ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ಪೇಟೆಯ ಸಮೀಪ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಐಆರ್‌ಬಿ ಕಂಪೆನಿಯ ಅಸಮರ್ಪಕ ಕಾಮಗಾರಿಯಿಂದಾಗಿ ಇಲ್ಲಿನ ಇಲ್ಲಿನ ನಿವಾಸಿಯೋರ್ವರ ಮನೆಯ ಆವರಣ ಹಾಗೂ ತೋಟಕ್ಕೆ ಜೇಡಿ ಮಣ್ಣು ಮಿಶ್ರಿತ ನೀರು ನುಗ್ಗಿ ಹಾನಿ ಉಂಟು ಮಾಡಿದೆ.
ಅರೆಬರೆ ಚರಂಡಿ ಕಾರ್ಯ ಕೈಗೊಂಡಿರುವ ಕಂಪೆನಿ ದಿನೇಶ್ ಗಾಣಿಗ ಅವರ ಮನೆಯ ಎದುರು ಈವರೆಗೂ ಚರಡಿ ನಿರ್ಮಿಸದಿರುವುದು ಹಾಗೂ ಅವರ ಮನೆಯ ಸಮೀಪದಲ್ಲಿರುವ ಬೈಂದೂರಿನಿಂದ ಹೊಸಾಡಿಗೆ ತೆರಳುವ ರಸ್ತೆಗೆ ಮೋರಿ ಮಾಡದೆ ಮಣ್ಣು ಮುಚ್ಚಿರುವುದು ಸಮಸ್ಯೆಗೆ ಕಾರಣವಾಗಿದೆ. ಮಳೆ ಬಂದಾಗಲೆಲ್ಲಾ ಹರಿದುಬರುವ ಚರಂಡಿ ನೀರು ಸೀದಾ ದಿನೇಶ್ ಅವರ ತೋಟಕ್ಕೆ ನುಗ್ಗಿ ಮನೆಯ ಎದುರು ನಿಂತು ಹೊಳೆಯಂತಾಗುತ್ತಿದೆ. ಈ ಬಗ್ಗೆ ಐಆರ್‌ಬಿ ಕಂಪೆನಿಯ ಇಂಜಿನಿಯರ್‌ಗಳನ್ನು ಸಂಪರ್ಕಿಸಿದರೆ ಪ್ರತಿಕ್ರಿಯಿಸುತ್ತಿಲ್ಲ ಎಂದು ಮನೆಯವರು ಆರೋಪಿಸಿದ್ದಾರೆ.
ಜಾಗಕ್ಕೆ ಸೂಕ್ತ ಪರಿಹಾರವೂ ಇಲ್ಲ:
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ದಿನೇಶ್ ಗಾಣಿಗ ಅವರು ಸುಮಾರು ೧೮ ಸೆಂಟ್ಸ್ ಜಾಗ ಕಳೆದುಕೊಂಡಿದ್ದರು. ಆದರೆ ಐಆರ್‌ಬಿ ಕಂಪೆನಿ ಕನಿಷ್ಠ ಪರಿಹಾರದ ಮೊತ್ತ ನೀಡಿದೆ. ಆದರೆ ಅವರ ಜಾಗದ ಅಕ್ಕ ಪಕ್ಕದಲ್ಲಿರುವ ಜಾಗಗಳಿಗೆ ಇವರಿಗೆ ನೀಡಿದ ಪರಿಹಾರ ಮೊತ್ತಕ್ಕಿಂತ ಮೂರು ಪಟ್ಟು ಹೆಚ್ಚಿನ ಮೊತ್ತ ನೀಡಿದೆ ಎಂದು ದಿನೇಶ್ ಅವರು ಆರೋಪಿಸಿದ್ದಾರೆ.