Site icon Kundapra.com ಕುಂದಾಪ್ರ ಡಾಟ್ ಕಾಂ

ಕೇಂದ್ರ ರೈತರ ರಾಷ್ಟ್ರೀಕೃತ ಬ್ಯಾಂಕಗಳ ಸಾಲ ಮನ್ನ ಮಾಡಲಿ: ಬೈಂದೂರು ಪ್ರತಿಭಟನೆಯಲ್ಲಿ ಆಗ್ರಹ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕೇಂದ್ರ ಸರ್ಕಾರ ರಾಷ್ಟ್ರೀಯ ಬ್ಯಾಂಕುಗಳಲ್ಲಿನ ಕೃಷಿಕರ ಸಾಲಮನ್ನಾ ಮಾಡಬೇಕೆಂದು ಆಗ್ರಹಿಸಿ ಬೈಂದೂರಿನಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿ ಇಲ್ಲಿನ ವಿಶೇಷ ತಹಶೀಲ್ದಾರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಬೈಂದೂರು ಯುವ ಕಾಂಗ್ರೆಸ್ ಅಧ್ಯಕ್ಷ ಶೇಖರ ಪೂಜಾರಿ ಮಾತನಾಡಿ, ರಾಜ್ಯದ 160 ತಾಲೂಕುಗಳಲ್ಲಿ ಕಳೆದ ಆರು ವರ್ಷದಿಂದ ಭೀಕರ ಬರಗಾಲ ಎದುರಾಗಿದ್ದು ಬೆಳೆಯಿಲ್ಲದೇ ಕೃಷಿಕರು ಕಂಗಲಾಗಿದ್ದಾರೆ, ಜಾನುವಾರುಗಳಿಗೆ ಮೇವು, ನೀರಿಲ್ಲದೆ, ಪರಿತಪಿಸುವಂತಾಗಿದೆ. ಹೀಗಾಗಿ ಕೃಷಿಕರಿಗೆ ಬ್ಯಾಂಕುಗಳಲ್ಲಿ ಮಾಡಿದ ಸಾಲ ಮರುಪಾವತಿ ನಡೆಸಲು ಸಾಧ್ಯವಾಗದೇ ಆತ್ಮಹತ್ಯೆ ಹಾದಿ ಹಿಡಿಯುವಂತಾಗಿದೆ. ಕೃಷಿಕರ ಸಂಕಷ್ಟ ಅರಿತ ರಾಜ್ಯ ಸರ್ಕಾರ ಕೃಷಿಕರ ಸಹಕಾರಿ ಸಂಘಗಳಲ್ಲಿನ 50 ಸಾವಿರ ರೂ. ವರೆಗಿನ ಸಾಲ ಮನ್ನಾ ಮಾಡಿದ್ದು, ಕೇಂದ್ರ ಸರ್ಕಾರ ರಾಷ್ಟ್ರೀಯ ಬ್ಯಾಂಕುಗಳಲ್ಲಿನ ಎಲ್ಲಾ ಸಾಲಮನ್ನಾ ಮಾಡಬೇಕು ಎಂದು ಅವರು ಆಗ್ರಹಿಸಿದರು.

ರಾಜ್ಯ ಸರ್ಕಾರದ ಸಾಲಮನ್ನಾದಿಂದಾಗಿ ರಾಜ್ಯದ ೫೫ ಲಕ್ಷ ರೈತರಿಗೆ ಅನುಕೂಲವಾಗಿದೆ ಎಂದ ಅವರು ರಾಷ್ಟ್ರೀಯ ಬ್ಯಾಂಕುಗಳಲ್ಲಿನ ಸಾಲಮನ್ನಾ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಹಲವು ಪತ್ರ ಬರೆದರು ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ, ಅವರಿಗೆ ಕೃಷಿಕರ ಬಗ್ಗೆ ಕಾಳಜಿಯಿಲ್ಲ ಎಂದು ಕಿಡಿಕಾರಿದರು. ಬಳಿಕ ಬೈಂದೂರು ವಿಶೇಷ ತಹಶೀಲ್ದಾರ ಕಿರಣ ಗೋರಯ್ಯ ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಬೈಂದೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಾಗರಾಜ ಗಾಣಿಗ, ಯುವ ಕಾಂಗ್ರೆಸ್ ಮುಖಂಡರಾದ ಜಗದೀಶ ದೇವಾಡಿಗ, ರಾಜೇಶ ದೇವಾಡಿಗ, ಗಣೇಶ ಪೂಜಾರಿ, ಜೀಜು ಮುದೂರು, ಸನತ್ ಬಳೆಗಾರ್ ಕೊಲ್ಲೂರು, ವಿಜಯ ಪೂಜಾರಿ ನಾಗೂರು, ಪ್ರಶಾಂತ ಪೂಜಾರಿ, ಶರತ್ ದೇವಾಡಿಗ ಬಿಜೂರು, ಮಣಿಕಂಠ, ವೀರೇಂದ್ರ ಗಾಣಿಗ, ಮಾಣಿಕ್ಯ ಹೋಬಳಿದಾರ್, ಲಕ್ಷ್ಮಣ ಮೊಗವೀರ ಮತ್ತಿತರರು ಉಪಸ್ಥಿತಿದ್ದರು.

 

Exit mobile version