Kundapra.com ಕುಂದಾಪ್ರ ಡಾಟ್ ಕಾಂ

ಉನ್ನತ ಶಿಕ್ಷಣ ಪಡೆದು ಸಮೃದ್ಧ ದೇಶ ಕಟ್ಟುವಲ್ಲಿ ಕೈಜೋಡಿಸಬೇಕು: ಕೃಷ್ಣ ತಾಂಡೇಲ

????????????????????????????????????

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ಭಾರತ ದೇಶದ ಶೇ.೧೬ ರಷ್ಟು ಜನರು ಮಾತ್ರ ಉನ್ನತ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಹೀಗಾಗಿ ಮಕ್ಕಳ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸದೆ ಉನ್ನತ ಶಿಕ್ಷಣ ಪಡೆಯುವಲ್ಲಿ ಪೋಷಕರು ಸಹಕರಿಸಬೇಕು. ಪ್ರತಿಯೊಬ್ಬರು ಉನ್ನತ ಶಿಕ್ಷಣ ಪಡೆದು ಸಮೃದ್ಧ ದೇಶ ಕಟ್ಟುವಲ್ಲಿ ಕೈಜೋಡಿಸಬೇಕು. ಸತತ ೧೩ ವರ್ಷಗಳಿಂದ ಮಕ್ಕಳಿಗೆ ವಿದ್ಯಾರ್ಥಿವೇತನದ ಮೂಲಕ ವಿದ್ಯಾಭ್ಯಾಸಕ್ಕೆ ನೆರವು ನೀಡುತ್ತಿರುವ ಪಂಚಗಂಗಾವಳಿ ವಿದ್ಯಾನಿಧಿ ಯೋಜನೆ ಕಾರ್ಯ ಪ್ರಶಂಸನೀಯ ಎಂದು ಭೂದಾಖಲೆಗಳ ನಿವೃತ್ತ ಸಹಾಯಕ ನಿರ್ದೇಶಕ ಕೃಷ್ಣ ತಾಂಡೇಲ ಕುಮಟಾ ಹೇಳಿದರು.

ಅವರು ಗಂಗೊಳ್ಳಿಯ ಶ್ರೀ ವಿಜಯ ವಿಠಲ ಮಂಟಪದಲ್ಲಿ ಜರಗಿದ ಪಂಚಗಂಗಾವಳಿ ಬಳಗ ಗಂಗೊಳ್ಳಿ ಪ್ರಾಯೋಜಿತ ಪಂಚಗಂಗಾವಳಿ ವಿದ್ಯಾನಿಧಿ ಯೋಜನೆಯ ೧೩ನೇ ವರ್ಷದ ವಿದ್ಯಾರ್ಥಿವೇತನ ವಿತರಣಾ ಸಮಾರಂಭದ ಅಧ್ಯಕ್ಷೆತೆ ವಹಿಸಿ ಮಾತನಾಡಿದರು.

ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ರಾಘವೇಂದ್ರ ಶೇರುಗಾರ್, ನಿಟ್ಟೆಯ ಎನ್‌ಎಂಎಎಚ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯ ಅಸಿಸ್ಟೆಂಟ್ ಪ್ರೋಫೆಸರ್ ಸಂದೀಪ ಖಾರ್ವಿ ಗಂಗೊಳ್ಳಿ ಶುಭ ಹಾರೈಸಿದರು. ಬಸ್ರೂರು ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಕಲಾಶ್ರೀ ವಿದ್ಯಾರ್ಥಿವೇತನ ವಿತರಿಸಿದರು. ಇದೇ ಸಂದರ್ಭ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಎಂಟನೇ ರ‍್ಯಾಂಕ್ ಪಡೆದ ದಿಶಾ ಭಟ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪಂಚಗಂಗಾವಳಿ ಬಳಗದ ಅಧ್ಯಕ್ಷ ಶ್ರೀನಿವಾಸ ಖಾರ್ವಿ ಉಪಸ್ಥಿತರಿದ್ದರು.

ವಿದ್ಯಾನಿಧಿ ಯೋಜನೆಯ ಗೌರವಾಧ್ಯಕ್ಷ ಎಂ.ಜಿ.ರಾಘವೇಂದ್ರ ಭಂಡಾರ್‌ಕಾರ್ ಸ್ವಾಗತಿಸಿದರು. ಸಂಚಾಲಕ ಪುರುಷೋತ್ತಮ ಆರ್ಕಾಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗೌರವ ಕಾರ್ಯದರ್ಶಿ ಜಿ.ಎನ್.ಸತೀಶ ಖಾರ್ವಿ ವರದಿ ವಾಚಿಸಿದರು. ಚೇತನ್ ಖಾರ್ವಿ ಸಂದೇಶ ವಾಚಿಸಿದರು. ಜಿ.ಎಂ.ರಾಘವೇಂದ್ರ ಖಾರ್ವಿ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಉಪನ್ಯಾಸಕ ನರೇಂದ್ರ ಎಸ್.ಗಂಗೊಳ್ಳಿ ಕಾರ್ಯಕ್ರಮ ನಿರೂಪಿಸಿದರು. ಶೋಭಾ ಎಸ್.ಆರ್ಕಾಟಿ ವಂದಿಸಿದರು.

Exit mobile version