Kundapra.com ಕುಂದಾಪ್ರ ಡಾಟ್ ಕಾಂ

ಮರವಂತೆಯಲ್ಲಿ ಗುರು ಪೂರ್ಣಿಮೆ ನಿಮಿತ್ತ ಸಂಗೀತೋಪಾಸನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹಿಂದುಸ್ಥಾನಿ ಸಂಗೀತ ಗುರುಗಳಾದ ವಿದ್ವಾನ್ ಸತೀಶ ಭಟ್ ಮಾಳಕೊಪ್ಪ ಮತ್ತು ವಿದುಷಿ ಪ್ರತಿಮಾ ಭಟ್ ಅವರ ಶಿಷ್ಯವೃಂದ ರವಿವಾರದ ಗುರು ಪೂರ್ಣಿಮೆಯ ನಿಮಿತ್ತ ಮರವಂತೆಯ ಸಾಧನಾ ಸಮುದಾಯ ಭವನದ ವಿ. ಕೆ. ಕಾಮತ್ ಸಭಾ ಭವನದಲ್ಲಿ ಗುರುಪೂಜೆ ಮತ್ತು ಸಂಗೀತೋಪಾಸನೆ ನಡೆಸಿತು. ನಿವೃತ್ತ ಶಿಕ್ಷಕ ಹಾಗೂ ಸಾಲಿಗ್ರಾಮ ಮಕ್ಕಳ ಮೇಳದ ಸಂಚಾಲಕ ಎಚ್. ಶ್ರೀಧರ ಹಂದೆ ಮತ್ತು ಹಿರಿಯ ತಬಲಾ ವಾದಕ ಸತ್ಯವಿಜಯ ಭಟ್ ಮುಖ್ಯ ಅತಿಥಿಗಳಾಗಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಧರ ಹಂದೆ ಈಗ ಪೋಷಕರು ತಮ್ಮ ಮಕ್ಕಳು ಅಂಕಗಳ ಬೆನ್ನು ಹತ್ತುವಂತೆ ಅತಿಯಾದ ಒತ್ತಡ ಹೇರುತ್ತಿದ್ದಾರೆ. ಇದರಿಂದಾಗಿ ಮಕ್ಕಳು ಮುಂದೆ ಬದುಕಿನ ಭಾಗವಾಗಬೇಕಾದ ಸಾಂಸ್ಕೃತಿಕ ಪ್ರಜ್ಞೆ ಮತ್ತು ರಸಾನುಭೂತಿಯಿಂದ ವಂಚಿತರಾಗುವಂತೆ ಮಾಡುತ್ತಿದ್ದಾರೆ. ಮಕ್ಕಳು ಕನಿಷ್ಠ ಒಂದು ಕಲೆಯಲ್ಲಾದೂ ಪರಿಣತಿ ಪಡೆದರೆ ಇಂತಹ ವಂಚನೆಗೆ ಒಳಗಾಗರು ಎಂದರು.

ಸಂಗೀತದ ಬಗೆಗೆ ಮಾತನಾಡಿದ ಅವರು ಅದು ಕಲೆಗಳಲ್ಲೇ ಅತ್ಯಂತ ಪ್ರಾಚೀನವಾದುದು. ಅದು ದೇವಾನುದೇವತೆಗಳ ಕೊಡುಗೆ. ಮನುಷ್ಯ ಜೀವನದಲ್ಲೂ ಅದು ಹಾಸುಕೊಕ್ಕಾಗಿದೆ. ಆ ಕಲೆ ಗಳಿಸಿದವರ ಜತೆಯಲ್ಲಿ ಸದಾ ಇರುತ್ತದೆ ಎಂದು ಹೇಳಿದರು. ಗುರುಪೂರ್ಣಿಮೆಯ ನೆವದಲ್ಲಿ ಗುರುಪೂಜೆ ಸಲ್ಲಿಸುವ ಪರಿಪಾಠವನ್ನು ಶ್ಲಾಘಿಸಿದ ಅವರು ಗುರುಭಕ್ತಿಯಿಂದ ಮಾತ್ರ ಕಲಿತ ವಿದ್ಯೆ ಸಿದ್ಧಿಸುತ್ತದೆ ಎಂದರು.

ಪೋಷಕರ ಪರವಾಗಿ ಸುಧಾ ಹೆಗಡೆ, ಡಾ. ರೂಪಶ್ರೀ, ಚಂದ್ರಿಕಾ ಧನ್ಯ, ವಿದ್ಯಾರ್ಥಿಗಳ ಪರವಾಗಿ ನೇಹಾ ಹೊಳ್ಳ ಅನ್ನಿಸಿಕೆ ಹಂಚಿಕೊಂಡರು. ವಿದ್ಯಾರ್ಥಿಗಳಾದ ಅದಿತಿ ಕುಲಕರ್ಣಿ ಯಶಾ, ನಮೃತಾ, ಮಲ್ಲಿಕಾ, ಶ್ರದ್ಧಾ ಶೆಟ್ಟಿ, ಯೇಶ್ಣಾ, ಅನುರಾಧಾ, ನಾಗರಾಜ ಭಟ್ಟ, ಅವ್ಯಕ್ತ ಹೆಬ್ಬಾರ್, ಅಬಿಷೇಕ ಭಟ್, ಚಿನ್ಮಯಿ ಧನ್ಯ, ಕೇದಾರ ಮರವಂತೆ, ನೇಹಾ ಹೊಳ್ಳ, ವೀಣಾ ನಾಯಕ್, ಶ್ರವಣ್ ಪೈ, ಶಮಾ ಸೋಮಯಾಜಿ, ಪ್ರೀತಮ್ ಹೆಗಡೆ ಗುರುದಂಪತಿಗೆ ಪೂಜೆ ಸಲ್ಲಿಸಿ, ಕಾಣಿಕೆ ನೀಡಿದರು. ವಿವಿಧ ರಾಗಗಳನ್ನು ಪ್ರಸ್ತುತಪಡಿಸಿ ಗುರುಗಳನ್ನು, ಪೋಷಕರನ್ನು, ಸಂಗೀತಾಸಕ್ತರನ್ನು ಮೆಚ್ಚಿಸಿದರು. ಉಪಸ್ಥಿತರಿದ್ದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಪ್ರಧಾನ ಅರ್ಚಕ ಕೆ. ಗೋವಿಂದ ಅಡಿಗ ವಿದ್ಯಾರ್ಥಿಗಳಿಗೆ ಮೂಕಾಂಬಿಕೆಯ ಪ್ರಸಾದ ನೀಡಿ ಹರಸಿದರು. ಶಮಾ ಸೋಮಯಾಜಿ ನಿರೂಪಿಸಿದರು. ಜತೀಂದ್ರ ಮರವಂತೆ ವಂದಿಸಿದರು. ವಿದ್ಯಾರ್ಥಿಗಳ ಸಂಗೀತೋಪಾಸನೆಯ ಬಳಿಕ ಗುರು ದಂಪತಿ ಹಾಡಿದರು. ಅವರಿಗೆ ಶಂಕರ ಶೆಣೈ ಹಾರ್ಮೋನಿಯಂ, ಸತ್ಯವಿಜಯ ಭಟ್ ಮತ್ತು ಪಾಂಗಾಳ ದಿನೇಶ ಶೆಣೈ ತಬ್ಲಾ ಸಾಥ್ ನೀಡಿದರು.

 

Exit mobile version