ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಕ್ಕಳ ಮೇಲಿನ ದೌರ್ಜನ್ಯಕ್ಕೆ ನಿಮ್ಮ ಮುಂದೆ ನಿಂತ ನಾನೇ ಸಾಕ್ಷಿ! ಭೂಮಿ ಒಡಲು ಬಗೆದು ಕಲ್ಲು ತೆಗೆದು ಹಣಮಾಡಿಕೊಂಡು, ಹೊಂಡ ಮಾತ್ರಾ ಹಾಗೆ ಬಿಟ್ಟು ಮಕ್ಕಳ ಪ್ರಾಣಕ್ಕೆ ಕುತ್ತು ಬರುತ್ತಿದೆ. ರಾಷ್ಟ್ರೀಯ ಹೆದ್ದಾರಿ ಆಜುಬಾಜು ಬರುವ ಶಾಲಾ ಮಕ್ಕಳು ರಸ್ತೆ ದಾಟುವುದು ಒಂದು ಸಾಹಸ. ಭೂಮಿ ಬಗೆದು ಗಣಿಗಾರಿಕೆ ನಡೆಸಿರೋದು ಯಾರೋ, ಅಪಾಯಕಾರಿ ಹೊಂಡ ಮುಚ್ಚಲು ಸರಕಾರಿ ದುಡ್ಡು!
ಇದು ಜಿಲ್ಲಾಡಳಿತ, ತಾಲೂಕ್ ಪಂಚಾಯತ್, ಸಿಡಬ್ಲ್ಯೂಸಿ ಸಂಸ್ಥೆ, ಮಕ್ಕಳ ಸಂಘ, ಮಕ್ಕಳ ಹಾಗೂ ಮಹಿಳಾ ಮಿತ್ರರು ಆಶ್ರಯದಲ್ಲಿ ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಮಕ್ಕಳು ಮತ್ತು ಮಹಿಳಾ ಹಕ್ಕು ಹಾಗೂ ರಕ್ಷಣೆ ಕುರಿತು ನಡೆದ ಸಂವಹನದಲ್ಲಿ ಮಕ್ಕಳು ಸಮಸ್ಯೆಗಳ ಅನಾವರಣ ಮಾಡಿದ ಪರಿ.
ಮಕ್ಕಳ ಮಿತ್ರ ಪ್ರತಿನಿಧಿ ಪವನ್‌ಕುಮಾರ್ ಮಾತನಾಡಿ, ತಾಲೂಕಿನಾದ್ಯಂತ ಇರುವ ಅಪಾಯಕಾರಿ ಕಲ್ಲುಕ್ವಾರೆ ಹೊಂಡಗಳು ಮಕ್ಕಳ ಪಾಲಿನ ಯಮಧೂತನಂತಿವೆ. ಕಲ್ಲು ಕಡಿದು ಹಣ ಮಾಡಿಕೊಳ್ಳುವುದು ಯಾರೋ. ಬಲಿಯಾಗುವುದು ಮಕ್ಕಳು. ಅಪಾಯಕಾರಿ ಕಲ್ಲುಕೋರೆ ಹೊಂಡ ಮುಚ್ಚುವಂತೆ ಒತ್ತಾಯಿಸಿದರು.
ಕುಂದಾಪುರ ಉಪವಿಭಾಗಾಧಿಕಾರಿ ಶಿಲ್ಪ ನಾಗ್ ಸಿ.ಟಿ., ಪ್ರತಿಕ್ರಿಯೆ ನೀಡಿ, ತಾಲೂಕಿನಲ್ಲಿರುವ ಕೆಲವೊಂದು ಅಪಾಯಕಾರಿ ಕಲ್ಲುಕ್ವಾರಿ ಹೊಂಡಗಳ ಮುಚ್ಚಲಾಗಿದೆ. ಹಾಗೆ ಉಳಿದ ಹೊಂಡಗಳ ಮುಚ್ಚುವಂತೆ ಜಿಲ್ಲಾಧಿಕಾರಿ ಸಂಬಂಧಪಟ್ಟವರಿಗೆ ನೋಟಿಸ್ ನೀಡಿದ್ದಾರೆ. ಅದಕ್ಕೂ ಬಗ್ಗದೆ ಹೊಂಡ ಸುತ್ತಾ ಸುರಕ್ಷತೆ ಕ್ರಮ ಕೈಗೊಳ್ಳದಿದ್ದವರ ಪರವಾನಿಗೆ ರದ್ದು ಮಾಡಲಾಗುತ್ತದೆ. ಬೇನಾಮಿ ಕಲ್ಲುಕೋರೆ ಹೊಂಡಗಳ ಮುಚ್ಚಲು ಜಿಲ್ಲಾಡಳಿತವೇ ಕ್ರಮ ಕೂಗೊಳ್ಳಲಿದೆ ಎಂದು ಹೇಳಿದರು.
ಮಕ್ಕಳ ಪ್ರತಿನಿಧಿ ಮೊಹಮ್ಮದ್ ಇಶ್ರಾಫ್ ಮಾತನಾಡಿ ಮಕ್ಕಳ ಮೇಲಿ ಇನ್ನೂ ದೌರ್ಜನ್ಯನಡೆಯುತ್ತಿದೆ ಎನ್ನೋದಕ್ಕೆ ನಾನೇ ಪ್ರತ್ಯಕ್ಷ ಸಾಕ್ಷಿ.ನನಗೆ ರಕ್ಷಣೆ ಕೊಡದಿದ್ದರೆ ಪೊಲೀಸ್ ಠಾಣೆ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪತ್ರ ಬರೆದ ನಂತರ ನನಗೆ ನ್ಯಾಯ ಸಿಕ್ಕಿತು. ಅನ್ಯಾಯದ ವಿರುದ್ಧದ್ವನಿ ಎತ್ತುವ ಕೆಲಸ ಆಗಬೇಕು ಎಂದು ಹೇಳಿದರು.
ಮಕ್ಕಳ ಮಿತ್ರರಾದ ಶರತ್ ಮೋವಾಡಿ, ಜ್ಯೋತಿ, ಸಂಗೀತಾ ಶಂಖ ಇಂಗಡಿ, ಸತೀಶ್ ಪೂಜಾರಿ ಮಕ್ಕಳ ಮತ್ತು ಮಹಿಳೆಯರ ಸಮಸ್ಯೆಗಳ ಗಮನಕ್ಕೆ ತಂದರೆ. ತಾಲೂಕಿನ ಹಲವು ಸಮಸ್ಯೆಗಳ ಬಗ್ಗೆ ರವೀಂದ್ರ ದೊಡ್ಮನೆ, ಕೊರ್ಗಿ ಗ್ರಾಪಂ ಉಪಾಧ್ಯಕ್ಷಗೌರೀಶ್ ಹೆಗ್ಡೆ, ಗೋಪಾಡಿ ಗ್ರಾಪಂ ಸದಸ್ಯ ಸುರೇಶ್ ಶೆಟ್ಟಿ, ಅಂಪಾರು ಗ್ರಾಪಂ ಉಪಾದ್ಯಕ್ಷ ಕಿರಣ್ ಹೆಗ್ಡೆ, ಬೈಂದೂರು ರೋಟರಿ ಮಾಜಿ ಅಧ್ಯಕ್ಷ ಎಂ. ಗೋವಿಂದ್ ಗಮನ ಸೆಳೆದರು. ನಮ್ಮ ಭೂಮಿ ಪ್ರತಿನಿಧಿ ಕೃಪಾ ಎಂ.ಎಂ. ತಾಲೂಕಿನಲ್ಲಿರುವ ಸಮಸ್ಯೆಗಳ ಅಂಕೆ, ಅಂಶ ನೀಡಿದರು.
ಕುಂದಾಪುರ ತಾಲೂಕ್ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೊಗವೀರ, ತಾಪಂ ಇಒ ಚೆನ್ನಪ್ಪ ಮೋಯಿಲಿ, ಅಕ್ರಮ ಮಧ್ಯ ಮಾರಾಟ ವಿರುದ್ಧದ ಹೋರಾಟಗಾರ‍್ತಿ ದೇವಿಯಕ್ಕಾ ಇದ್ದರು. ಅಪಾಯಕಾರಿ ನೀರಿನತೊಟ್ಟಿ ಏಣಿಗಳು, ಕಾಲುಸಂಕ, ವಿದ್ಯುತ್ ಕಂಬ ಹಾಗೂ ಲೈನ್, ಓವರ್ ಲೋಡ್ ಶಾಲಾ ವಾಹಣಗಳ ಸಂಚಾರ, ತ್ಯಾಜ್ಯ ವಿಲೇವಾರಿ ಮುಂತಾದ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಕನ್ಯಾನ ನಮ್ಮ ಭೂಮಿ ವ್ಯವಸ್ಥಾಪಕ ದಾಮೋಧರ ಆಚಾರ್ಯ ಪ್ರಾಸ್ತಾವಿಕ ಮಾತನಾಡಿದರು. ಮಕ್ಕಳ ಮಿತ್ರ ಶ್ರೀನಿವಾಸ ಗಾಣಿಗ, ನಿರೂಪಿಸಿ, ಸ್ವಾಗತಿಸಿದರು.