Kundapra.com ಕುಂದಾಪ್ರ ಡಾಟ್ ಕಾಂ

ತಾಲೂಕು ಮಟ್ಟದ ಅರಣ್ಯ ಸಂವರ್ಧನ ಅಭಿಯಾನಕ್ಕೆ ಚಾಲನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾರಂಭದಿಂದಲೂ ಸಾಮಾಜಿಕ ಅರಣ್ಯೀಕರಣ ಮತ್ತು ಜಲಸಂವರ್ಧನಾ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗುತ್ತಿದ್ದು, ಎಲ್ಲೆಡೆಗಳಲ್ಲಿಯೂ ವನಸಂವರ್ಧನೆ ಆಗಬೇಕೆಂಬ ದೃಷ್ಟಿಕೋನದಿಂದ ವಿಶೇಷವಾಗಿ ದೇವಾಲಯಗಳ ಪರಿಸರದಲ್ಲಿ ದೇವರಕಾಡು, ಸರಕಾರಿ ಭೂಮಿಗಳಲ್ಲಿ ಪ್ರಗತಿವನ, ಶಾಲಾ ಪರಿಸರಗಳಲ್ಲಿ ಶಾಲಾ ವನ, ಔಷಧಿ ವನ, ನವಗ್ರಹ ವನ ಮೊದಲಾದ ಕಾರ್ಯಕ್ರಮಗಳಿಗೆ ಪ್ರೇರಣೆ ನೀಡುತ್ತಿರುವುದು ಪ್ರಶಂಶನೀಯ ಎಂದು ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.

ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೈಂದೂರು ವಂಡ್ಸೆ ವಲಯ, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಅತ್ರಾಡಿ ಮತ್ತು ದೇವಲ್ಕುಂದ, ಅರಣ್ಯ ಇಲಾಖೆ ಮಾವಿನಗುಳಿ ಮತ್ತು ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಇವರ ಜಂಟಿ ಆಶ್ರಯದಲ್ಲಿ ಬಗ್ವಾಡಿ ಶ್ರೀ ಮಹಿಷಾಸುರಮರ್ದಿನಿ ದೇವಸ್ಥಾನದ ವಠಾರದಲ್ಲಿ ಜರಗಿದ ತಾಲೂಕು ಮಟ್ಟದ ಅರಣ್ಯ ಸಂವರ್ಧನ ಅಭಿಯಾನ ಉದ್ಘಾಟಿಸಿ ಮಾತನಾಡಿದರು.

ಗಿಡಗಳನ್ನು ನಾಟಿ ಮಾಡಿದರೆ ಸಾಲದು ಅವುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು. ಇಂಗುಗುಂಡಿ ರಚನೆ, ತಡೆಕಟ್ಟುಗಳು, ಬೋರ್‌ವೆಲ್ ಮರುಪೂರಣ ಮುಂತಾದ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಈ ಎಲ್ಲಾ ಕಾರ್ಯಕ್ರಮಗಳು ಜನರ ಸಹಭಾಗಿತ್ವದಲ್ಲಿ ನಡೆದರೆ ಯಶಸ್ವಿಯಾಗಲು ಸಾಧ್ಯ ಎಂದರು.

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಕುಂದಾಪುರ ಶಾಖೆಯ ಅಧ್ಯಕ್ಷ ಕೆ.ಕೆ.ಕಾಂಚನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಕ್ಲಾಡಿ ಗ್ರಾಪಂ ಸದಸ್ಯ ರಾಧಾಕೃಷ್ಣ ಗಾಣಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಟ್‌ಬೇಲ್ತೂರು ಗ್ರಾಪಂ ಉಪಾಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ತ್ರಾಸಿ ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ರಾಜು ದೇವಾಡಿಗ, ತಾಪಂ ಸದಸ್ಯೆ ಇಂದಿರಾ ಶೆಟ್ಟಿ, ಪ್ರಗತಿಬಂಧು ಸ್ವಸಹಾಯ ಸಂಘಗಳ ಕೇಂದ್ರ ಸಮಿತಿ ಅಧ್ಯಕ್ಷ ಎಚ್.ಎಂ.ಕೃಷ್ಣ ಪೂಜಾರಿ, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ವಂಡ್ಸೆ ವಲಯಾಧ್ಯಕ್ಷೆ ನಯನ, ವಂಡ್ಸೆ ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ತ್ಯಾಂಪಣ್ಣ ಶೆಟ್ಟಿ, ಮಾಜಿ ವಲಯಾಧ್ಯಕ್ಷೆ ಸುಪ್ರೀತಾ ಶೆಟ್ಟಿ ಮೊದಲಾವರು ಉಪಸ್ಥಿತರಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೈಂದೂರು ಯೋಜನಾಧಿಕಾರಿ ಶಶಿರೇಖಾ ಪಿ. ಸ್ವಾಗತಿಸಿದರು. ವಂಡ್ಸೆ ವಲಯ ಮೇಲ್ವಿಚಾರಕಿ ನೇತ್ರಾವತಿ ಕಾರ್ಯಕ್ರಮ ನಿರೂಪಿಸಿದರು. ಸೇವಾ ಪ್ರತಿನಿಧಿ ರಾಜ ಎಸ್.ಪಿ. ವಂದಿಸಿದರು.

Exit mobile version