Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರಿನಲ್ಲಿ ಪ್ರಾಚ್ಯವಸ್ತು ಪ್ರದರ್ಶನ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಪ್ರಾಚ್ಯವಸ್ತುಗಳು ಇತಿಹಾಸದ ಆಕರಗಳು. ಅವು ಸಮುದಾಯದ ಪ್ರಾಚೀನ ಜೀವನ ವಿಧಾನ, ಸಾಂಸ್ಕೃತಿಕ ಬೆಳವಣಿಗೆ ಮತ್ತು ಬದಲಾವಣೆಗಳ ಮೇಲೆ ಬೆಳಕು ಚೆಲ್ಲುತ್ತವೆ. ಅಧ್ಯಯನದ ದೃಷ್ಟಿಯಿಂದ ಮಹತ್ವ ಪಡೆದಿರುವ ಅಂತಹ ವಸ್ತುಗಳನ್ನು ಸಂಗ್ರಹಿಸಿ ರಕ್ಷಿಸುವ ಕೆಲಸವನ್ನು ಶಿಕ್ಷಣ ಸಂಸ್ಥೆಗಳು ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಮೂಲಕ ಮಾಡಬಹುದು ಎಂದು ನಿವೃತ್ತ ಬ್ಯಾಂಕ್ ಅಧಿಕಾರಿ ಎಂ. ಗೋವಿಂದ ಹೇಳಿದರು.

ಪ್ರಾಚ್ಯ ವಸ್ತು ಸಂಗ್ರಹಾಲಯಗಳ ಮತ್ತು ಪರಂಪರೆಯ ಇಲಾಖೆಯು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಸ್ಮಾರಕಗಳ ಮೂರ್ತ ಮತ್ತು ಅಮೂರ್ತ ಪರಂಪರೆಯ ಸಂಪತ್ತಿನ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಇಲ್ಲಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಆಯೋಜಿಸಿದ್ದ ಸ್ಪರ್ಧೆಗಳ ಭಾಗವಾಗಿ ನಡೆದ ನಿತ್ಯಬಳಕೆಯ ಪ್ರಾಚ್ಯವಸ್ತುಗಳ ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರದರ್ಶನವನ್ನು ಉದ್ಘಾಟಿಸಿದ ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಮರವಂತೆ ವಸ್ತುಗಳ ಸಂಗ್ರಹಕ್ಕೆ ಶ್ರಮಿಸಿದ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಅಭಿನಂದಿಸಿ, ಶಿಕ್ಷಣ ಸಂಸ್ಥೆಗಳಲ್ಲಿ ಇಂತಹ ವಸ್ತುಗಳ ಕಿರು ಸಂಗ್ರಹಾಲಯವನ್ನು ಹೊಂದುವ ಮೂಲಕ ಮಕ್ಕಳಲ್ಲಿ ಇತಿಹಾಸದ ಪ್ರಜ್ಞೆ ಮೂಡಿಸಬಹುದು ಎಂದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವೀಂದ್ರ ಶ್ಯಾನುಭಾಗ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಸಂಯೋಜಿಸಿದ್ದ ಶಿಕ್ಷಕ ಗಣಪತಿ ಹೋಬಳಿದಾರ್ ಸ್ವಾಗತಿಸಿ, ವಂದಿಸಿದರು. ಪ್ರಭಾರ ಮುಖ್ಯೋಪಾಧ್ಯಾಯಿನಿ ಮುಕ್ತಾ, ವಿದ್ಯಾರ್ಥಿ ನಾಯಕ ಡಿ. ನಾಗರಾಜ, ಉಪ ನಾಯಕ ಶಿವದರ್ಶನ, ನಾಯಕಿ ಜಾನ್ಸಿ ಇದ್ದರು. ಪ್ರದರ್ಶನದಲ್ಲಿ ಇದ್ದ, ಹಿಂದೆ ಬಳಕೆಯಲ್ಲಿದ್ದು ಈಗ ಮೂಲೆಗುಂಪಾಗಿರುವ ಕೃಷಿ ಉಪಕರಣಗಳು, ಗೃಹೋಪಯೋಗಿ ವಸ್ತುಗಳು, ಆಹಾರ ಸಿದ್ಧತಾ ಪರಿಕರಗಳು, ಅಳತೆ ಪಾತ್ರೆಗಳು, ಸಾಮಗ್ರಿ ಸಂಗ್ರಾಹಕಗಳು, ಪೂಜಾ ಉಪಕರಣಗಳು, ಆಯುಧಗಳು, ಆಟದ ಸಾಮಗ್ರಿಗಳು ಮತ್ತು ಹಳೆಯ ನಾಣ್ಯಗಳು ಗಮನ ಸೆಳೆದುವಲ್ಲದೆ ಅವುಗಳ ಸಂಗ್ರಹದ ಹಿಂದೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತೋರಿದ ಆಸಕ್ತಿ ಮತ್ತು ವಹಿಸಿದ ಶ್ರಮ ಮೆಚ್ಚುಗೆ ಗಳಿಸಿದುವು.

 

Exit mobile version