Kundapra.com ಕುಂದಾಪ್ರ ಡಾಟ್ ಕಾಂ

ಅಕ್ರಮ ಗೋಹತ್ಯೆ ಹಾಗೂ ಗೋಸಾಗಾಟ ಖಂಡಿಸಿ ಪ್ರತಿಭಟನೆ

?

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ದೇಶ ಸಮಾಜಕ್ಕಾಗಿ ದುಡಿಯುತ್ತಿರುವ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರ ವಿರುದ್ಧ ಐಪಿಸಿ ಸೆಕ್ಷನ್ ೩೦೭ರ ಅಡಿ ಸುಳ್ಳು ಮೊಕದ್ದಮೆ ದಾಖಲಿಸಿ ಅವರನ್ನು ಬಂಧಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಸೂಚನೆ ನೀಡಿರುವ ಸಚಿವ ಬಿ.ರಮಾನಾಥ ರೈ ಅವರ ಕ್ರಮ ಖಂಡನೀಯ ಎಂದು ಹಿಂದು ಜಾಗರಣ ವೇದಿಕೆ ಜಿಲ್ಲಾ ಸಂಚಾಲಕ ಅರವಿಂದ ಕೋಟೇಶ್ವರ ಹೇಳಿದರು.

ಅವರು ಗಂಗೊಳ್ಳಿ ಗ್ರಾಮ ಪಂಚಾಯತ್ ಎದುರು ಹಿಂದು ಜಾಗರಣ ವೇದಿಕೆ ಗಂಗೊಳ್ಳಿ ಇವರ ಆಶ್ರಯದಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಅಕ್ರಮ ಗೋಹತ್ಯೆ ಹಾಗೂ ಅಕ್ರಮ ಗೋಸಾಗಾಟ ಖಂಡಿಸಿ ಜರಗಿದ ಸಾರ್ವಜನಿಕ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಸಚಿವ ರಮಾನಾಥ ರೈ ಅವರು ಸಚಿವರು ಸದನದಲ್ಲಿ ನಿದ್ದೆ ಮಾಡುವುದನ್ನು ಬಿಟ್ಟು ಕಾನೂನು ಅರಿತುಕೊಳ್ಳಲು ಮುಂದಾಗಲಿ. ಹಿಂದು ಸಮಾಜದ ಮೇಲೆ ನಿರಂತರವಾಗಿ ನಡೆಸುತ್ತಿರುವ ಕುತಂತ್ರವನ್ನು ನಿಲ್ಲಿಸಬೇಕು. ಸಚಿವರ ಕುಮ್ಮಕ್ಕಿನಿಂದ ಡಾ.ಪ್ರಭಾಕರ ಭಟ್ ಅವರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಿ ಬಂಧಿಸಲು ಮುಂದಾದರೆ ನಮ್ಮದೇ ರೀತಿಯಲ್ಲಿ ಉತ್ತರ ನೀಡಲು ಸಿದ್ಧರಿದ್ದೇವೆ. ನಮ್ಮ ಸಮಾಜದ ನಾಯಕರ ಮೇಲೆ ನಡೆಯುತ್ತಿರುವ ಇಂತಹ ದೌರ್ಜನ್ಯವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

ಗಂಗೊಳ್ಳಿ ಪ್ರದೇಶದಲ್ಲಿ ಕಳೆದ ಕೆಲವು ತಿಂಗಳಿನಿಂದ ಗೋವುಗಳ ಮೂಳೆ ಕಂಡು ಬರುತ್ತಿದ್ದರು ಇದರಿಂದ ಗಂಗೊಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಕ್ರಮವಾಗಿ ಗೋಹತ್ಯೆ ನಡೆಯುತ್ತಿರುವುದು ಖಚಿತವಾಗಿದೆ. ರಾಜ್ಯದಲ್ಲಿ ಜಾರಿಯಲ್ಲಿರುವ ಗೋಸಂರಕ್ಷಣಾ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದರೆ ಇಂತಹ ಅಕ್ರಮ ಗೋಹತ್ಯೆ, ಗೋಸಾಗಾಟವನ್ನು ತಡೆಗಟ್ಟಬಹುದು. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಗಂಗೊಳ್ಳಿ ಪರಿಸರದಲ್ಲಿ ನಡೆಯುತ್ತಿರುವ ಅಕ್ರಮ ಗೋಹತ್ಯೆ ಹಾಗೂ ಅಕ್ರಮ ಗೋಸಾಗಾಟವನ್ನು ತಡೆಗಟ್ಟಲು ಸಾಧ್ಯವಾಗದಿದ್ದರೆ ಹಿಂದು ಸಮಾಜ ರಸ್ತೆಗಿಳಿಯುವುದು ಅನಿವಾರ್ಯವಾಗಲಿದೆ. ಹಿಂದು ಸಮಾಜ ಎದ್ದು ನಿಲ್ಲುವ ಮೊದಲು ಸಂಬಂಧಪಟ್ಟ ಇಲಾಖಾಧಿಕಾರಿಗಳು ಈ ನಿಟ್ಟಿನಲ್ಲಿ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಇಲ್ಲವಾದಲ್ಲಿ ಹಿಂದು ಸಮಾಜ ಇಂತಹ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯಲು ಮುಂದಾಗಲಿದೆ ಎಂದರು.

ಹಿಂದು ಜಾಗರಣ ವೇದಿಕೆ ಜಿಲ್ಲಾ ಸಹಸಂಚಾಲಕ ವಾಸುದೇವ ದೇವಾಡಿಗ, ಹಿಂದು ಜಾಗರಣ ವೇದಿಕೆ ಗಂಗೊಳ್ಳಿ ಘಟಕದ ಅಧ್ಯಕ್ಷ ಗೋವಿಂದ್ರಾಯ ಶೇರುಗಾರ್ ಮಾತನಾಡಿದರು.

ಬಳಿಕ ಬೈಂದೂರು ಪೊಲೀಸ್ ವೃತ್ತನಿರೀಕ್ಷಕ ರಾಘವ ಪಡೀಲ್ ಹಾಗೂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಿ.ಮಾಧವ ಅವರಿಗೆ ಮನವಿ ಸಲ್ಲಿಸಲಾಯಿತು. ಮವಿ ಸ್ವೀಕರಿಸಿ ಮಾತನಾಡಿದ ಬೈಂದೂರು ಪೊಲೀಸ್ ವೃತ್ತನಿರೀಕ್ಷಕ ರಾಘವ ಪಡೀಲ್, ಯಾರೂ ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡಬಾರದು. ಅಕ್ರಮ ಗೋಹತ್ಯೆ, ಅಕ್ರಮ ಗೋಸಾಗಾಟದ ಬಗ್ಗೆ ಮಾಹಿತಿ ಇದ್ದರೆ ಇಲಾಖೆಯ ಅಧಿಕಾರಿಗಳಿಗೆ ನೀಡಬಹುದು. ಪೊಲೀಸ್ ಇಲಾಖೆ ಈ ನಿಟ್ಟಿನಲ್ಲಿ ತನ್ನದೇ ಆದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಯಾರಿಗೂ ಅನ್ಯಾಯವಾಗದ ರೀತಿಯಲ್ಲಿ ಕಾನೂನು ಕ್ರಮಕೈಗೊಳ್ಳಲಿದೆ ಎಂದರು.

ತಾಲೂಕು ಪಂಚಾಯತ್ ಸದಸ್ಯ ಸುರೇಂದ್ರ ಖಾರ್ವಿ, ಕುಂದಾಪುರ ಪುರಸಭೆ ಉಪಾಧ್ಯಕ್ಷ ರಾಜೇಶ ಕಾವೇರಿ, ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ, ಹಿಂದು ಸಂಘಟನೆಯ ಮುಖಂಡರಾದ ಉಮಾನಾಥ ದೇವಾಡಿಗ, ರತ್ನಾಕರ ಗಾಣಿಗ, ರಾಘವೇಂದ್ರ ಗಾಣಿಗ, ಯಶವಂತ ಖಾರ್ವಿ, ನವೀನ ದೊಡ್ಡಹಿತ್ಲು, ಶ್ರೀಧರ ನಾಯ್ಕ್, ಜಯರಾಮ ದೇವಾಡಿಗ, ಮೋಹನ ಖಾರ್ವಿ, ರೇಣುಕಾ ವಾಸುದೇವ ದೇವಾಡಿಗ, ಪ್ರೇಮಾ ಸಿ.ಎಸ್.ಪೂಜಾರಿ, ಲಕ್ಷ್ಮೀ ಗಾಣಿಗ ಮೊದಲಾದವರು ಉಪಸ್ಥಿತರಿದ್ದರು.

 

Exit mobile version