ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೊಲ್ಲೂರು ದೇವಳಕ್ಕೆ ತೆರಳುತ್ತಿದ್ದ ಕೇರಳದ ಯಾತ್ರಿಕರ ಕಾರನ್ನು ಅಡ್ಡಗಟ್ಟಿ ಪುಡಿಗೈದು ದರೋಡೆಗೆ ಯತ್ನಿಸಿದ ಪ್ರಕರಣದ ಐವರು ಆರೋಪಿಗಳಾದ ವಾಮಂಜೂರು ಮೂಡುಶೆಡ್ಡೆ ನಿವಾಸಿಗಳಾದ ಫೈಝಲ್ (24), ಮಹಮ್ಮದ್ ರಿಜ್ವಾನ್ (28), ಮಹಮ್ಮದ್ ಅಲಿ (25), ಸೈಪುದ್ಧಿನ್ (23) ಹಾಗೂ ಕುಲಶೇಖರ ನಿವಾಸಿ ಹರ್ಷಿತ್ ಶೆಟ್ಟಿ(25)ಗೆ ಕುಂದಾಪುರ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಂಟು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ, ತಲಾ ರೂ. 40,000 ದಂಡ ವಿಧಿಸಿರುವುದಲ್ಲದೇ ದೂರುದಾರ ಶ್ಯಾಮಕುಮಾರ್ ಅವರಿಗೆ ತಲಾ 3.000ರೂ ಹಣವನ್ನು ಪರಿಹಾರ ರೂಪದಲ್ಲಿ ನೀಡಬೇಕು ಎಂದು ತೀರ್ಪು ನೀಡಿದೆ.
2013ರ ಡಿಸೆಂಬರ್ 15ರಂದು ಕೇರಳದ ಏಷ್ಯಾನೆಟ್ ಸುದ್ಧಿವಾಹಿಯಲ್ಲಿ ಕ್ಯಾಮರಾಮನ್ ಶ್ಯಾಮಕುಮಾರ್ ಹಾಗೂ ಅದೇ ವಾಹಿನಿಯ ಇನ್ನೋರ್ವ ಸಿಬ್ಬಂಧಿ ಹಾಗೂ ಅವರ ಕುಟುಂಬಿಕರು ಸ್ವಿಫ್ಟ್ ಕಾರಿನಲ್ಲಿ ರಾತ್ರಿ ಕೊಲ್ಲೂರಿಗೆ ತೆರಳುತ್ತಿದ್ದ ವೇಳೆ ಕಾರೊಂದರಲ್ಲಿ ಹಿಂಬಾಲಿಸಿ ಬಂದಿದ್ದ ದರೋಡೆಕೋರರು ಇಡೂರು ಕುಂಜ್ಞಾಡಿ ಬಳಿ ಯಾತ್ರಿಕರ ಕಾರನ್ನು ಅಡ್ಡಗಟ್ಟಿ ರಾಡಿನಿಂದ ಕಾರಿನ ಹಿಂಬದಿಯ ಗಾಜು ಪುಡಿಗೈದಿದ್ದರು. ದುಷ್ಕರ್ಮಿಗಳಿಂದ ಅಪಾಯದ ಮುನ್ಸೂಚನೆಯನ್ನರಿತು ಕಾರನ್ನು ಹಾಗೆಯೇ ಚಲಾಯಿಸಿದ ಶ್ಯಾಮಕುಮಾರ್ ಸೀದಾ ಕೊಲ್ಲೂರಿಗೆ ತೆರಳಿ ಅಲ್ಲಿ ಠಾಣೆಗೆ ದೂರು ನೀಡಿದ್ದರು. ತಕ್ಷಣವೇ ಕಾರ್ಯಾಚರಣೆಗಿಳಿದಿದ್ದ ಪೊಲೀಸರು ಚಿತ್ತೂರು ಜಂಕ್ಷನ್ ಬಳಿ ಆರೋಪಿಗಳನ್ನು ಬಂಧಿಸಿದ್ದರು.
ಪ್ರಕರಣದ ತನಿಕೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಪ್ರಕಾಶ್ ಖಂಡೇರಿ ಈ ಐವರು ಆರೋಪಿಗಳನ್ನು ಸಾಕ್ಷಾಧಾರಗಳ ಆಧಾರದಲ್ಲಿ ತಪ್ಪಿತಸ್ಥರು ಎಂದು ಪರಿಗಣಿಸಿ ಎಂಟು ವರ್ಷಗಳ ಶಿಕ್ಷೆ ವಿಧಿಸಿದೆ. ಈ ಹಿಂದೆ ಆರೋಪಿಗಳನ್ನು ಬಂಧಿಸಿದ್ದ ಸಂದರ್ಭದಲ್ಲಿ ಸೆಷನ್ಸ್ ನ್ಯಾಯಾಲಯದಲ್ಲಿ ಜಾಮೀನು ನಿರಾಕರಿಸಲಾಗಿತ್ತು. ಬಳಿಕ ಹೈಕೋರ್ಟ್‌ನಿಂದ ಜಾಮೀನು ಪಡೆದು ಬಿಡುಗಡೆಗೊಂಡಿದ್ದರು. ಈ ಪೈಕಿ ರಿಜ್ವಾನ್ ಹಾಗೂ ಸೈಪುದ್ಧಿನ್ ಬೇರೊಂದು ಪ್ರಕರಣದಲ್ಲಿ ಆರೋಪಿಯಾಗಿದ್ದ ಜೈಲುವಾಸ ಅನುಭವಿಸುತ್ತಿದ್ದರು.
ನಾಲ್ಕು ವರ್ಷದಲ್ಲಿ ಒಂಬತ್ತು ಸಾಕ್ಷಿಗಳ ವಿಚಾರಣೆ ನಡೆಸಲಾಗಿತ್ತು. ದೂರುದಾರ ಕೇರಳದ ಶ್ಯಾಮಕುಮಾರ್ ಅವರ ಪರವಾಗಿ ಸರಕಾರಿ ಅಭಿಯೋಜಕ ಶ್ರೀನಿವಾಸ ಹೆಗ್ಡೆ ಮೊದಲು ವಾದಿಸಿದ್ದರೆ ಬಳಿಕ ಸರಕಾರಿ ಅಭಿಯೋಜಕ ಹರಿಶ್ಚಂದ್ರ ಉದ್ಯಾವರ ವಾಸಿದಿದ್ದರು.