Kundapra.com ಕುಂದಾಪ್ರ ಡಾಟ್ ಕಾಂ

ತಾಲೂಕಿನ ಗಂಗೊಳ್ಳಿ, ಮರವಂತೆ, ಶಿರೂರಿನಲ್ಲಿ ಹೆಚ್ಚಾದ ಕಡಲ್ಕೋರೆತ. ಆತಂಕದಲ್ಲಿ ತೀರ ನಿವಾಸಿಗಳು

?

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ/ಬೈಂದೂರು: ತಾಲೂಕು ವ್ಯಾಪ್ತಿಯ ಗಂಗೊಳ್ಳಿ, ಮರವಂತೆ, ಶಿರೂರು ಮುಂತಾದೆಡೆ ಕಡಲ ತೀರದಲ್ಲಿ ಕಳೆದ ಎರಡು ದಿನಗಳ ಹಿಂದೆ ಕಾಣಿಸಿಕೊಂಡಿದ್ದ ಕಡಲ್ಕೊರೆತ ಉಗ್ರ ಸ್ವರೂಪ ತಾಳಿದ್ದು, ತೀರ ಪ್ರದೇಶದ ಜನರು ಆತಂಕದಲ್ಲಿ ದಿನದೂಡುವಂತಾಗಿದೆ.

ಶಿರೂರು ಕರಾವಳಿ, ಮರವಂತೆ ಹಾಗೂ ಗಂಗೊಳ್ಳಿಯ ಲೈಟ್‌ಹೌಸ್, ಸಾಂತಯ್ಯನಕೇರಿ ಸಮೀಪದ ಬ್ಯಾಲಿಕೊಡೇರಿ ಮನೆ ವಠಾರ, ಖಾರ್ವಿಕೇರಿ ಪರಿಸರ ಮತ್ತು ಬಂದರು ಬೇಲಿಕೇರಿ ಪ್ರದೇಶದಲ್ಲಿ ಕಡಲ್ಕೊರೆತ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ತೆಂಗಿನ ಮರ ಸೇರಿದಂತೆ ಬೃಹತ್ ಗಾತ್ರದ ಮರಗಳು ಕಡಲ ಒಡಲು ಸೇರಿದ್ದು ಇನ್ನೂ ಅನೇಕ ಮರಗಳು ಉರುಳಿ ಬೀಳುವ ಸಾಧ್ಯತೆಗಳಿವೆ. ಕಡಲ್ಕೊರೆತ ಇದೇ ಸ್ವರೂಪದಲ್ಲಿ ಮುಂದುವರಿದರೆ ಅನೇಕ ವಾಸ್ತವ್ಯದ ಮನೆಗಳಿಗೆ ಹಾಗೂ ಆಸ್ತಿಪಾಸ್ತಿಗಳಿಗೆ ಹಾನಿಯಾಗುವ ಸಾಧ್ಯತೆಗಳಿವೆ. ದಡದ ಮೇಲೆ ನಿಲ್ಲಿಸುವ ಮೀನುಗಾರಿಕಾ ದೋಣಿಗಳೂ ಕೂಡ ಅಪಾಯಕ್ಕೆ ಸಿಲುಕಿಕೊಳ್ಳುವ ಸಾಧ್ಯತೆಗಳಿದ್ದು, ಮೀನುಗಾರರು ದೋಣಿಗಳ ಸಂರಕ್ಷಣೆ ಮಾಡುವಲ್ಲಿ ನಿರತರಾಗಿದ್ದಾರೆ.
ಗಂಗೊಳ್ಳಿ ಖಾರ್ವಿಕೇರಿ ಪ್ರದೇಶದಲ್ಲಿ ಕಳೆದ ಸಾಲಿನಲ್ಲಿ ನಿರ್ಮಿಸಲಾಗಿರುವ ತಾತ್ಕಾಲಿಕ ತಡೆಗೋಡೆಗೆ ಸಮುದ್ರದ ರಕ್ಕಸ ಗಾತ್ರದ ಅಲೆಗಳು ಅಪ್ಪಳಿಸುತ್ತಿದ್ದು ತಡೆಗೋಡೆ ದಾಟಿ ಅಲೆಗಳು ತೀರ ಪ್ರದೇಶದತ್ತ ಮುನ್ನುಗ್ಗುತ್ತಿದೆ. ಮಳೆಗಾಲದ ಆರಂಭದಲ್ಲಿಯೇ ಕಡಲ್ಕೊರೆತ ಉಗ್ರ ರೂಪ ತಾಳಿರುವುದರಿಂದ ಹೀಗಾಗಿ ಖಾರ್ವಿಕೇರಿ ತೀರ ಪ್ರದೇಶದ ಜನರಲ್ಲಿ ಆತಂಕ ಮನೆ ಮಾಡಿದೆ. ಕಳೆದ ವರ್ಷ ಕಡಲ್ಕೊರೆತದಿಂದ ತೀವ್ರ ಹಾನಿಗೊಳಗಾದ ಗಂಗೊಳ್ಳಿಯ ಬಂದರು ಬೇಲಿಕೇರಿ ಪ್ರದೇಶದಲ್ಲಿ ಈ ಬಾರಿ ಕಡಲ್ಕೊರೆತ ಮತ್ತಷ್ಟು ತೀವ್ರಗೊಂಡಿದೆ. ಈ ಭಾಗದಲ್ಲಿ ನಿರ್ಮಿಸಲಾಗಿರುವ ತಾತ್ಕಾಲಿಕ ತಡೆಗೋಡೆಗೆ ಕಡಲಿನ ಅಲೆಗಳು ರಭಸವಾಗಿ ಹೊಡೆಯುತ್ತಿದ್ದು ಬೇಲಿಕೇರಿ ನಿವಾಸಿಗಳನ್ನು ಕಂಗೆಡಿಸಿದೆ. ತಡೆಗೋಡೆಯ ಕಲ್ಲುಗಳು ಅಲೆಗಳ ರಭಸಕ್ಕೆ ಒಂದೊಂದೆ ಜಾರಿ ಕಡಲ ಒಡಲು ಸೇರುತ್ತಿದ್ದು, ತಾತ್ಕಾಲಿಕ ತಡೆಗೋಡೆಯ ಬುಡ ಅಲುಗಾಡತೊಡಗಿದೆ. ಸಮುದ್ರದಲ್ಲಿ ಕಾಣಿಸಿಕೊಂಡಿರುವ ತೂಫಾನ್ ಬೇಲಿಕೇರಿ ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ.

ಒಟ್ಟಿನಲ್ಲಿ ಈ ಬಾರಿ ಮಾನ್ಸೂನ್ ಗಂಗೊಳ್ಳಿಯ ಕಡಲ ತೀರ ನಿವಾಸಿಗಳ ನಿದ್ದೆಗೆಡಿಸಿದ್ದು, ಕಡಲ್ಕೊರೆತದಿಂದ ಕಂಗೆಟ್ಟಿದ್ದಾರೆ. ತಮ್ಮ ಮನೆಮಠಗಳನ್ನು ರಕ್ಷಿಸುವಲ್ಲಿ ದೇವರ ಮೊರೆ ಹೋಗಿರುವ ಬಡ ಮೀನುಗಾರರು ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಸರಕಾರವನ್ನು ಆಗ್ರಹಿಸಿದ್ದಾರೆ.

?
Exit mobile version