Kundapra.com ಕುಂದಾಪ್ರ ಡಾಟ್ ಕಾಂ

ಕಪ್ಪಾಡಿ ಶಾಲೆ ದುರಸ್ತಿ ಕಡೆಗಣಿಸಿರುವ ಬಗ್ಗೆ ಬಿ.ಎಂ ಸುಕುಮಾರ ಶೆಟ್ಟಿ ಆಕ್ರೋಶ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕಾಲ್ತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಪ್ಪಾಡಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ಮೇಲ್ಛಾವಣಿ ಕುಸಿದಿದ್ದು ಕಟ್ಟಡವೂ ಶಿಥಿಲಾವಸ್ಥೆಯಲ್ಲಿದೆ. ಇಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಬಿ.ಎಂ ಸುಕುಮಾರ ಶೆಟ್ಟಿ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿ ಪೋಷಕರು ಅಧಿಕಾರಿ ಭೇಟಿ ನೀಡಿದ ಸಂದರ್ಭದಲ್ಲಿ ಬೇಜವಾಬ್ದಾರಿಯಿಂದ ನಡೆದುಕೊಂಡ ಬಗ್ಗೆ ದೂರಿಕೊಂಡರು.

ಈ ಬಗ್ಗೆ ಪ್ರತಿಕ್ರಿಯಿಸಿದ ಸುಕುಮಾರ ಶೆಟ್ಟಿ ಅವರು ಶಾಲೆಯ ದುರಸ್ತಿಯ ಬಗ್ಗೆ ಕಳೆದ ಆರು ವರ್ಷದಿಂದ ಬೇಡಿಕೆಯಿಟ್ಟಿದ್ದರೂ ಯಾರೋಬ್ಬರೂ ಈ ಬಗ್ಗೆ ಗಮನ ಹರಿಸಿಲ್ಲ. ಶಿಥಿಲಗೊಂಡ ಕಟ್ಟಡದಲ್ಲಿಯೇ ಈವರೆಗೆ ಮಕ್ಕಳನ್ನು ಕುಳ್ಳಿರಿಸಿದ್ದು ಇಲಾಖೆಯ ಬೇಜವಬ್ದಾರಿಯನ್ನೂ ತೋರ್ಪಡಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಭೇಟಿ ನೀಡಿದ್ದ ಡಿಡಿಪಿಐ ಪೋಷಕರನ್ನು ಹೆಸರಿಸಿ ಇಲಾಖೆಯ ನಡೆಯನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಅವರು ಈ ಹಿಂದೆಯೇ ಎಚ್ಚೆತ್ತುಕೊಂಡಿದ್ದರೆ ಇಂದು ಶಾಲೆಯ ಪರಿಸ್ಥಿತಿ ಹೀಗಾಗುತ್ತಿರಲಿಲ್ಲ. ಮೇಲ್ಛಾವಣಿ ಕುಸಿದು ತರಗತಿ ನಿಂತಿರುವ ಘಟನೆ ಈ ಭಾಗದಲ್ಲಿ ನಡೆದಿರಲಿಲ್ಲ. ಆಡಳಿತದ ಬೇಜವಾಬ್ದಾರಿಯೇ ಇದೆಲ್ಲದಕ್ಕೂ ಕಾರಣ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ರೈತಮೋರ್ಚಾ ಪ್ರಮುಖ ದೀಪಕ್‌ಕುಮಾರ್ ಶೆಟ್ಟಿ ಹಾಗೂ ಇತರರು ಜೊತೆಗಿದ್ದರು.

 

Exit mobile version