ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ಮೊವಾಡಿ ಗೋಹತ್ಯೆ ಪ್ರಕರಣದಲ್ಲಿ ಕೊರಗ ಸಮುದಾಯದ ಮೇಲೆ ನಡೆದ ದೌರ್ಜನ್ಯ ಹಾಗೂ ಹಲ್ಲೆ ಖಂಡನೀಯ. ಆದರೆ ಇದೇ ವಿಚಾರವನ್ನು ಮುಂದಿಟ್ಟುಕೊಂಡು ದಲಿತರನ್ನು ದಲಿತರ ವಿರುದ್ಧ ಎತ್ತಿಕಟ್ಟುವ ಪೈಶಾಶಿಕ ಕೃತ್ಯ ನಡೆಸಲಾಗುತ್ತಿದೆ. ಮೊವಾಡಿ ಘಟನೆಯನ್ನು ಬಳಸಿಕೊಂಡು ಸಮಾಜದ ಶಾಂತಿಯನ್ನು ಕೆಡಿಸುವ ಹಾಗೂ ಪರಿಸರದಲ್ಲಿ ಅನಗತ್ಯವಾಗಿ ಭಯಭೀತಿ ಸೃಷ್ಟಿ ಮಾಡುತ್ತಿರುವ ಕ್ರೂರ, ಕ್ರೌರ್ಯ ಮನಸ್ಸಿನ ಸಮಾಜಘಾತುಕ ಶಕ್ತಿಗಳ ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ ಎಂದು ಪ್ರಗತಿಪರ ಚಿಂತಕ ಮತ್ತು ದಲಿತ ಸಂಘರ್ಷ ಸಮಿತಿಯ ಹೋರಾಟಗಾರ ಜಯನ್ ಮಲ್ಪೆ ಹೇಳಿದರು.
ಅವರು ಮೊವಾಡಿಯಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಮೊವಾಡಿ ಗ್ರಾಮ ಶಾಖೆ ಆಶ್ರಯದಲ್ಲಿ ಜರಗಿದ ಮೊವಾಡಿ ಸ್ವಾಭಿಮಾನಿ ಸಮಾವೇಶವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಶಾಂತಿ ಮತ್ತು ಸೌಹಾರ್ದತೆಯ ನೆಲೆಬೀಡಾಗಿದ್ದ ಮೊವಾಡಿಯಲ್ಲಿ ಜನರು ಜಾತಿ ಮತ ಭೇದ ಮರೆತು ಸಹಬಾಳ್ವೆಯ ಜೀವನ ನಡೆಸುತ್ತಿದ್ದರು. ಅಂಬೇಡ್ಕರ್ ಅವರ ಚಿಂತನೆ ಸ್ವಾಭಿಮಾನದ ಬಗ್ಗೆ ತಿಳುವಳಿಕೆ ಇಲ್ಲದ ಜನರು ತಮ್ಮ ಬೇಳೆ ಬೇಯಿಸಿಕೊಳ್ಳಲು, ತಮ್ಮ ನಾಯಕತ್ವದ ಮಾರ್ಕೆಟಿಂಗ್‌ಗಾಗಿ ಮೊವಾಡಿ ಘಟನೆಯನ್ನು ಕೊರಗರ ಜಾತಿ ಟ್ರಂಪ್ ಕಾರ್ಡ್ ಬಳಸಿ ಸುಳ್ಳು ಮಾಹಿತಿ ನೀಡಿ ಮೊವಾಡಿಯಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಮುಗ್ಧ ಬಡ ಜನರನ್ನು ಬಲಿಪಶುಗಳನ್ನಾಗಿ ಮಾಡಲಾಗುತ್ತಿದೆ. ಅಮಾಯಕ ಬಡ ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡಲಾಗುತ್ತಿದೆ. ಮೊವಾಡಿ ಘಟನೆಯಲ್ಲಿ ಸಂಘ ಪರಿವಾರದ ಮುಖಂಡರ ಪಾತ್ರ ಇಲ್ಲದಿದ್ದರೂ ಸಂಘ ಪರಿವಾರದ ಹೆಸರನ್ನು ಬಳಸಿಕೊಂಡು ದಲಿತರನ್ನು ನಾಶ ಮಾಡುವ ವ್ಯವಸ್ಥಿತ ಸಂಚು ನಡೆಯುತ್ತಿದೆ ಎಂದು ಅವರು ಹೇಳಿದರು.
ಮೊವಾಡಿಯ ಮಾನ ಮರ್ಯಾದೆಗೆ ಹಾಗೂ ದಲಿತರ ಸ್ವಾಭಿಮಾನಕ್ಕೆ ಧಕ್ಕೆ ಬರಲು ಬಿಡುದಿಲ್ಲ. ಸಂಘಟನೆಯ ಹೆಸರು ಹೇಳಿಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಹಾಗೂ ತಮ್ಮ ನಾಯಕತ್ವದ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಕೆಲವರ ಪ್ರಯತ್ನ ಈಡೇರಲು ಬಿಡುದಿಲ್ಲ. ಮಾತುಕತೆ ಮೂಲಕ ಇತ್ಯರ್ಥಪಡಿಸಬಹುದಾಗಿದ್ದ ಘಟನೆಯನ್ನು ತಮ್ಮ ಲಾಭಗೋಸ್ಕರ ಬೆಳೆಸುತ್ತಿರುವ ಸಮಾಜಘಾತುಕ ಶಕ್ತಿಗಳ ಆಸೆ ಎಂದಿಗೂ ಈಡೇರಲು ಸಾಧ್ಯವಿಲ್ಲ. ಮೊವಾಡಿ ಗ್ರಾಮದಲ್ಲಿ ಎಲ್ಲರೂ ಶಾಂತಿ ಸೌಹಾರ್ದತೆಯಿಂದ ಬಾಳಲು ಮತ್ತು ದಲಿತರ ಒಡೆದು ತಮ್ಮ ಕಾರ್ಯಸಾಧನೆ ಮಾಡಲು ಹೊರಟಿರುವ ಶಕ್ತಿಗಳ ವಿರುದ್ಧ ಹೋರಾಟ ನಡೆಸಲು ಸಿದ್ಧ ಎಂದು ಅವರು ಹೇಳಿದರು.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಮೊವಾಡಿ ಗ್ರಾಮ ಶಾಖೆಯ ಸಂಚಾಲಕ ಸದಾನಂದ ಮೊವಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದ.ಸಂ.ಸ ಪ್ರಧಾನ ಉಡುಪಿ ಜಿಲ್ಲಾ ಸಂಘಟನಾ ಸಂಚಾಲಕ ಟಿ.ಮಂಜುನಾಥ ಗಿಳಿಯಾರು ದಿಕ್ಸೂಚಿ ಭಾಷಣ ಮಾಡಿದರು. ಕುಂದಾಪುರ ವಕೀಲ ಸತೀಶ ಕಾಳಾವರ್ಕರ್, ದ.ಸಂ.ಸ ಉಡುಪಿ ಜಿಲ್ಲಾ ಸಂಘಟನಾ ಸಂಚಾಲಕ ವಾಸುದೇವ ಮುದೂರು, ಕುಂದಾಪುರ ತಾಲೂಕು ಮಹಿಳಾ ಒಕ್ಕೂಟದ ಸಂಚಾಲಕಿ ಗೀತಾ ಸುರೇಶ ಕುಮಾರ್, ಪ್ರಗತಿಪರ ಹೋರಾಟಗಾರ ಧರ್ಮರಾಜ ಮುದಲಿಯಾರ್, ಗೋಪಾಲ ಕಳಂಜೆ, ಪ್ರಭಾಕರ ವಿ., ರಾಮ ಕುಂದಾಪುರ, ಗೋಪಾಲಕೃಷ್ಣ ನಾಡ, ಗಿರೀಶ ಕುಮಾರ್ ಗಂಗೊಳ್ಳಿ, ಮಹೇಶ ಜಿ. ಗಂಗೊಳ್ಳಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಭಾಕರ ಮೊವಾಡಿ ಸ್ವಾಗತಿಸಿದರು. ಕುಂದಾಪುರ ತಾಲೂಕು ಸಂಚಾಲಕ ರಾಜು ಕೆ.ಸಿ. ಬೆಟ್ಟಿನಮನೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಜೀವ ಹೊಸಾಡು ಮತ್ತು ಸಂತೋಷ ಆನಗಳ್ಳಿ ಕಾರ್ಯಕ್ರಮ ನಿರೂಪಿಸಿದರು.
Read this
► ಗೋಪ್ರೇಮಿ, ಮಾನವ ದ್ವೇಷಿ ಗೋ ಭಯೋತ್ಸಾದಕರು ಹೆಚ್ಚಿದ್ದಾರೆ – http://kundapraa.com/?p=23442