Kundapra.com ಕುಂದಾಪ್ರ ಡಾಟ್ ಕಾಂ

ಬೀಟ್ ವ್ಯವಸ್ಥೆಯಿಂದ ಪೊಲೀಸ್ ಹಾಗೂ ಜನಸಾಮಾನ್ಯರ ಬಾಂಧವ್ಯ ವೃದ್ಧಿ: ಎಸ್ಪಿ ಕೆ.ಟಿ. ಬಾಲಕೃಷ್ಣ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೀಟ್ ವ್ಯವಸ್ಥೆಯನ್ನು ರಾಜ್ಯ ಸರಕಾರ ಶಾಸನಬದ್ಧಗೊಳಿಸಿ ಆದೇಶ ಹೊರಡಿಸಿದ್ದು, ಗಸ್ತು ಅಧಿಕಾರಿಗಳ ಮೂಲಕ ಗ್ರಾಮದ ಸಮಸ್ಯೆಗಳನ್ನು ಬಗೆಹರಿಸಲಿಕೊಳ್ಳಲು, ಪೊಲೀಸರು ಹಾಗೂ ಜನಸಾಮಾನ್ಯರ ನಡುವೆ ಉತ್ತಮ ಬಾಂಧವ್ಯ ಬೆಳೆಯಲು ಸಾಧ್ಯವಾಗಲಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಟಿ. ಬಾಲಕೃಷ್ಣ ಹೇಳಿದರು.

ಅವರು ಬೈಂದೂರು ವೃತ್ತ ಪೊಲೀಸ್ ಠಾಣೆಗಳ ಉಪಗಸ್ತು ನಾಗರಿಕ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾರ್ವಜನಿಕರ ಸಹಕಾರವಿಲ್ಲದೇ ಬೀಟ್ ವ್ಯವಸ್ಥೆಯನ್ನು ನಡೆಸಲು ಸಾಧ್ಯವಿಲ್ಲ. ಪ್ರತಿ ಠಾಣಾ ವ್ಯಾಪ್ತಿಯಲ್ಲಿಯೂ ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಿ ನಾಗರಿಕರು ಹಾಗೂ ಇಲಾಖೆಯ ನಡುವಿನ ಅಂತರವನ್ನು ದೂರ ಮಾಡಲಾಗುತ್ತಿದೆ ಎಂದರು.

ಬೀಟ್ ವ್ಯವಸ್ಥೆಯ ಕುರಿತಾಗಿ ಪೊಲೀಸ್ ಪೇದೆಗಳಾದ ಮೋಹನ್, ಸರೋಜಾ, ಹಾಗೂ ನಂದಯ್ಯ ಮಾತನಾಡಿದರು. ಸಂಘಟನೆಗಳ ಪರವಾಗಿ ಸತೀಶ್ ನಾಯಕ್, ನಾರಾಯಣ ಶೆಟ್ಟಿ ಜಡ್ಕಲ್, ಶರತ್ ಶೆಟ್ಟಿ ಉಪ್ಪುಂದ, ಸುಕುಮಾರ ಶೆಟ್ಟಿ ಮಾತನಾಡಿದರು. ಠಾಣೆಗಳ ಉಪಗಸ್ತು ನಾಗರಿಕ ಸದಸ್ಯರಿಗೆ ಐಡಿಕಾರ್ಡ್ ನೀಡಲಾಯಿತು.

ಕುಂದಾಪುರ ಉಪವಿಭಾಗ ಡಿವೈಎಸ್ಪಿ ಪ್ರವೀಣ್ ನಾಯಕ್, ವೃತ್ತ ನಿರೀಕ್ಷಕ ರಾಘವ ಡಿ. ಪಡೀಲ್, ಬೈಂದೂರು ಠಾಣಾಧಿಕಾರಿ ಸಂತೋಷ್ ಕಾಯ್ಕಿಣಿ, ಗಂಗೊಳ್ಳಿ ಠಾಣಾಧಿಕಾರಿ ಸುಬ್ಬಣ್ಣ, ಕೊಲ್ಲೂರು ಠಾಣಾಧಿಕಾರಿ ಶೇಖರ್ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕ ಸುಧಾಕರ ಪಿ. ಕಾರ್ಯಕ್ರಮ ನಿರೂಪಿಸಿದರು.

Exit mobile version