Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಕೇಂದ್ರ ಸರಕಾರದಿಂದ ರೈತರ ಸಾಲಮನ್ನಾ ಒತ್ತಾಯಿಸಿ ಪ್ರತಿಭಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇತ್ತೀಚೆಗೆ ರಾಜ್ಯದ ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೇಸ್ ಸರಕಾರ ತಲಾ 50 ಸಾವಿರ ರೂಪಾಯಿಯಂತೆ 24ಲಕ್ಷ ರೈತರ 8,100 ಕೋಟಿಗೂ ಮಿಕ್ಕಿ ಸಹಕಾರಿ ಸಂಘಗಳಲ್ಲಿನ ಸಾಲವನ್ನು ಮನ್ನಾ ಮಾಡಿದ್ದು, ಅದೇ ರೀತಿಯಾಗಿ ಇನ್ನುಳಿದ ರೈತರ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸಾಲವನ್ನು ಮನ್ನಾ ಮಾಡುವಂತೆ ಕೇಂದ್ರದ ಮೋದಿ ಸರಕಾರವನ್ನು ಒತ್ತಾಯಿಸಿ ಇಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕುಂದಾಪುರ ಶಾಖೆಯ ಎದುರು ಕುಂದಾಪುರ ಯುವಕಾಂಗ್ರೇಸ್ ವತಿಯಿಂದ ಪ್ರತಿಭಟನೆ ನಡೆಸಿ ಕುಂದಾಪುರ ಉಪವಿಭಾಗಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕುಂದಾಪುರ ಯುವ ಕಾಂಗ್ರೇಸ್ ಅಧ್ಯಕ್ಷ ಇಚ್ಚಿತಾರ್ಥ ಶೆಟ್ಟಿ ಮಾತನಾಡಿ ಸ್ವಿಸ್ ಬ್ಯಾಂಕ್‌ನಲ್ಲಿನ ಕಪ್ಪು ಹಣವನ್ನು ತಂದು ದೇಶದ ಪ್ರಜೆಗಳಿಗೆ ತಲಾ ಹದಿನೈದು ಲಕ್ಷದಂತೆ ಹಂಚಲಾಗುವುದು. ಯುವಕರಿಗೆ ವರ್ಷಕ್ಕೆ ೨ಕೋಟಿ ಉದ್ಯೋಗಾವಕಾಶವನ್ನು ಸೃಷ್ಟಿಸಿಲಾಗುವುದು. ಈ ಮೂಲಕ ದೇಶಕ್ಕೆ ಅಚ್ಚೇದಿನ್ ಬರಲಿದೆ ಎಂದು ಮೋದಿಯವರು ಕಳೆದ ಲೋಕಸಭಾ ಚುನಾವಣೆಯ ವೇಳೆ ಹೇಳಿದ್ದರು. ಆದರೆ ಆ ಆಶ್ವಾಸನೆಗಳು ಕೇವಲ ಹೇಳಿಕೆಗಳಾಗಿಯೇ ಉಳಿದುಕೊಂಡವು. ಆದರೆ ದೇಶದ ದೊಡ್ಡ ದೊಡ್ಡ ಉದ್ಯಮಿಗಳ ಸುಮಾರು ೬೬ಸಾವಿರ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿರುವ ಮೋದಿಯವರ ಸರಕಾರದ ಅರ್ಥಸಚಿವ ಅರುಣ್ ಜೇಟ್ಲಿಯವರು ಕರ್ನಾಟಕದ ರೈತರ ಸಾಲ ಮನ್ನಾ ಮಾಡುವಂತೆ ಮಾಡಿದ ಮನವಿಗೆ ಒಂದು ನಯಾಪೈಸೆ ಕೂಡ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. ಈ ಮೂಲಕ ಮೋದಿಯವರ ಸರಕಾರ ಕೇವಲ ಉದ್ಯಮಿಗಳ ಪರವಾದ ಸರಕಾರ, ರೈತ ವಿರೋಧಿ ಸರಕಾರ ಎನ್ನುವುದು ಸಾಭೀತಾಗಿದೆ ಎಂದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಕಾರ್ಯದರ್ಶಿ ನಾರಾಯಣ ಆಚಾರ್, ಶಿವಾನಂದ ಕೆ., ಇಂಟಕ್ ಅಧ್ಯಕ್ಷ ಲಕ್ಷ್ಮಣ ಶೆಟ್ಟಿ, ನಗರ ಪ್ರಾಧಿಕಾರದ ಅಧ್ಯಕ್ಷ ವಿಕಾಸ್ ಹೆಗ್ಡೆ, ಎ.ಪಿ.ಎಂ.ಸಿ ಉಪಾಧ್ಯಕ್ಷ ಗಣೇಶ್ ಸೇರುಗಾರ್, ನಗರ ಕಾಂಗ್ರೇಸ್ ಕಾರ್ಯದರ್ಶಿ ವಿನೋದ್ ಕ್ರಾಸ್ತಾ, ಪುರಸಭಾ ಸದಸ್ಯರಾದ ಪ್ರಭಾಕರ ಕೋಡಿ, ಚಂದ್ರಶೇಖರ ಖಾರ್ವಿ, ಚಂದ್ರ ಅಮೀನ್, ಕೇಶವ ಭಟ್, ಉಮೇಶ್, ಮಹಿಳಾ ಕಾಂಗ್ರೇಸ್‌ನ ರೇವತಿ ಶೆಟ್ಟಿ, ಆಶಾ ಕರ್ವೆಲ್ಲೋ, ಶೋಭಾ ಸಚ್ಚಿದಾನಂದ, ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ವಿಶ್ವಾಸ್ ಅಮೀನ್, ಪ್ರಧಾನ ಕಾರ್ಯದರ್ಶಿ ವಕ್ವಾಡಿ ರಮೇಶ ಶೆಟ್ಟಿ, ಕಾಂಗ್ರೇಸ್ ಐಟಿ ಸೆಲ್ ರಾಜ್ಯ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಶ್ವಾಸ್ ಶೆಟಿ, ಕುಂದಾಪುರ ಯುವ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಸಂಪತ್ ಶೆಟ್ಟಿ ರಟ್ಟಾಡಿ, ಯುವ ಮುಖಂಡರಾದ ತ್ರಿಶೂಲ್ ಶೆಟ್ಟಿ, ಮಂಜುನಾಥ ಕುಲಾಲ್, ಸಂದೀಪ್ ರಟ್ಟಾಡಿ, ಶಶಿಕಾಂತ್ ಕಾಂಚನ್, ಗಣೇಶ್ ಶ್ರೀಯಾನ್, ವಿಜಯ ಪೂಜಾರಿ, ಸಂತೋಷ್ ಹಿಲಿಯಾಣ, ಆಸಿಫ್ ಹೈಕಾಡಿ, ಸತ್ಯ ಮುಂತಾದವರು ಉಪಸ್ಥಿತರಿದ್ದರು.

Exit mobile version