Kundapra.com ಕುಂದಾಪ್ರ ಡಾಟ್ ಕಾಂ

ಆಳ್ವಾಸ್‍ನಲ್ಲಿ ಉದ್ಯಮಶೀಲತಾ ವಿಕಸನ ರಾಷ್ಟ್ರಮಟ್ಟದ ಕಾರ್ಯಾಗಾರಕ್ಕೆ ಚಾಲನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಭಾರತ ಸರ್ಕಾರದ ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆ ನೆರವಿನೊಂದಿಗೆ ಭಾರತೀಯ ಉದ್ಯಮಶೀಲತೆ ಸಂಸ್ಥೆಯ ವತಿಯಿಂದ ಪ್ರಾಧ್ಯಾಪಕರಿಗಾಗಿ 12 ದಿನಗಳು ನಡೆಯಲಿರುವ ಉದ್ಯಮಶೀಲತಾ ವಿಕಸನ ರಾಷ್ಟ್ರಮಟ್ಟದ ಕಾರ್ಯಾಗಾರಕ್ಕೆ ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೋಮವಾರ ಚಾಲನೆ ನೀಡಲಾಯಿತು.

ಭಾರತೀಯ ಉದ್ಯಮಶೀಲತೆ ಸಂಸ್ಥೆಯ ಪ್ರೋಗ್ರಾಂ ನಿರ್ದೇಶಕ ಯಶಸ್ವಿನಿ ನಾಗ್ ಕಾರ್ಯಾಗಾರಕ್ಕೆ ಚಾಲನೆ ನೀಡಿ, ಭಾರತ ಸರ್ಕಾರವು ಸ್ಟಾರ್ಟ್ ಅಪ್ ಹಾಗೂ ಸ್ಟಾಂಡ್‍ಅಪ್ ಯೋಜನೆಗಳಿಗೆ ಬಳಸುವ ಅನುದಾನದಲ್ಲಿ ಹೆಚ್ಚಿನ ಭಾಗವನ್ನು ಉದ್ಯಮಶೀಲತೆ ಉತ್ತೇಜನಕ್ಕೆ ಬಳಸಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಅನ್ವೇಷಣಾ ಗುಣವನ್ನು ಹೆಚ್ಚಿಸಲು ಪ್ರಮುಖ ಪಾತ್ರವಹಿಸುವ ಶಿಕ್ಷಕರಲ್ಲೂ ಪರಿಪಕ್ವತೆ ಇರುವುದು ಅವಶ್ಯಕ. ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ಶಿಕ್ಷಕರ ನೀಡುವ ತರಬೇತು ಅತ್ಯಂತ ಪರಿಣಾಮಕಾರಿಯಾಗುತ್ತದೆ ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಉದ್ಯಮದಲ್ಲಿ ಗುರುತರವಾದ ಬದಲಾವಣೆಗಳಾಗುತ್ತಿವೆ. ಅದಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳನ್ನು ಪರಿವರ್ತಿಸುವ ಜವಾಬ್ದಾರಿ ಪ್ರಾಧ್ಯಾಪಕರ ಮೇಲಿದೆ. ಬೋಧಕರು ಗಂಟೆಗಳ ಲೆಕ್ಕದಲ್ಲಿ ವಿದ್ಯಾರ್ಥಿಗಳಿ ಪಾಠ ಮಾಡಿದರೆ ಮಾತ್ರ ಸಾಲದು. ಜ್ಞಾನಸಂಪಾದನೆಗೆ ವಿದ್ಯಾರ್ಥಿಗಳು ತಮಗೆ ತಾವೇ ಹಾಕಿಕೊಂಡಿರುವ ಕಟ್ಟುಪಾಡುಗಳನ್ನು ತೆಗೆದು ಅವರಲ್ಲಿ ಅಗಾಧವಾದ ಜ್ಞಾನ ಪ್ರಸಾರವನ್ನು ಮಾಡುವವರು ಉತ್ತಮ ಶಿಕ್ಷಕರಾಗಲು ಸಾಧ್ಯ. ಯಾವುದೇ ಉದ್ಯಮ ಪ್ರಾರಂಭಿಸುವಾಗ ಬೇಕಾಗಿರುವುದು ಸರಿಯಾದ ಯೋಜನೆ, ನಿಜವಾದ ಆಸಕ್ತಿ ಎಂದರು.

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡಿಸ್, ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ಇಂಜಿನಿಯರಿಂಗ್ ಕಾಲೇಜಿನ ಯೋಜನಾ ವಿಭಾಗದ ಡೀನ್ ಡಾ.ಧತ್ತಾತ್ರೇಯ ಉಪಸ್ಥಿತರಿದ್ದರು.

ಪ್ರೊ.ಸುದರ್ಶನ್ ಅತಿಥಿಗಳನ್ನು ಪರಿಚಯಿಸಿದರು.ಉಪನ್ಯಾಸಕ ಸಚಿನ್ ಕಾರ್ಯಕ್ರಮ ನಿರೂಪಿಸಿದರು. ಹರ್ಷಿತಾ ವಂದಿಸಿದರು.

Exit mobile version