ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೆಲವರ ದೇಹದ ಚರ್ಮದಲ್ಲಿ ಬಿಳಿಯಾಗಿ ಕಾಣುವ ತೊನ್ನು ರೋಗ ಶಾಪವಲ್ಲ. ಸಾಂಕ್ರಮಿಕ ಕಾಯಿಲೆಯೂ ಅಲ್ಲ. ಅನುವಂಶಿಯವೂ ಅಲ್ಲ. ಅದನ್ನು ಸುಲಭವಾಗಿ ಗುಣಪಡಿಸುವ ಚಿಕಿತ್ಸೆ ಲಭ್ಯವಿದೆ ಎಂದು ಜನಸಾಮಾನ್ಯರಿಗೆ ಅರಿವು ಮೂಡಿಸುವ ಜನಜಾಗೃತಿ ಅಭಿಯಾನ ಕುಂದಾಪುರಕ್ಕೆ ಅಗಮಿಸಿತು.
ರಾಜ್ಯಮಟ್ಟದ ಅಭಿಯಾನದ 20 ನೇ ದಿನ ಕುಂದಾಪುರಕ್ಕೆ ಆಗಮಿಸಿದ ಅಭಿಯಾನದ ವಾಹನವನ್ನು ಚಿನ್ಮಯಿ ಆಸ್ಪತ್ರೆಯ ವಠಾರದಲ್ಲಿ ಸ್ವಾಗತಿಸಲಾಯಿತು. ಭಾರತೀಯ ಚರ್ಮ, ಲೈಂಗಿಕ ಹಾಗೂ ಕುಷ್ಠರೋಗಗಳ ತಜ್ಞರ ಸಂಘ, ಕರ್ನಾಟಕ ಶಾಖೆ ವತಿಯಿಂದ ಹೊರಟ ಈ ಅಭಿಯಾನದ ಕುರಿತು ಚಿನ್ಮಯಿ ಆಸ್ಪತ್ರೆಯ ವಠಾರದಲ್ಲಿ ನಡೆದ ಸಮಾರಂಭದಲ್ಲಿ ವಿವರಿಸಲಾಯಿತು.
ಕುಂದಾಪುರ ಐ.ಎಂ.ಎ ಅಧ್ಯಕ್ಷ ಡಾ| ನಿಖಿಲ್ ರೈ ಮಾಹಿತಿ ಪತ್ರ ಬಿಡುಗಡೆಗೊಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕುಂದಾಪುರ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಉದಯಶಂಕರ ಅಧ್ಯಕ್ಷತೆ ವಹಿಸಿದ್ದರು. ಮನೋರೋಗ ತಜ್ಞ , ರಾಜ್ಯ ಐ.ಎಂ.ಎ ಯ ಮಾಜಿ ಉಪಾಧ್ಯಕ್ಷ ಡಾ.ಕೆ.ಎಸ್.ಕಾರಂತ್ , ಮೂಳೆ ತಜ್ಞ ಡಾ.ದಿನೇಶ್ ಶೆಟ್ಟಿ ,ಅರಿವಳಿಕೆ ತಜ್ಞ ಡಾ.ಶೇಖರ್ , ಕುಂದಪ್ರಭ ಅಧ್ಯಕ್ಷ ಯು.ಎಸ್.ಶೆಣೈ ವೇದಿಕೆಯಲ್ಲಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಚಿನ್ಮಯಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ , ಚರ್ಮರೋಗ ತಜ್ಞ , ಡಾ.ಉಮೇಶ ಪುತ್ರನ್ “ತೊನ್ನು ರೋಗದ ಬಗ್ಗೆ ಇರುವ ಮೂಢನಂಬಿಕೆ ಹೋಗಲಾಡಿಸಿ , ಈ ರೋಗ ಯಾವ ದೇವರ ಶಾಪವೂ ಅಲ್ಲ, ಇದನ್ನು ನಿಯಂತ್ರಿಸುವ . ಗುಣಪಡಿಸುವ ಚಿಕಿತ್ಸಾ ವಿಧಾನಗಳಿವೆ. ಈ ಬಗ್ಗೆ ಸಾರ್ವಜನಿಕ ಜಾಗ್ರತಿ ಮೂಡಿಸಲು ಈ ಜನಜಾಗೃತಿ ಅಭಿಯಾನ ನಡೆಯುತ್ತಿದೆ ಎಂದರು.
ಚಿನ್ಮಯಿ ಆಸ್ಪತ್ರೆಯ ಭಾಸ್ಕರ ವಂದಿಸಿದರು. ಕುಂದಾಪುರದ ಪ್ರಮುಖ ಸ್ಥಳಗಳಲ್ಲಿ ಜನಜಾಗೃತಿ ಈ ಮಾಹಿತಿ ವಿತರಣಾ ಕಾರ್ಯಕ್ರಮ ನಡೆಯಿತು.