Kundapra.com ಕುಂದಾಪ್ರ ಡಾಟ್ ಕಾಂ

ಬಂಕೇಶ್ವರ ಕಾವೇರಿ ಮಾರ್ಗದಲ್ಲಿ ಮದ್ಯದಂಗಡಿ ಬೇಡ: ಸಾರ್ವಜನಿಕರ ಒಕ್ಕೊರಲ ಆಗ್ರಹ, ಪ್ರತಿಭಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಯಡ್ತರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಂಕೇಶ್ವರದ ಕಾವೇರಿ ಮಾರ್ಗದಲ್ಲಿ ಮಧ್ಯದಂಗಡಿಯನ್ನು ತೆರೆಯಲು ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದು ಸೋಮವಾರ ಮಧ್ಯದಂಗಡಿಗಾಗಿ ನಿಗದಿಪಡಿಸಿದ ಕಟ್ಟಡದ ಎದುರಿನಲ್ಲಿಯೇ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕಾವೇರಿ ಮಾರ್ಗದ ನಿವಾಸಿ ನಾಗರಾಜ ಗಾಣಿಗ ಬಂಕೇಶ್ವರ ಮಾತನಾಡಿ ಕಾವೇರಿ ಮಾರ್ಗದಲ್ಲಿ ಎಲ್ಲಾ ಸಮುದಾಯದವರೂ ಈವರೆಗೆ ಶಾಂತಿ ಸೌಹಾರ್ದದಿಂದ ಬದುಕುತ್ತಿದ್ದಾರೆ. ಪ್ರತಿನಿತ್ಯವೂ ಹತ್ತಾರು ಮಕ್ಕಳು, ಮಹಿಳೆಯರು ಇದೇ ಮಾರ್ಗವಾಗಿ ಸಂಚರಿಸುತ್ತಾರೆ. ಸಮೀಪದಲ್ಲಿ ದೇವಸ್ಥಾನ, ಅಂಗನವಾಡಿ ಕೇಂದ್ರ ಹಾಗೂ ಹತ್ತಾರು ಮನೆಗಳಿದ್ದು ಇಲ್ಲಿಯೇ ಮಧ್ಯದಂಗಡಿ ತೆರೆಯುವುದು ಸೂಕ್ತವಲ್ಲ. ಕಿರಿದಾದ ರಸ್ತೆಗೆ ತಾಕಿಕೊಂಡಿರುವ ಕಟ್ಟಡದಲ್ಲಿ ಅಂಗಡಿ ತೆರೆದರೆ ಈ ಮಾರ್ಗದಲ್ಲಿ ಸಂಚರಿಸುವುದೇ ಕಷ್ಟವಾಗಲಿದೆ. ತಹಶೀಲ್ದಾರರು, ಸ್ಥಳೀಯ ಪಂಚಾಯತ್ ಹಾಗೂ ಅಬಕಾರಿ ಇಲಾಖೆ ಈ ಬಗ್ಗೆ ಕೂಡಲೇ ಗಮನ ಹರಿಸಿ ಮಧ್ಯದಂಗಡಿ ತೆರೆಯಲು ಅನುಮತಿ ನೀಡಬಾರದು ಎಂದು ಆಗ್ರಹಿಸಿದರು. ಕುಂದಾಪ್ರ ಡಾಟ್ ಕಾಂ.

ಪ್ರತಿಭಟನಾಕಾರರ ಮನವಿಯನ್ನು ಸ್ವೀಕರಿಸಿದ ಬೈಂದೂರು ತಹಶೀಲ್ದಾರ್ ಕಿರಣ್ ಗೌರಯ್ಯ ಪ್ರತಿಕ್ರಿಯಿಸಿ ಸಾರ್ವಜನಿಕರಿಗೆ ತೀವ್ರ ತೊಂದರೆಯುಂಟಾಗುವ ಸ್ಥಳದಲ್ಲಿ ಮಧ್ಯದಂಗಡಿ ತೆರೆಯುವುದಕ್ಕೆ ಅವಕಾಶ ನೀಡಲಾಗದು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅರ್ಜಿಯನ್ನು ಕಳುಹಿಸಿ ಅವರ ಅಣತಿಯಂತೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಪ್ರತಿಭಟನೆಯ ನೇತೃತ್ವವನ್ನು ಸ್ಥಳೀಯರಾದ ಉಮೇಶ್, ರವಿಚಂದ್ರ ದೇವಾಡಿಗ, ಶಂಕರ ದೇವಾಡಿಗ, ಫೈಸಲ್, ಮಹಾಬಲ ದೇವಾಡಿಗ, ರಾಜು ಗಾಣಿಗ, ರಾಘವೇಂದ್ರ ಬಂಕೇಶ್ವರ, ಗೋಪಾಲ ಆಚಾರಿ, ಮಹಾಬಲೇಶ್ವರ ಆಚಾರಿ, ಅಣ್ಣಪ್ಪ, ಗ್ರಾಪಂ ಸದಸ್ಯೆ ಕಲಾವತಿ ನಾಗರಾಜ ಗಾಣಿಗ, ಜೋಕಿಮ್ ಫೆರ್ನಾಂಡಿಸ್, ತಮಿಮಾ ಮೊದಲಾದವರು ವಹಿಸಿದ್ದರು. ಕಾವೇರಿ ಮಾರ್ಗದಿಂದ ಮೆರವಣಿಗೆಯಲ್ಲಿ ಸಾಗಿ ಬೈಂದೂರು ಆರಕ್ಷಕ ಠಾಣಾಧಿಕಾರಿಗಳು, ಗ್ರಾಮ ಪಂಚಾಯತ್ ಪಿಡಿಓ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

  

Exit mobile version