ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗೋವುಗಳನ್ನು ಪ್ರೀತಿಸಿ ಮನುಷ್ಯರನ್ನು ಕೊಲ್ಲುವ ಗೋ ಭಯೋತ್ಪಾದಕ ಪಡೆ ಇಂದು ಹುಟ್ಟಿಕೊಂಡಿದೆ. ಅವರುಗಳ ದಬ್ಬಾಳಿಕೆಗೆ ಹೆದರದೇ ಐಕ್ಯತೆಯಿಂದ ಮುನ್ನಡೆಯುವ ನಮ್ಮ ನಡೆಯಿಂದ ಅಮಾಯಕರ ಮೇಲೆ ಹಲ್ಲೆ ನಡೆಸಿದವರ ಎದೆ ನಡುಗಬೇಕು. ಈ ದೇಶದ ಮೂಲ ನಿವಾಸಿ ಜನಾಂಗದ ಮಹಿಳೆಯ ಮೇಲೆ ದೌರ್ಜನ್ಯ ಎಸಗಿರುವವರನ್ನು ಬಂಧಿಸುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಪ್ರಧಾನ ಕಾರ್ಯದರ್ಶಿ ಕೆ. ಎಲ್. ಅಶೋಕ್ ಹೇಳಿದರು.
ಅವರು ಕುಂದಾಪುರದ ಶಾಸ್ತ್ರೀ ಸರ್ಕಲ್ ಬಳಿ ಕರ್ನಾಟಕ ದಲಿತ ಸಂಘರ್ಷ ಸಮಿತಿಗಳ ಮಹಾ ಒಕ್ಕೂಟ, ಕರ್ನಾಟಕ ದಲಿತ ಹಿಂದುಳಿತ ಮತ್ತು ಅಲ್ಪಸಂತ್ಯಾತ ಸಂಘಟನೆಗಳ ಒಕ್ಕೂಟ, ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಮೊವಾಡಿ ಚಲೋ ಜಾಥಾ ಮತ್ತು ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಕರಾವಳಿಯಲ್ಲಿ ದಲಿತರು, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರು ಬದುಕಬಾರದು ಎಂದು ಬ್ರಾಹ್ಮಣ್ಯವನ್ನು ಉಸಿರಾಗಿಸಿಕೊಂಡಿರುವ ಸಂಘ ಪರಿವಾರ ನಿರ್ಧರಿಸಿವೆ. ಆಹಾರ ಕ್ರಮದಲ್ಲಿ ಶ್ರೇಷ್ಠ ಕನಿಷ್ಠ ಎಂದು ವಿಂಗಡಿಸುವ ಇಂತಹ ಮನಸ್ಥಿತಿಯವರಿಂದ ಕರಾವಳಿ ಜಿಲ್ಲೆಗಳಲ್ಲಿ ಗೋವಿನ ಕಾರಣಕ್ಕೆ ಎಷ್ಟೋ ಕೊಲೆಗಳಾಗಿವೆ ಆರ್ಥಿಕತೆಗೆ ಭಂಗವಾಗಿದೆ. ಮೇಲು ಕೀಳನ್ನು ಸಮರ್ಥಿಸುವ ಇಂತಹ ಸಂಘಟನೆಗಳಿಂದ ಯುವಕರು ದೂರ ಉಳಿಯುವುದು ಒಳ್ಳೆಯದು ಎಂದಅವರು ಹೇಳಿದರು.
ದನ ತಿನ್ನುವುದಿಲ್ಲ ಎನ್ನುವವರ ಬಗ್ಗೆ ನಮಗೆ ಗೌರವವಿದೆ. ನಾವು ಅವರ ಆಹಾರ ಸಂಸ್ಕೃತಿಯನ್ನು ಪ್ರಶ್ನಿಸಲಾರೆವು. ಆದರೆ ಹಾಲು ಕೊಡದ, ವಯಸ್ಸಾದ ಜಾನವಾರುಗಳನ್ನು ಏನು ಮಾಡುತ್ತೀರಿ ಎಂದು ಪ್ರಶ್ನಿಸಿದರೆ ಗೋಪ್ರೇಮಿಗಳಲ್ಲಿ ಉತ್ತರವಿಲ್ಲ. ಗೋವು ಆಹಾರವಾಗಿ ಬೇಕು ಎಂಬುದನ್ನು ದೇಶದ ಬಹುಸಂಖ್ಯಾತರಾದ ಹಿಂದೂಗಳೇ ಹೇಳುತ್ತಾರೆ ಎಂದವರು ನುಡಿದರು.
ದಲಿತರು ಹಾಗೂ ದಮನಿತರ ಮೇಲೆ ನಡೆಸುವ ಹಲ್ಲೆಯನ್ನು ನಾವೆಲ್ಲರೂ ಖಂಡಿಸುತ್ತೇವೆ. ನ್ಯಾಯ ಸಿಗುವ ತನಕ ಕೆಚ್ಚೆದೆಯಿಂದ ಹೋರಾಡುತ್ತೇವೆ ಎಂದ ಅವರು ಭಾರತದ ಪ್ರಜಾಪ್ರಭುತ್ವ ವಿರೋಧಿ ಕಾನೂನು ಎಲ್ಲಾ ಸಮಾಜದ ಎಲ್ಲಾ ವರ್ಗದವರ ಮೇಲೆಯೂ ಅಡ್ಡ ಪರಿಣಾಮ ಬೀರಲಿದೆ ಎಂದವರು ಹೇಳಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಗಳ ಮಹಾ ಒಕ್ಕೂಟದ ಉಡುಪಿ ಜಿಲ್ಲಾಧ್ಯಕ್ಷ ಉದಯಕುಮಾರ್ ತಲ್ಲೂರು ಅಧ್ಯಕ್ಷತೆ ವಹಿಸಿದ್ದರು. ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ಸಂಚಾಲಕ ಬಿ. ಆರ್. ಭಾಸ್ಕರ್ ಪ್ರಸಾದ್ ಅವರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆಗೈದರು. ಜಿಲ್ಲಾ ಮುಸ್ಲಿಂ ಒಕ್ಕೂಟದ ಕಾರ್ಯದರ್ಶಿ ಮಹಮ್ಮದ್ ಹೂಡೆ, ಕರ್ನಟಕ ಕೇರಳ ಕೊರಗ ಸಂಘಟನೆಗಳ ಅಭಿವೃದ್ಧಿ ಒಕ್ಕೂಟದ ಅಧ್ಯಕ್ಷ ಸುಂದರ ಬೆಳುವಾಯಿ, ಕೊರಗ ಸಂಘಟನೆಯ ಮುಖಂಡರಾದ ಗೌರಿ ಕೆಂಜೂರು, ಕೆ.ಕೆ.ಎಸ್.ವಿ ಉಡುಪಿ ಜಿಲ್ಲಾಧ್ಯಕ್ಷ ಜಿ. ರಾಜಶೇಖರ್, ಸುಂದರ್ ಮಾಸ್ತರ್, ಶೇಖರ ಹೆಜಮಾಡಿ, ಪ್ರಶಾಂತ್ ಜತ್ತನ್ನ, ವಿಶ್ವನಾಥ ಪೇತ್ರಿ, ಚಂದ್ರ ಅಲ್ತಾರು, ಮೈಕಲ್ ಪಿಂಟೋ, ಶಾಬನ್ ಹಂಗಳೂರು, ಹನಿಫ್ ಗಂಗೊಳ್ಳಿ, ಸುಂದರ ಕಪ್ಪೆಟ್ಟು, ಶ್ಯಾಮಸುಂದರ್ ತೆಕ್ಕಟ್ಟೆ, ಶ್ಯಾಮರಾಜ್ ಬಿರ್ತಿ, ಬೊಗ್ರ ಕೊರಗ ಕೊಕ್ಕರ್ಣೆ, ಚಂದ್ರಮ ತಲ್ಲೂರು, ಯಾಸಿನ್ ಕೋಡಿಬೇಂಗ್ರೆ, ಜೆರಾಲ್ಡ್ ನ್ಯೋಟನ್, ಅಸ್ಗರ್ ಅಲಿ, ಕೆ.ಎಸ್. ವಿಜಯ, ಸತೀಶ್ ತೆಕ್ಕಟ್ಟೆ, ವಿಠಲ್ ತೊಟ್ಟಂ, ವಾಸುನೇಜಾರ್, ಗೋಪಾಲ ವಿ, ಸುರೇಶ್ ಬಾಬು ಮೊದಲಾದವರು ಉಪಸ್ಥಿತರಿದ್ದರು.
ಕರ್ನಾಟಕ ದಲಿತ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಂಘಟನೆಗಳ ಒಕ್ಕೂಟ (ದಲಿತ ಸ್ವಾಭಿಮಾನಿ ಹೋರಾಟ ಸಮಿತಿ)ದ ಗೌರವಾಧ್ಯಕ್ಷ ರೆ.ಫಾ. ವಿಲಿಯಂ ಮಾರ್ಟಿಸ್, ಮೊವಾಡಿ ಚಲೋ ಜಾಥಾಕ್ಕೆ ಮೊವಾಡಿಯಲ್ಲಿ ಚಾಲನೆ ನೀಡಿ ಮಾತನಾಡಿದರು.
ಮೊವಾಡಿಯಲ್ಲಿ ದೌರ್ಜನ್ಯಕ್ಕೊಳಗಾದ ಶಕುಂತಲಾ ಅವರು ಬಹಿರಂಗ ಸಭೆಯಲ್ಲಿ ಮಾತನಾಡಿದರು. ಕುಂದಾಪುರ ಕ್ಯಾಥೋಲಿಕ್ ಸಭಾದ ವಿನೋದ್ ಕ್ರಾಸ್ತಾ ಸ್ವಾಗತಿಸಿ, ಎಸ್. ಎಸ್. ಪ್ರಸಾದ್ ಧನ್ಯವಾದಗೈದರು. ಅನಂತ ಮಚ್ಚಟ್ಟು, ವಸಂತ್ ವಂಡ್ಸೆ ನಿರೂಪಿಸಿದರು.