Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು: ಹಾವು ಕಚ್ಚಿ ಮಹಿಳೆ ಸಾವು. ವೈದ್ಯರ ನಿರ್ಲಕ್ಷ್ಯ ಆರೋಪ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ/ಬೈಂದೂರು: ಮನೆಯಲ್ಲಿ ಹಾವು ಕಚ್ಚಿದ್ದ ಮಹಿಳೆಗೆ ಸೂಕ್ತ ಚಿಕಿತ್ಸೆ ದೊರೆಯದೇ ಮೃತಪಟ್ಟ ಘಟನೆ ವರದಿಯಾಗಿದ್ದು, ಮಹಿಳೆಯ ಸಾವಿಗೆ ಸರಕಾರಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಕುಟುಂಬಿಕರು ಆರೋಪಿಸಿದ್ದಾರೆ. ಬೈಂದೂರು ಯೋಜನಾನಗರ ನಿವಾಸಿ ಗಜಾನನ ಪೂಜಾರಿ ಎಂಬುವವರ ಪತ್ನಿ ವಿಶಾಲಾಕ್ಷಿ (35 ಎಂಬುವವರು ಮೃತ ದುರ್ದೈವಿ.

ಯೋಜನಾನಗರದ ವೀಶಾಲಾಕ್ಷಿ ಎಂಬುವವರು ಮಧ್ಯಾಹ್ನ ಅಡುಗೆ ಮಾಡುತ್ತಿದ್ದ ವೇಳೆ ಮನೆಯಲ್ಲಿ ಹಾವು ಕಚ್ಚಿದ್ದರಿಂದ ಅವರನ್ನು ಕೂಡಲೇ ಬೈಂದೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಹಾವು ಕಚ್ಚಿರುವುದಕ್ಕೆ ಚಿಕಿತ್ಸೆ ಲಭ್ಯವಿಲ್ಲದ ಕಾರಣ ಕೂಡಲೇ ಕುಂದಾಪುರದ ಸರಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದರು. ಆಸ್ಪತ್ರೆಯಲ್ಲಿ ಮಹಿಳೆಯ ರಕ್ತ ಪರೀಕ್ಷೆಗಾಗಿ ಸ್ಪಲ್ವ ಕಾಯುವಂತೆ ಸೂಚಿಸಿದ್ದರು. ಆದರೆ ಆತಂಕಗೊಂಡಿದ್ದ ಮನೆಯವರು ಬೇರೆಡೆಗೆ ಚಿಕಿತ್ಸೆಗೆ ಕರೆದೊಯ್ದಿದ್ದರು. ಅಲ್ಲಿಯೂ ಸರಿಯಾದ ಚಿಕಿತ್ಸೆ ಸ್ಪಂದನೆ ದೊರೆಯದೇ ಮತ್ತೆ ಸರಕಾರಿ ಆಸ್ಪತ್ರೆಗೆ ಮರಳಿ ಬರುವ ವೇಳೆಗಾಗಲೇ ವಿಷವೇರಿ ಮಹಿಳೆ ಮೃತಪಟ್ಟಿದ್ದರು.

ವೈದ್ಯರ ನಿರ್ಲಕ್ಷ್ಯ ಆರೋಪ:
ಮಹಿಳೆಯ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಕುಟುಂಬಿಕರು ಹಾಗೂ ಕೆಲ ಸಂಘಟನೆಯ ಪ್ರಮುಖರು ಆಸ್ಪತ್ರೆಯಲ್ಲಿಯೇ ಕುಳಿತು ಪ್ರತಿಭಟನೆಗೆ ಮುಂದಾಗಿದ್ದು, ತಪ್ಪಿತಸ್ಥರನ್ನು ಅಮಾನತುಗೊಳಿಸುವಂತೆ ಆಗ್ರಹಿಸಿದ್ದಾರೆ. ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರುಗಳ ನಿರ್ಲಕ್ಷ್ಯದಿಂದ ಅಮಾಯಕರ ಜೀವ ಬಲಿಯಾಗುತ್ತಿದೆ. ಇತ್ತಿಚಿಗಷ್ಟೇ ಮಹಿಳೆಯೋರ್ವರಿಗೆ ಹೆರಿಗೆ ಮಾಡಿಸದೇ ಹಿಂದಕ್ಕೆ ಕಳುಹಿಸಿದ ಅಮಾನವೀಯ ಪ್ರಕರಣ ನಡೆದಿದೆ. ಅದರ ಬೆನ್ನಲ್ಲೇ ಈ ಪ್ರಕರಣ ನಡೆದಿರುವುದು ಆತಂಕಕಾರಿ. ಈ ಘಟನೆ ಕೂಡ ಆಸ್ಪತ್ರೆಯ ಸಿಬ್ಬಂಧಿಗಳ ನಿರ್ಲಕ್ಷ್ಯದಿಂದಲ್ಲೇ ಆಗಿದೆ ಎಂದು ಕಾರ್ಮಿಕ ವೇದಿಕೆ ಅಧ್ಯಕ್ಷ ರವಿ ಶೆಟ್ಟಿ ಆರೋಪಿಸಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಪ್ರತಿಕ್ರಿಯಿಸಿ ಕುಂದಾಪುರ ಆಸ್ಪತ್ರೆಯ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಮಹಿಳೆ ಮೃತಪಟ್ಟಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಆ ಕಾರಣಕ್ಕೆ ಆಸ್ಪತ್ರೆಯ ಸಿಸಿ ಕ್ಯಾಮರಾವನ್ನು ಪರಿಶೀಲಿಸಲು ತಿಳಿಸಲಾಗಿದೆ. ಸಿಬ್ಬಂಧಿಗಳು ಅನಗತ್ಯವಾಗಿ ಚಿಕಿತ್ಸೆ ನೀಡಲು ವಿಳಂಬ ಮಾಡಿರುವುದು ಕಂಡುಬಂದರೆ ಅವರ ವಿರುದ್ಧ ಸೂಕ್ತ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ. ಅದರಂತೆ ಜಿಲ್ಲಾ ಆರೋಗ್ಯಧಿಕಾರಿ ಡಾ. ರೋಹಿಣಿ, ತಹಶೀಲ್ದಾರರುಗಳಾದ ಜಿ.ಎಂ. ಬೋರ್ಕರ್, ಕಿರಣ್ ಗೌರಯ್ಯ, ಕುಂದಾಪುರದ ವೃತ್ತ ನಿರೀಕ್ಷಕ ಮಂಜಪ್ಪ, ಕುಂದಾಪುರ ಠಾಣಾಧಿಕಾರಿ ನಾಸೀರ್, ಬೈಂದೂರು ಠಾಣಾಧಿಕಾರಿ ಸಂತೋಷ್ ಕಾಯ್ಕಿಣಿ ಆಸ್ಪತ್ರೆಯ ಸಿಸಿ ಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದ್ದಾರೆ. ಆಸ್ಪತ್ರೆಯಿಂದ ಮಹಿಳೆಯನ್ನು ಕರೆದುಕೊಂಡು ತೆರಳಿರುವುದು, ಎರಡು ಗಂಟೆಯ ಬಳಿಕ ಹಿಂದಿರುಗುವ ದೃಶ್ಯಾವಳಿ ದಾಖಲಾಗಿದೆ.  ಕುಂದಾಪ್ರ ಡಾಟ್ ಕಾಂ ಸುದ್ದಿ.

ವೈದ್ಯರ ನಿರ್ಲಕ್ಷ್ಯವಿಲ್ಲ:
ಹಾವು ಕಡಿತಕ್ಕೊಳಗಾದ ಮಹಿಳೆಯನ್ನು ಕರೆತಂದ ಕೂಡಲೇ ಚಿಕಿತ್ಸೆಗಾಗಿ ಸ್ಪಂದಿಸಿದ್ದ ರಕ್ತ ಪರೀಕ್ಷೆಗಾಗಿ ಕೂರಿಸಲಾಗಿತ್ತು. ಆದರೆ ಅವರ ಮನೆಯವರು ಬೇರೆಡೆ ಚಿಕಿತ್ಸೆ ಕೋಡಿಸುವುದಾಗಿ ತಿಳಿಸಿ ತೆರಳಿದ್ದರು. ಅವರು ಮರಳಿ ಎರಡು ಗಂಟೆಯ ಬಳಿಕ ಆಸ್ಪತ್ರಗೆ ಬರುವ ವೇಳೆಗೆ ಮಹಿಳೆ ಮೃತಪಟ್ಟಿದ್ದರು. ಇದರಲ್ಲಿ ವೈದ್ಯರ ನಿರ್ಲಕ್ಷ್ಯವಿಲ್ಲ ಎಂದು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಉದಯಶಂಕರ್ ಕುಂದಾಪ್ರ ಡಾಟ್ ಕಾಂ ಗೆ ತಿಳಿಸಿದ್ದಾರೆ.

ಆಸ್ಪತ್ರೆಗೆ ಮಾಜಿ ಜಿ.ಪಂ ಅಧ್ಯಕ್ಷ ಎಸ್. ರಾಜು ಪೂಜಾರಿ, ಕಾರ್ಮಿಕ ವೇದಿಕೆ ಅಧ್ಯಕ್ಷ ರವಿ ಶೆಟ್ಟಿ, ಕರವೇ ಜಿಲ್ಲಾಧ್ಯಕ್ಷ ಅನ್ಸರ್ ಅಹಹ್ಮದ್, ಸಿಪಿಐಎಂ ಮುಖಂಡ ವೆಂಕಟೇಶ ಕೋಣಿ, ಜೆಡಿಎಸ್ ಕುಂದಾಪುರ ಬ್ಲಾಕ್ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಮೊದಲಾದವರು ಭೇಟಿ ನೀಡಿದ್ದರು.

 

Exit mobile version