Kundapra.com ಕುಂದಾಪ್ರ ಡಾಟ್ ಕಾಂ

ಕಾಂಗ್ರೆಸ್ ಮುಕ್ತ ರಾಜ್ಯವನ್ನಾಗಿ ಮಾಡಲು ಕಾರ್ಯಕರ್ತರು ಶ್ರಮಿಸಬೇಕು: ಕೋಟ ಶ್ರೀನಿವಾಸ ಪೂಜಾರಿ

????????????????????????????????????

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಾಜ್ಯದ ಸುರಕ್ಷತೆ ದೃಷ್ಟಿಯಿಂದ ಮತ್ತೊಮ್ಮೆ ಬಿಜೆಪಿ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಗ್ರಾಮದ ಪ್ರತಿಯೊಂದು ಮನೆ ಮನೆಗೆ ತೆರಳಿ ಜನರ ಸಮಸ್ಯೆಗಳನ್ನು ಅರಿತುಕೊಂಡು, ಕೇಂದ್ರ ಸರಕಾರ ಯೋಜನೆಗಳನ್ನು ಜನರಿಗೆ ಮನವರಿಕೆ ಮಾಡಬೇಕು. ಪಕ್ಷದ ಕಾರ್ಯಕರ್ತರು ಕೇಂದ್ರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವುದನ್ನು ಮೈಮರೆತರೆ ಜನರು ಅಪಪ್ರಚಾರಗಳಿಗೆ ಬಲಿಯಾಗಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಹಿನ್ನಡೆಯಾಗುವ ಸಾಧ್ಯತೆಗಳಿವೆ. ಕೇಂದ್ರದ ಯೋಜನೆಗಳಿಗೆ ರಾಜ್ಯ ಸರಕಾರದ ನಾಮಫಲಕ ಅಳವಡಿಸಿ ತಮ್ಮ ಸಾಧನೆ ಎಂದು ಬಿಂಬಿಸಿಕೊಳ್ಳಲು ಅವಕಾಶ ನೀಡಿದಂತಾಗುತ್ತದೆ ಎಂದು ಮಾಜಿ ಸಚಿವ, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಗಂಗೊಳ್ಳಿಯ ಶ್ರೀ ವೀರೇಶ್ವರ ಮಾಂಗಲ್ಯ ಮಂದಿರದಲ್ಲಿ ಗುರುವಾರ ಸಂಜೆ ಜರಗಿದ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಭಾರತೀಯ ಜನತಾ ಪಾರ್ಟಿಯ ಗಂಗೊಳ್ಳಿ ಸ್ಥಾನೀಯ ಸಮಿತಿ ಪದಾಧಿಕಾರಿಗಳ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಬಿಪಿಎಲ್ ಕಾರ್ಡ್ ಹೊಂದಿರುವ ಬಡವರಿಗೆ ಕೇಂದ್ರ ಸರಕಾರ ಉಚಿತವಾಗಿ ಎಲ್‌ಪಿಜಿ ಸಂಪರ್ಕವನ್ನು ನೀಡುತ್ತಿದ್ದು ರಾಜ್ಯ ಸರಕಾರ ಇದನ್ನು ಅನಿಲ ಭಾಗ್ಯ ಯೋಜನೆ ಎಂದು ಬಿಂಬಿಸಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದೆ. ಅನ್ನಭಾಗ್ಯ ಯೋಜನೆಯಡಿ ವಿತರಿಸಲಾಗುತ್ತಿರುವ ಅಕ್ಕಿಗೆ ಕಿಲೋ ಒಂದಕ್ಕೆ ೨೯ ರೂ. ಸಬ್ಸಿಡಿ ನೀಡುತ್ತಿದ್ದರೂ ಎಲ್ಲೂ ಕೂಡ ರಾಜ್ಯ ಸರಕಾರ ಪ್ರಧಾನ ಮಂತ್ರಿಗಳ ಭಾವಚಿತ್ರ ಹಾಕುವ ಸೌಜನ್ಯ ತೋರುತ್ತಿಲ್ಲ ಎಂದು ಅವರು ಆರೋಪಿಸಿದರು.

ಲಿಂಗಾಯತ ಸಮುದಾಯದ ಶೇ.೯೦ರಷ್ಟು ಮಂದಿ ಭಾರತೀಯ ಜನತಾ ಪಾರ್ಟಿಯನ್ನು ಬೆಂಬಲಿಸುತ್ತಿರುವುದರಿಂದ, ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಬೇಕೆಂದು ಆಸೆ ಪಟ್ಟಿದ್ದರಿಂದ ಲಿಂಗಾಯತ ಧರ್ಮವನ್ನು ಒಡೆದು ಅವರಿಗೆ ಬೇರೆ ಧರ್ಮ ಸ್ಥಾಪನೆಗೆ ಮುಂದಾಗಿದ್ದಾರೆ. ಎಲ್ಲರಿಗೂ ಒಂದೊಂದು ಧರ್ಮ ಸ್ಥಾಪನೆಯಾದರೆ ಹಿಂದು ಧರ್ಮ ಎಲ್ಲಿ ಹೋಗಲಿದೆ. ಹಿಂದು ಧರ್ಮದವರು ಒಟ್ಟಾಗಿ ನಿಲ್ಲಬಾರದೆಂಬುದು ಸಿದ್ಧರಾಮಯ್ಯನವರು ಸಂಚು ರೂಪಿಸಿದ್ದು, ಧರ್ಮವನ್ನು ಒಡೆಯುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಅವರು ರಾಜ್ಯ ಸರಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಸಂಘ ಪರಿವಾರದ, ಬಿಜೆಪಿ ಕಾರ್ಯಕರ್ತರ ಹತ್ಯೆಗಳು ನಡೆಯುತ್ತಿದೆ. ಇತ್ತೀಚಿಗೆ ನಡೆದ ಶರತ್ ಮಡಿವಾಳ ಹತ್ಯೆ ಪ್ರಕರಣ ಆರೋಪಿಗಳನ್ನು ಬಂಧಿಸುವ ತಾಕತ್ತು ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರಕಾರಕ್ಕೆ ಇಲ್ಲ. ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಂತೆ ಆಗ್ರಹಿಸಿ ಮುಖಂಡ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ಉಸ್ತುವಾರಿ ಸಚಿವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರನ್ನು ಕರೆದು ನಿರಪರಾಧಿಗಳ ಮೇಲೆ ಕೇಸ್ ದಾಖಲಿಸುವಂತೆ ಸೂಚನೆ ನೀಡಿರುವುದು ಮನೋಸ್ಥಿತಿಯನ್ನು ಸೂಚಿಸುತ್ತದೆ ಎಂದು ಹೇಳಿದ ಅವರು, ಮುಂದಿನ ದಿನಗಳಲ್ಲಿ ಪಕ್ಷದ ಕಾರ್ಯಕರ್ತರು ವಿಶ್ರಾಂತಿ ಪಡೆದುಕೊಳ್ಳದೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಪಕ್ಷದ ಅಧ್ಯಕ್ಷ ಅಮಿತ್ ಷಾ ಇಚ್ಛೆಯಂತೆ ಕಾಂಗ್ರೆಸ್ ಮುಕ್ತ ರಾಜ್ಯವನ್ನಾಗಿ ಮಾಡಲು ಕಾರ್ಯಕರ್ತರು ಶ್ರಮಿಸಬೇಕು. ಪಕ್ಷ ಸಂಘಟನೆ ಹಾಗೂ ಪಕ್ಷ ಬಲವರ್ಧನೆ ಬಗ್ಗೆ ಕಾರ್ಯಕರ್ತರು ಹೆಚ್ಚಿನ ಸಮಯವನ್ನು ನೀಡಬೇಕು ಎಂದರು.

ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಿ.ಎಂ.ಸುಕುಮಾರ್ ಶೆಟ್ಟಿ ಅವರು ನೂತನ ಬೂತ್ ಸಮಿತಿ ಸಮಿತಿ ಅಧ್ಯಕ್ಷ, ಕಾರ್ಯದರ್ಶಿಯವರಿಗೆ ಗುರುತು ಚೀಟಿ ವಿತರಿಸಿ ಶುಭ ಹಾರೈಸಿದರು. ಬಿಜೆಪಿ ವಿಸ್ತಾರಕರಾದ ಬಿ.ಕಿಶೋರ್ ಕುಮಾರ್ ಕುಂದಾಪುರ ಮತ್ತು ರಾಜೇಶ ಕಾವೇರಿ ಬೂತ್ ಸಮಿತಿ ಸದಸ್ಯರ ಜವಾಬ್ದಾರಿ ಹಾಗೂ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. ಬಿಜೆಪಿ ಮುಖಂಡ ದೀಪಕಕುಮಾರ್ ಶೆಟ್ಟಿ, ತ್ರಾಸಿ ಶಕ್ತಿ ಕೇಂದ್ರದ ಅಧ್ಯಕ್ಷ ಶೇಖರ ದೇವಾಡಿಗ, ತಾಪಂ ಸದಸ್ಯ ಸುರೇಂದ್ರ ಖಾರ್ವಿ, ಜಿಪಂ ಸದಸ್ಯೆ ಶೋಭಾ ಜಿ.ಪುತ್ರನ್, ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ, ಗುಜ್ಜಾಡಿ ಗ್ರಾಪಂ ಅಧ್ಯಕ್ಷ ಹರೀಶ ಮೇಸ್ತ, ಬಿಜೆಪಿ ಮುಖಂಡರಾದ ರಾಮಪ್ಪ ಖಾರ್ವಿ, ಉಮಾನಾಥ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.

ಗಂಗೊಳ್ಳಿ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಜಯರಾಮ ದೇವಾಡಿಗ ಸ್ವಾಗತಿಸಿದರು. ಅಶೋಕ್ ಎನ್.ಡಿ. ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಬಿ.ಗಣೇಶ ಶೆಣೈ ವಂದಿಸಿದರು.

Exit mobile version