Kundapra.com ಕುಂದಾಪ್ರ ಡಾಟ್ ಕಾಂ

ಯಕ್ಷಗಾನ ಹಾಸ್ಯಗಾರ ಮಹಾಬಲ ದೇವಾಡಿಗರಿಗೆ ಸನ್ಮಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಚಿತ್ತೂರು: ಯಕ್ಷಗಾನ ಒಂದು ಸಮೃದ್ಧ ಕಲೆ. ನೃತ್ಯ, ಹಾಡುಗಾರಿಕೆ, ವೇಷಭೂಷಣ ಅಭಿನಯಗಳಿಂದ ಕೂಡಿದ ಈ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ನಮ್ಮ ಕಲಾವಿದರು ಸಾಕಷ್ಟು ಶ್ರಮಿಸುತ್ತಿದ್ದಾರೆ. ಆದರೆ ಜೀವನ ಪರ್ಯಂತ ಕಲಾ ಸೇವೆ ಮಾಡಿದ ಕಲಾವಿದರು ಕೊನೆಗಾಲದಲ್ಲಿ ಸಾಕಷ್ಟು ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಾರೆ. ಇಂತಹ ಕಲಾವಿದರಿಗೆ ಸರಕಾರ ಹಾಗೂ ಯಕ್ಷಪ್ರೇಮಿಗಳು ಸಹಕಾರ ನೀಡಬೇಕಾಗಿದೆ ಎಂದು ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಅರ್ಚಕ ವಿಘ್ನೇರ್ಶವರ ಮಂಜ ನುಡಿದರು.

ಮಾರಣಕಟ್ಟೆ ವಾಸುಕಿ ಸಭಾಭವನದಲ್ಲಿ ಮಾರಣಕಟ್ಟೆ ವಿಪ್ರ ಯಕ್ಷಗಾನ ಅಭಿಮಾನಿ ಬಳಗದ ವತಿಯಿಂದ ಮಂದಾರ್ತಿ ಮೇಳದ ಹಾಸ್ಯಗಾರ ಮಹಾಬಲ ದೇವಾಡಿಗರಿಗೆ ನಡೆದ ಸನ್ಮಾನ ಸಮಾರಂಭ ಉದ್ದೇಶಿಸಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಹಿರಿಯ ಅರ್ಚಕರಾದ ಶ್ರೀ ನಾಗೇಂದ್ರ ಭಟ್ ವಹಿಸಿ ಕಲಾವಿದ ಮಹಾಬಲ ದೇವಾಡಿಗರನ್ನು ಸನ್ಮಾನಿಸಿದರು. ಮಹಾಬಲ ದೇವಾಡಿಗರಿಗೆ ರೂ. ೫೦ ಸಾವಿರ ಆರ್ಥಿಕ ಮೊತ್ತ ನೀಡಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ಯಕ್ಷಗಾನ ಭಾಗವತ ವಿಶ್ವೇಶ್ವರ ಸೋಮಯಾಜಿ, ಸಾಲಿಗ್ರಾಮ ಮೇಳದ ಭಾಗವತ ರಾಘವೇಂದ್ರ ಮಯ್ಯ, ಭಾಗವಹಿಸಿದ್ದರು. ಮಾರಣಕಟ್ಟೆಯ ಹೋಟೆಲ್ ಗಣೇಶ್ ಪ್ರಸಾದ್ ಇದರ ಮಾಲಕ ಶಂಕರ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗುರುರಾಜ್ ಭಟ್ ಶಂಕ್ರಪ್ಪನಕೊಡ್ಲು ಸನ್ಮಾನ ಪತ್ರ ವಾಚಿಸಿದರು. ಶ್ರೀ ಸುದೀಂದ್ರ ಉಡುಪ ಹೊಸೂರು ವಂದಿಸಿದರು. ಪತ್ರಕರ್ತ ಚಿತ್ತೂರು ಪ್ರಭಾಕರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಗುರು ಸೋಮಯಾಜಿ ಮೋರ್ಟು, ಗಣಪತಿ ಅಡಿಗ ಕುಂಜ್ಞಾಡಿ ಹಾಗೂ ಸಂಗಡಿಗರು ಕಾರ್ಯಕ್ರಮ ಸಂಘಟಿಸಿದರು.

Exit mobile version