Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ ರೋಟರಿ ಕ್ಲಬ್‌ನ ಪದಗ್ರಹಣ

????????????????????????????????????

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ಅಂತರಾಷ್ಟ್ರೀಯ ಮಟ್ಟದಲ್ಲಿ ಸೇವಾ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುತ್ತಿರುವ ೧೨೨ ವರ್ಷಗಳ ಇತಿಹಾಸ ಹೊಂದಿರುವ ರೋಟರಿ ಸಂಸ್ಥೆಯು ವಿಶ್ವದ ೨೦ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಸುಮಾರು ೧೨ ಲಕ್ಷಕ್ಕೂ ಮಿಕ್ಕಿ ಸದಸ್ಯರನ್ನು ಹೊಂದಿರುವ ರೋಟರಿ ಸಂಸ್ಥೆಯು ಪೊಲೀಯೋ ನಿರ್ಮೂಲನೆಯಲ್ಲಿ ಮಹತ್ತರವಾದ ಕಾರ್ಯನಿರ್ವಹಿಸಿದೆ ಎಂದು ರೋಟರಿ ವಲಯ ೩ರ ಮಾಜಿ ಅಸಿಸ್ಟೆಂಟ್ ಗವರ್ನರ್ ಬಿ.ರಾಜಾರಾಮ ಭಟ್ ಹೇಳಿದರು.

ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಸಭಾಂಗಣದಲ್ಲಿ ಜರಗಿದ ಗಂಗೊಳ್ಳಿ ರೋಟರಿ ಕ್ಲಬ್‌ನ ಪದಗ್ರಹಣ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳಿಗೆ ಪದಪ್ರದಾನ ನೆರವೇರಿಸಿ ಅವರು ಮಾತನಾಡಿದರು.

ರೋಟರಿ ಮ್ಯಾಚಿಂಗ್ ಗ್ರಾಂಟ್ ಮೂಲಕ ಅನೇಕ ಶಾಲೆಗಳ ಅಭಿವೃದ್ಧಿಯಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುವಲ್ಲಿ ರೋಟರಿ ಸಂಸ್ಥೆ ಶ್ರಮಿಸಿದೆ. ರೋಟರಿ ಮೂಲಕ ಸ್ನೇಹ ಸಂಬಂಧಗಳು ಬೆಳೆದು ಸಮಾಜದಲ್ಲಿ ಸೌಹಾರ್ದ ವಾತಾವರಣ ನಿರ್ಮಾಣ ಮಾಡಲು ಸಹಾಯಕವಾಗುತ್ತದೆ. ಯಾವುದೇ ಜಾತಿ ಮತ ಬೇಧವಿಲ್ಲದೆ ಲಿಂಗ ತಾರತಮ್ಯವಿಲ್ಲದೆ ವಿಶ್ವದ ಎಲ್ಲೆಡೆ ಸೇವೆ ಸಲ್ಲಿಸಲು ಇರುವ ಏಕೈಕ ಸಂಸ್ಥೆಯಾಗಿದೆ. ಸುಮಾರು ೩೨ ವರ್ಷಗಳಷ್ಟು ಹಳೆಯ ಗಂಗೊಳ್ಳಿ ರೋಟರಿ ಕ್ಲಬ್ ತನ್ನ ವಿಶಿಷ್ಟ ಸಾಧನೆ ಮೂಲಕ ಗುರುತಿಸಿಕೊಂಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಶ್ಲಾಘಿಸಿದರು.

ಗಂಗೊಳ್ಳಿ ರೋಟರಿ ಕ್ಲಬ್‌ನ ನಿರ್ಗಮಿತ ಅಧ್ಯಕ್ಷ ರಾಘವೇಂದ್ರ ಭಂಡಾರ್‌ಕಾರ್ ಅವರು ನೂತನ ಅಧ್ಯಕ್ಷ ದುರ್ಗರಾಜ್ ಪೂಜಾರಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಮುಖ್ಯ ಅತಿಥಿಗಳಾಗಿದ್ದ ರೋಟರಿ ಜಿಲ್ಲೆ ೩೧೮೨ ವಲಯ ೧ರ ಅಸಿಸ್ಟೆಂಟ್ ಗವರ್ನರ್ ಕೆ.ಕೆ.ಕಾಂಚನ್ ಮತ್ತು ಜೋನಲ್ ಲೆಫ್ಟಿನೆಂಟ್ ಮನೋಜ್ ನಾಯರ್ ಶುಭ ಹಾರೈಸಿದರು. ಇದೇ ಸಂದರ್ಭ ಇತ್ತೀಚಿಗೆ ನಡೆದ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಪ್ರಥಮ ರ‍್ಯಾಂಕ್ ಪಡೆದ ರಾಧಿಕಾ ಪೈ ಗಂಗೊಳ್ಳಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ನಿರ್ಗಮಿತ ಅಧ್ಯಕ್ಷ ರಾಘವೇಂದ್ರ ಭಂಡಾರ್‌ಕಾರ್ ಸ್ವಾಗತಿಸಿದರು. ಕಾರ್ಯದರ್ಶಿ ನಾರಾಯಣ ನಾಯ್ಕ್ ವರದಿ ವಾಚಿಸಿದರು. ಸುಗುಣ ಆರ್., ಪ್ರದೀಪ ಡಿ.ಕೆ. ಮತ್ತು ನಾಗರಾಜ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಕೆ.ರಾಮನಾಥ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಅಶೋಕ ದೇವಾಡಿಗ ವಂದಿಸಿದರು.

Exit mobile version