ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಆಲ್ ಇಂಡಿಯ ಅಚೀವರ್ಸ್ ಫೌಂಡೇಶನ್‌ನ 2016-17 ನೆ ಸಾಲಿನ ’ನಾಯಕತ್ವ ಹಾಗೂ ಕ್ಷಿಪ್ರ ಬೆಳವಣಿಗೆಯ ಕಂಪೆನಿ’ ಪ್ರಶಸ್ತಿಯನ್ನು ಕುಂದಾಪುರ ತಾಲೂಕಿನ ಬಿಜೂರಿನ ಗೋವಿಂದ ಬಾಬು ಪೂಜಾರಿಯವರಿಗೆ ನೀಡಲಾಗಿದೆ. ಅವರನ್ನು ಪ್ರಶಸ್ತಿಯ ’ಆಹಾರ ಮತ್ತು ಅತಿಥಿ ಸತ್ಕಾರ’ ವಿಭಾಗದಲ್ಲಿ ಗುರುತಿಸಲಾಗಿದ್ದು, ಹೊಸದೆಹಲಿ ಲೋಧಿ ರಸ್ತೆಯಲ್ಲಿರುವ ಗುಲ್ಮೋಹರ್ ಹೆಬಿಟೆಟ್ ವರ್ಡ್, ಇಂಡಿಯಾ ಹೆಬಿಟೆಟ್ ಸೆಂಟರ್‌ನಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಕೇಂದ್ರ ಸಚಿವ ಹಾಗೂ ರಾಜ್ಯಪಾಲ ಡಾ. ಭೀಷ್ಮ ನಾರಾಯಣ್ ಸಿಂಗ್ ಪ್ರಶಸ್ತಿ ಪ್ರದಾನಿಸಿದರು.
ಈ ಸಂದರ್ಭ ಸಿಕ್ಕಿಂನ ಮಾಜಿ ರಾಜ್ಯಪಾಲ ಬಿ. ಪಿ. ಸಿಂಗ್, ಕಾಂಗ್ರೆಸ್‌ನ ಮಾಜಿ ಸಂಸದ ಹರಿಕೇಶ್ ಬಹಾದೂರ್, ರಾಷ್ಟ್ರೀಯ ಕಾಂಗ್ರೆಸ್ ಕಾರ್ಯದರ್ಶಿ ವೇದಪ್ರಕಾಶ್, ಸುಪ್ರಿಂಕೋರ್ಟ್ ನ್ಯಾಯವಾದಿ ಚಂದ್ರ ರಾಮನ್, ಉದ್ಯಮಿ ಮೇಘಾ ವರ್ಮ ಉಪಸ್ಥಿತರಿದ್ದರು. ಫೌಂಡೇಶನ್ನಿನ ಉನಿಯಾಲ್ ಕಾರ್ಯಕ್ರಮ ಸಂಯೋಜಿಸಿದ್ದರು.
ಗೋವಿಂದ ಬಾಬು ಪೂಜಾರಿ 2008ರಲ್ಲಿ ಮುಂಬೈಯಲ್ಲಿ ಶೆಫ್‌ಟಾಕ್ ಕೇಟರಿಂಗ್ ಸರ್ವಿಸಸ್ ಆರಂಭಿಸಿದರು. ಇದನ್ನು 2015ರಲ್ಲಿ ಶೆಫ್‌ಟಾಕ್ ಫುಡ್ ಅಂಡ್ ಹಾಸ್ಪಿಟ್ಯಾಲಿಟಿ ಪೈವೆಟ್ ಲಿಮಿಟೆಡ್ ಆಗಿ ಪರಿವರ್ತಿಸಿದರು. ಈಗ ಪೂನಾ, ಹೈದರಾಬಾದ್ ಮತ್ತು ಬೆಂಗಳೂರು ನಗರಗಳಲ್ಲಿ ಇದೇ ಉದಮಗಳು ಪ್ರಾರಂಭವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ತಮ್ಮ ನಾಯಕತ್ವದ ಕೌಶಲ್ಯ ಮತ್ತು ಶ್ರಮದ ದುಡಿಮೆ ಮೂಲಕ ಯಶಸ್ಸು, ಪ್ರಸಿದ್ಧಿ ಗಳಿಸಿರುವ ಇವರು ತಮ್ಮ ಉದ್ಯಮದ ಮೂಲಕ ಸಾವಿರಾರು (1450) ಜನರಿಗೆ ಉದ್ಯೋಗ ನೀಡಿದ್ದಾರೆ. ಹುಟ್ಟೂರು ಉಪ್ಪುಂದದಲ್ಲಿ ಜನೋಪಕಾರಿ ಸಂಸ್ಥೆಯೊಂದು ಇರಬೇಕೆಂಬ ಆಶಯದಿಂದ 2015ರಲ್ಲಿ ಶ್ರೀ ವರಲಕ್ಷ್ಮೀ ಸೌಹಾರ್ದ ಸಹಕಾರಿಯನ್ನು ತೆರೆದು ಸಾರ್ವಜನಿಕರಿಗೆ ಉತ್ತಮ ರೀತಿಯ ಸೇವೆ ನೀಡುವ ಮೂಲಕ ಜನರ ವಿಶ್ವಾಸಕ್ಕೆ ಪಾತ್ರರಾದರು. ಅಲ್ಲದೇ ಆರ್ಥಿಕವಾಗಿ ಹಿಂದುಳಿದ ಎಲ್ಲಾ ವರ್ಗದ ಜನರಿಗೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಾಗೂ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಮುಂದುವರಿಯಲು ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಮೂಲಕ ನೆರವಾಗುತ್ತಿದ್ದಾರೆ.