Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ವಕೀಲರ ಸಂಘಕ್ಕೆ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಭೇಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕರ್ನಾಟಕ ರಾಜ್ಯದಲ್ಲಿ ಭ್ರಷ್ಟಾಚಾರವನ್ನು ಕಡಿಮೆಯಾಗುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವ ಗುರುತರವಾದ ಉದ್ದೇಶವನ್ನು ಹೊಂದಿದ್ದೇನೆ. ಹೊರತು ಅಧಿಕಾರಿಗಳಲ್ಲಿ ಭಯ ಹುಟ್ಟಿಸುವುದು ಹಾಗೂ ಅನಗತ್ಯ ಪ್ರಚಾರಗಿಟ್ಟಿಸುವುದು ನಮ್ಮ ಧ್ಯೇಯವಲ್ಲ ಎಂದು ರಾಜ್ಯ ಲೋಕಾಯುಕ್ತ ನ್ಯಾಯಮೂತಿ ಪಿ. ವಿಶ್ವನಾಥ ಶೆಟ್ಟಿ ಹೇಳಿದರು.

ಅವರು ಕುಂದಾಪುರ ನ್ಯಾಯಾಲಯ ಸಂಕೀರ್ಣದಲ್ಲಿ ಬಾರ್ ಅಸೋಸಿಯೇಶನ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯದ ಎಲ್ಲ ಬಾರ್ ಅಸೋಸಿಯೇಶನ್‌ಗಳಿಗೆ ಬೇಟಿ ನೀಡಿ ನ್ಯಾಯವಾದಿಗಳನ್ನು ಹಾಗೂ ಸಾರ್ವಜನಿಕರನ್ನು ಬೇಟಿ ಮಾಡಬೇಕು ಎನ್ನುವ ಉದ್ದೇಶ ಇದ್ದರೂ ಬಾಕಿ ಉಳಿದಿರುವ ಪ್ರಕರಣಗಳ ಇತ್ಯರ್ಥಕ್ಕೆ ಪ್ರಥಮ ಪ್ರಾಶಸ್ರ್ಯ ನೀಡುವ ಉದ್ದೇಶವಿದೆ. ಸಾಕಷ್ಟು ಪೂರ್ವ ಸಿದ್ದತೆಯಿಂದ ನ್ಯಾಯದಾನದ ವಿಷಯದಲ್ಲಿ ತೊಡಗಿಸಿಕೊಳ್ಳುವ ನ್ಯಾಯವಾದಿಗೆ ಯಶಸ್ಸು ಖಂಡಿತ ಇದೆ. ಜನಪರ ಕಲ್ಯಾಣಕ್ಕಾಗಿ ರಾಜ್ಯ ಹಾಗೂ ಕೇಂದ್ರಗಳ ಸರಕಾರಗಳ ಯೋಜನೆಗಳು ಸಮಾಜದ ಸಾಮಾನ್ಯ ಜನರಿಗೂ ದೊರಕಬೇಕು ಎನ್ನುವುದು ನಮ್ಮ ಧ್ಯೇಯವಾಗಿದೆ ಎಂದರು.

ಈ ಸಂದರ್ಭ ರಾಜ್ಯ ಲೋಕಾಯುಕ್ತ ನ್ಯಾಯಮೂತಿ ಪಿ. ವಿಶ್ವನಾಥ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು.

ಕುಂದಾಪುರ ಬಾರ್ ಅಸೋಸಿಯೇಶನ್ (ರಿ.) ಕುಂದಾಪುರ ಇದರ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಪ್ರಕಾಶ್ ಖಂಡೇರಿ, ಸೀನಿಯರ್ ಸಿವಿಲ್ ಜಡ್ಜ್ ಕುಮಾರಸ್ವಾಮಿ ಹಾಗೂ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶ ಪ್ರವೀಣ್ ಕುಮಾರ್, ಕುಂದಾಪುರದ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶೆ ಲಾವಣ್ಯಾ ಎಚ್.ಎನ್., ೨ನೇ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶ ಚಂದ್ರಶೇಖರ ಬಣಕಾರ್ ಮತ್ತು ಸರಕಾರಿ ಅಭಿಯೋಜಕಿ ಸುಮಂಗಲಾ ನಾಯ್ಕ್, ಕುಂದಾಪುರ ಬಾರ್ ಅಸೋಸಿಯೇಶನ್ (ರಿ.) ಕುಂದಾಪುರ ಇದರ ಪ್ರಧಾನ ಕಾರ್ಯದರ್ಶಿ ಹೆಚ್. ರವೀಶ್ಚಂದ್ರ ಶೆಟ್ಟಿ ಉಪಸ್ಥಿತರಿದ್ದರು. ಮಂಜುನಾಥ ಗಿಳಿಯಾರು ಕಾರ್ಯಕ್ರಮ ನಿರೂಪಿಸಿ, ರಾಜಾರಾಮ ಶೆಟ್ಟಿ ಪರಿಚಯಿಸಿದರು, ಹೆಚ್. ರವೀಶ್ಚಂದ್ರ ಶೆಟ್ಟಿ ವಂದಿಸಿದರು.

Exit mobile version