com ಕುಂದಾಪ್ರ ಡಾಟ್ ಕಾಂ

18ರಂದು ಕೊಲ್ಲೂರಿಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ: ವಿಶೇಷ ಭದ್ರತೆಗೆ ಸಿದ್ಧತೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಜೂ. 18ರಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಕೊಲ್ಲೂರು ಕ್ಷೇತ್ರಕ್ಕೆ ಸಂದರ್ಶನ ಮಾಡಲಿರುವುದರಿಂದ ವಿಶೇಷ ಭದ್ರತೆ ಒದಗಿಸುವ ಸಲುವಾಗಿ ಪೊಲೀಸ್ ಉನ್ನತ ಅಧಿಕಾರಿಗಳ ಸಭೆ ನಡೆದಿದ್ದು, ದೇಗುಲದ ಪರಿಸರದ ಪರಿಶೀಲನೆ ನಡೆಸಲಾಗಿದೆ.
ರಾಷ್ಟ್ರಪತಿ ಕೊಲ್ಲೂರಿಗೆ ಆಗಮಿಸುವುದು ಬಹುತೇಕ ಖಚಿತವಾಗಿದ್ದು, ಈ ದಿಸೆಯಲ್ಲಿ ಅರೆಶಿರೂರಿನಲ್ಲಿ ಪ್ರಸ್ತುತ ಇರುವ ಹೆಲಿಪ್ಯಾಡ್ ಅಲ್ಲದೇ ಪ್ರತ್ಯೇಕ 2 ಹೆಲಿಪ್ಯಾಡ್ ನಿರ್ಮಿಸುವ ಸಲುವಾಗಿ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಚಂದ್ರಶೇಖರ ನೇತೃತ್ವದಲ್ಲಿ ಕಾಮಗಾರಿ ನಡೆಯುತ್ತಿದೆ. ದಿಲ್ಲಿ ವಿಶೇಷ ಪೊಲೀಸ್ ತಂಡ ಕೊಲ್ಲೂರಿಗೆ ಆಗಮಿಸಿದ್ದು, ಇಲ್ಲಿನ ಪರಿಸರದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಎನ್ಎಸ್ಜಿ ಕಮಾಂಡೋಗಳು ಕೊಡಚಾದ್ರಿ ಬೆಟ್ಟ ಸಮೇತ ಈ ಭಾಗದ ಬಗ್ಗೆ ವಿವರಣೆ ಕೇಳಿದ್ದು, ಅದಕ್ಕೆ ಪೂರಕವಾಗಿ ವಿಶೇಷ ಭದ್ರತೆ ಒದಗಿಸಲು ವ್ಯವಸ್ಥೆ ಮಾಡಲಾಗುತ್ತಿದೆ.

ದೇಗುಲದ ಅರ್ಚಕರು ಹಾಗೂ ಸಿಬಂದಿ ಸಹಿತ ಪ್ರತಿಯೋರ್ವರ ವಿವರಣೆ ಕೇಳಿರುವ ವಿಶೇಷ ಪೊಲೀಸ್ ಪಡೆ, ಪೂರ್ಣ ಮಾಹಿತಿ ಸಂಗ್ರಹಿಸುತ್ತಿದೆ. ಜೂ. 18ರಂದು ಮಧ್ಯಾಹ್ನದ ಅನಂತರ ಕೊಲ್ಲೂರಿಗೆ ಆಗಮಿಸಿ ಶ್ರೀ ದೇವಿಯ ದರ್ಶನ ಪಡೆದು ಹೆಲಿಕಾಪ್ಟರ್ನಲ್ಲಿ ಮಂಗಳೂರಿಗೆ ತೆರಳಲಿರುವ ರಾಷ್ಟ್ರಪತಿಯವರು ದೇಗುಲದಲ್ಲಿ ಸುಮಾರು 45 ನಿಮಿಷ ಕಾಲ ಉಪಸ್ಥಿತರಿರುವರು.

ನಿರ್ದಿಷ್ಟ ಸಂದರ್ಭ ಭಕ್ತರು ಸಮೇತ ಎಲ್ಲರಿಗೂ ದೇಗುಲ ಪ್ರವೇಶಕ್ಕೆ ನಿರ್ಬಂಧ ಹೇರಲಿದ್ದು, ಭದ್ರತೆ ನೆಲೆಯಲ್ಲಿ ಇಡೀ ದೇಗುಲದ ಸಂಪೂರ್ಣ ನಿಯಂತ್ರಣವನ್ನು ದಿಲ್ಲಿಯ ವಿಶೇಷ ಎನ್.ಎಸ್.ಜಿ. ಪಡೆಗಳು ತಮ್ಮ ಹತೋಟಿಗೆ ತೆಗೆದುಕೊಳ್ಳಲಿವೆ ಎಂದು ಮೂಲಗಳು ತಿಳಿಸಿವೆ.

Exit mobile version