Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ: ಕಡಲ್ಕೊರೆತಕ್ಕೆ ತುತ್ತಾಗಿರುವ ಪ್ರದೇಶಗಳಿಗೆ ಶಾಸಕರ ಭೇಟಿ

?

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ಕಡಲ್ಕೊರೆತಕ್ಕೆ ತುತ್ತಾಗಿರುವ ಗಂಗೊಳ್ಳಿ ಗ್ರಾಮದ ಬ್ಯಾಲಿಕೊಡೇರಿ ಪ್ರದೇಶಕ್ಕೆ ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಡಲ್ಕೊರೆತದಿಂದ ಉಂಟಾದ ಹಾನಿಯನ್ನು ಪರಿಶೀಲಿಸಿದ ಅವರು ಮುಂಜಾಗ್ರತಾ ಕ್ರಮವಾಗಿ ಕಡಲ್ಕೊರೆತ ತಡೆಯಲು ಕೂಡಲೇ ತಾತ್ಕಾಲಿಕ ತಡೆಗೋಡೆ ಕಾಮಗಾರಿಯನ್ನು ನಡೆಸುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಗಂಗೊಳ್ಳಿ ಗ್ರಾಮದ ಬ್ಯಾಲಿಕೊಡೇರಿ, ಖಾರ್ವಿಕೇರಿ ಹಾಗೂ ಬಂದರು ಬೇಲಿಕೇರಿ ಪ್ರದೇಶಗಳಲ್ಲಿ ಕಡಲ್ಕೊರೆತ ಹೆಚ್ಚಾಗಿದ್ದು, ಸುಮಾಎಉ ೧೨ ಮನೆಗಳು ಅಪಾಯದಂಚಿನಲ್ಲಿದೆ. ಅನೇಕ ಮರಗಳು ಸಮುದ್ರದ ಅಲೆಗಳ ರಭಸಕ್ಕೆ ಕೊಚ್ಚಿ ಹೋಗಿದೆ. ಆದ್ದರಿಂದ ಕಡಲ್ಕೊರೆತವನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ತಾತ್ಕಾಲಿಕ ತಡೆಗೋಡೆ ನಿರ್ಮಿಸುವಂತೆ ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕಡಲ್ಕೊರತದ ಹಾನಿಯ ಬಗ್ಗೆ ಹಾಗೂ ಕೈಗೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಉಪವಿಭಾಗಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವಂತೆ ಆದೇಶ ನೀಡುವುದಾಗಿ ಅವರು ಹೇಳಿದರು.

ಗಂಗೊಳ್ಳಿ ಗ್ರಾಮದ ಬಂದರು ಬೇಲಿಕೇರಿ ಮತ್ತು ಖಾರ್ವಿಕೇರಿ ಪ್ರದೇಶಗಳಲ್ಲಿ ಶಾಶ್ವತ ತಡೆಗೋಡೆ ರಚನೆ ಬಗ್ಗೆ ಟೆಂಡರ್ ನಡೆದಿದ್ದು, ಅತಿ ಶೀಘ್ರದಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ. ಇದರೊಟ್ಟಿಗೆ ಕಡಲ್ಕೊರೆತ ಸಂಭವಿಸಿದ ಸ್ಥಳಗಳಲ್ಲಿ ತಾತ್ಕಾಲಿಕ ತಡೆಗೋಡೆ ನಿರ್ಮಿಸಲು ಸೂಕ್ತ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶಿಸಲಾಗಿದೆ. ಕಡಲ್ಕೊರೆತ ತಡೆಗಟ್ಟಲು ರಾಜ್ಯ ಸರ್ಕಾರ ಕ್ರಮಕೈಗೊಂಡಿದ್ದು, ಈ ವಿಚಾರದಲ್ಲಿ ಜನರನ್ನು ತಪ್ಪುದಾರಿಗೆ ಎಳೆಯುವ ಪ್ರಯತ್ನ ಖಂಡನೀಯ. ಇಂತಹ ಪೊಳ್ಳು ಮಾತುಗಳಿಗೆ ಆಶ್ವಾಸನೆಗಳಿಗೆ ಜನರು ಕಿವಿಗೊಡಬಾರದು ಎಂದು ಅವರು ಹೇಳಿದರು.

ತಾಪಂ ಸದಸ್ಯ ರಾಜು ದೇವಾಡಿಗ, ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ್, ಬಂದರು ಇಲಾಖೆಯ ಇಂಜಿನಿಯರ್ ವಿಜಯ ಶೆಟ್ಟಿ, ದೇವರಾಯ ಶೇರುಗಾರ್, ಸುಶೀಲ ಮೊದಲಾದವರು ಉಪಸ್ಥಿತರಿದ್ದರು.

Exit mobile version