Kundapra.com ಕುಂದಾಪ್ರ ಡಾಟ್ ಕಾಂ

ಇಂದಿನ ವಿದ್ಯಾರ್ಥಿಗಳೇ ದೇಶದ ಭವಿಷ್ಯದ ನಾಯಕರು: ವಿದ್ಯಾರ್ಥಿ ಸಂಸತ್ ಉದ್ಘಾಟಿಸಿ ಪ್ರಕಾಶ್ ಐತಾಳ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಮಹಾನ್ ವ್ಯಕ್ತಿಗಳ ಬದುಕಿನ ತತ್ವಾದರ್ಶಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಸ್ಪಷ್ಟವಾದ ಗುರಿ, ಛಲ ಹಾಗೂ ಇಚ್ಛಾಶಕ್ತಿಯಿಂದ ಮುನ್ನಡೆದಿದ್ದಲ್ಲಿ ವಿದ್ಯಾರ್ಥಿಗಳು ಎಂತಹ ಸಾಧನೆಯನ್ನಾದರೂ ಮಾಡಬಹುದು. ಇಂದಿನ ವಿದ್ಯಾರ್ಥಿಗಳೇ ದೇಶದ ಭವಿಷ್ಯದ ನಾಯಕರು ಎಂದು ಕಿರಿಮಂಜೇಶ್ವರದ ಉದ್ಯಮಿ, ದಾನಿ ಎನ್. ವಿ. ಪ್ರಕಾಶ್ ಐತಾಳ್ ಹೇಳಿದರು.

ಕಿರಿಮಂಜೇಶ್ವರ ಪ್ರೌಢಶಾಲೆಯಲ್ಲಿ ಮಂಗಳವಾರ ಮಧ್ಯಾಹ್ನ ಜರುಗಿದ ಸಮಾರಂಭದಲ್ಲಿ ಶಾಲಾ 2017-18ನೇ ಸಾಲಿನ ವಿದ್ಯಾರ್ಥಿ ಸಂಸತ್ ಹಾಗೂ ವಿವಿಧ ಶೈಕ್ಷಣಿಕ ಸಂಘಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಮುಖ್ಯಶಿಕ್ಷಕ ಶಂಕರ ಮೊಗವೀರ ಅಧ್ಯಕ್ಷತೆ ವಹಿಸಿ ಮಾತನಾಡಿ ಕಲಿಕೆಯಲ್ಲಿ ವಿದ್ಯಾರ್ಥಿಗಳ ಬದ್ಧತೆ ಅತ್ಯಗತ್ಯ. ಪಠ್ಯೇತರ ಚಟುವಟಿಕೆಗಳಲ್ಲಿ ಲಭ್ಯ ಅವಕಾಶಗಳನ್ನು ಚಾಚೂ ತಪ್ಪದೇ ಬಳಸಿಕೊಂಡು ನಾಯಕತ್ವ ಹಾಗೂ ವ್ಯಕ್ತಿತ್ವ ಬೆಳೆಸಿಕೊಳ್ಳಲು ಪ್ರಯತ್ನ ನಡೆಸಬೇಕು ಎಂದು ಕಿವಿಮಾತು ಹೇಳಿದರು.

ಮುಖ್ಯ ಅತಿಥಿ ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿ ಶಾಲಾ ಸರಕಾರದ ನೂತನ ಪ್ರತಿನಿಧಿಗಳಿಗೆ ಶುಭಹಾರೈಸಿದರು. ವಿದ್ಯಾರ್ಥಿ ಸರಕಾರದ ಮಾರ್ಗದರ್ಶಕರಾದ ಶಿಕ್ಷಕ ಬೊಮ್ಮಯ್ಯ ಬಿ. ಗಾಂವ್ಕರ್ ನೂತನ ಪ್ರತಿನಿಧಿಗಳಿಗೆ ಪ್ರಮಾಣವಚನ ಬೋಧಿಸಿದರು. ಸಹಶಿಕ್ಷಕರಾದ ವಿನಯ ಬಿ., ವೇದಾವತಿ, ಉಷಾದೇವಿ, ಉಷಾ ಐತಾಳ್, ಅಶ್ವಿನಿ, ದೈ.ಶಿ. ಶಿಕ್ಷಕ ಅರುಣಕುಮಾರ್ ಶೆಟ್ಟಿ, ಶಾಲಾ ವಿದ್ಯಾರ್ಥಿ ನಾಯಕ ಧನುಷ್ ಮತ್ತು ಉಪನಾಯಕಿ ಐಶಾ ಹಾಗೂ ಗುಮಾಸ್ತ ಗಜಾನನ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕ ಬೊಮ್ಮಯ್ಯ ಬಿ. ಗಾಂವ್ಕರ್ ಸ್ವಾಗತಿಸಿದರು. ಶಿಕ್ಷಕ ಗಣಪತಿ ಎಸ್. ಬಂಕೇಶ್ವರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕ ಹಾವಳಿ ಬಿಲ್ಲವ ವಂದಿಸಿದರು.

Exit mobile version