Kundapra.com ಕುಂದಾಪ್ರ ಡಾಟ್ ಕಾಂ

ಹಿರಿಯ ಪತ್ರಕರ್ತ ಕೆ. ದಾಮೋದರ ಐತಾಳರಿಗೆ ಪತ್ರಿಕಾ ದಿನದ ಗೌರವ ಪ್ರದಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಪ್ರಸ್ತುತ ಮಾಧ್ಯಮಗಳ ಗುಣಮಟ್ಟದಲ್ಲಿ ಇಳಿಮುಖವಾಗುತ್ತಿದ್ದು ಹಿರಿಯರ ಮಾರ್ಗದಲ್ಲಿ ಅವರ ಆದರ್ಶದೊಂದಿಗೆ ಕಿರಿಯ ಪತ್ರಕರ್ತರು ಮುನ್ನಡೆದರೆ ಉತ್ತಮ ಸಮಾಜದ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಅಭಿಪ್ರಾಯ ಪಟ್ಟರು. ಅವರು ಪತ್ರಕರ್ತರ ವೇದಿಕೆ ಉಡುಪಿ ಜಿಲ್ಲಾ ಘಟಕ ಪತ್ರಿಕಾ ದಿನದ ಗೌರವವನ್ನು ಮುನ್ನಾ ದಿನವಾದ ಶುಕ್ರವಾರ ಕಡಿಯಾಳಿಯ ಸ್ವಗೃಹದಲ್ಲಿ ಪ್ರದಾನಿಸಿ ಮಾತನಾಡಿದರು. ಸುಶೀಲಾ ದಾಮೋದರ್ ಐತಾಳ ಸಹಿತ ದಂಪತಿಯನ್ನು ಗೌರವಿಸಲಾಯಿತು.

ಸರಳ ಮತ್ತು ನೇರ ಜೀವನ ನಡೆಸಿದ ದಾಮೋದರ ಐತಾಳರು ಸಮಾಜಕ್ಕೆ ಮಾರ್ಗದರ್ಶಿಯಾಗಿದ್ದಾರೆ. ಬಳಕೆದಾರ ವೇದಿಕೆಯ ಮೂಲಕ ಅವರ ಸೇವೆ ಅಮೂಲ್ಯವಾದುದು ಎಂದು ಅವರು ಅಭಿನಂದಿಸಿದರು. ಗ್ರಾಮೀಣ ಪತ್ರಕರ್ತರಿಗೆ ಕನಿಷ್ಟ ಗೌರವಧನ ಪಾವತಿಯಾಗಬೇಕು, ತುಳುವಿನಲ್ಲಿ ಉಪಗ್ರಹ ವಾಹಿನಿ, ತುಳು ದೈನಿಕ ಆರಂಭವಾಗ ಬೇಕು. ಪ್ರಾದೇಶಿಕ ಮತ್ತು ವೃತ್ತಿ ಪರ ಅಸಮತೋಲನ ತಪ್ಪ ಬೇಕು ಎಂದು ಅಧ್ಯಕ್ಷತೆ ವಹಿಸಿದ್ದ ವೇದಿಕೆಯ ಅಧ್ಯಕ್ಷ ಶೇಖರ ಅಜೆಕಾರು ಹೇಳಿದರು.

ಐತಾಳರಂತಹ ಅಪೂರ್ವ ವ್ಯಕ್ತಿಗಳನ್ನು ಗುರಿತಿಸುವುದೇ ಒಂದು ಖುಷಿ ವಿಷಯ ಎಂದು ಸಾಹಿತಿ ಕು. ಗೋ ಅಭಿಪ್ರಾಯಿಸಿದರು. ಐತಾಳರಂತಹ ಗುರುಗಳು ಸಿಕ್ಕಿದ್ದು ನಮ್ಮ ಭಾಗ್ಯ ಎಂದು ಅಂತರಾಷ್ಟ್ರೀಯ ಚಿತ್ರ ಕಲಾವಿದ ಪಿ.ಎನ್ ಆಚಾರ್ ಹೇಳಿದರು. ಹಿರಿಯರ ಸಾಂಗತ್ಯದಿಂದ ಹೊಸ ಚೈತನ್ಯ ತುಂಬಿ ಕೊಳ್ಳುವುದು ಸಾಧ್ಯ. ಹಾಗಾಗಿ ಇಂತಹ ಕಾರ್ಯಕ್ರಮಗಳು ಹೆಚ್ಚು ಪ್ರಸ್ತುತ ಎಂದು ಡಾ. ರಾಜೇಶ ಆಳ್ವ ಬದಿಯಡ್ಕ ಅಭಿಪ್ರಾಯ ಪಟ್ಟರು. ಅಭ್ಯುದಯ ಪತ್ರಿಕೋದ್ಯಮದ ಜ್ವಲಂತ ನಿದರ್ಶನ ಐತಾಳರು ಎಂದು ಪತ್ರಕರ್ತ ಸುಭಾಶ್ಚಂದ್ರ ಎಸ್. ವಾಗ್ಳೆ ಅಭಿಂದನಾ ಮಾತುಗಳನ್ನಾಡಿದರು.

ದಿವಾಕರ್ ರಾವ್ ಬೇಲಾಡಿ, ಪತ್ರಕರ್ತ ನಜೀರ್ ಪೊಲ್ಯ, ಪ್ರಗತಿ ಪರ ಕೃಷಿಕ ಮಟ್ಟಿ ಲಕ್ಷ್ಮೀನಾರಾಯಣ ರಾವ್ ಉಪಸ್ಥಿತರಿದ್ದರು. ಅಜ್ಜರಕಾಡು ಕಾಲೇಜಿನ ಪತ್ರಿಕೋದ್ಯಮ ಉಪನ್ಯಾಸಕ ಮಂಜಪ್ಪ ದ್ಯಾ ಗೋಣಿ ಪ್ರಾಸ್ತಾವಿಕ ಮಾತನಾಡಿದರು. ರಾಘವೇಂದ್ರ ಪ್ರಭು ಕರ್ವಾಲೋ ಕಾರ್ಯಕ್ರಮ ನಿರೂಪಿಸಿದರು.

Exit mobile version