Kundapra.com ಕುಂದಾಪ್ರ ಡಾಟ್ ಕಾಂ

ಆರೋಪ ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ: ಶಾಸಕ ಗೋಪಾಲ ಪೂಜಾರಿ

ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ಸಹಿಸಲಾಗದೇ ಜನತಾ ಪ್ರೌಡಶಾಲೆ ವಿಚಾರದಲ್ಲಿ ವೃಥಾ ಆರೋಪ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಾಜಕೀಯದಿಂದ ಹೊರತಾಗಿರುವ ಹೆಮ್ಮಾಡಿ ಜನತಾ ಪ್ರೌಢಶಾಲೆಯನ್ನು ಮಾರಾಟ ಮಾಡಿದ್ದಾರೆ ಎಂಬ ಕಟು ಆಪಾದನೆಯನ್ನು ನನ್ನ ಮೇಲೆ ಹೊರಿಸಿ ಬಿಜೆಪಿಗರು ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದುದು. ದೀಪಕ್‌ಕುಮಾರ್ ಶೆಟ್ಟಿ ಹೊರಿಸಿರುವ ಆರೋಪ ಸಾಕ್ಷ ಸಮೇತ ಸಾಬೀತು ಮಾಡಿದರೆ ನಾನು ರಾಜಕೀಯದಿಂದಲೇ ನಿವೃತ್ತಿ ಹೊಂದುತ್ತೇನೆ. ಆದರೆ ಅವರು ಹೇಳಿರುವುದು ಸುಳ್ಳಾದರೆ ನೈತಿಕ ಹೊಣೆ ಹೊತ್ತು ರಾಜಕೀಯದಿಂದ ಹಿಂದೆ ಸರಿಯಲಿ ಎಂದು ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಸವಾಲು ಹಾಕಿದ್ದಾರೆ.

ಕಟ್‌ಬೆಲ್ತೂರು ನಿವಾಸದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಅಭಿವೃದ್ಧಿಗಾಗಿ ಬಹಳಷ್ಟು ಕೆಲಸ ನಡೆಯುತ್ತಿದ್ದು ಜನರೇ ಶ್ಲಾಘೀಸುತ್ತಿರುವ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿ ಬೈಂದೂರು ಕ್ಷೇತ್ರದಲ್ಲಿ ಸಂಜೆಯ ಹೊತ್ತಿಗೆ ಸಭೆ ಮಾಡಿ ನನ್ನ ವಿರುದ್ಧ ಸುಳ್ಳಿನ ಕಂತೆಯನ್ನು ಹೊರಿಸಿ ಜನರಿಗೆ ತಪ್ಪು ಸಂದೇಶ ರವಾನಿಸುತ್ತಿದ್ದಾರೆ. ಇದು ಖಂಡನಾರ್ಹ ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಬಿಜೆಪಿಯ ದೀಪಕ್‌ಕುಮಾರ್ ಶೆಟ್ಟಿ ಹೆಮ್ಮಾಡಿ ಜನತಾ ಪ್ರೌಢಶಾಲೆಯನ್ನು ೩೦ ಕೋಟಿಗೆ ಮಾರಾಟ ಮಾಡಿದ್ದಾರೆ ಎಂಬ ಆಪಾದನೆ ಮಾಡಿದ್ದಾರೆ. ಆರೋಪ ಮಾಡುವವರು ಸಾಕ್ಷ್ಯ ಒದಗಿಸಬೇಕಲ್ಲವೇ ಎಂದು ಪ್ರಶ್ನಿಸಿದ ಶಾಸಕರು ಇಂದಿಗೂ ವಿವಿ ಮಂಡಳಿ ಅಧ್ಯಕ್ಷರಾಗಿ ತಾನಿದ್ದು, ನನ್ನ ಸಹೋದರ ಕಾರ್ಯದರ್ಶಿಯಾಗಿದ್ದಾರೆ. ಹಸನ್ ಸಾಹೇಬ್, ಚಂದ್ರ ಪೂಜಾರಿ, ವಾಮನ ಪೈ ಸೇರಿದಂತೆ ಇತರರು ನಿರ್ದೇಶಕರಾಗಿದ್ದಾರೆ. ಅನುದಾನಿತ ಶಾಲೆಯಾಗಿದ್ದರೂ ಅಗತ್ಯಕ್ಕೆ ತಕ್ಕಷ್ಟು ಶಿಕ್ಷಕರು ಹಾಗೂ ಇತರೇ ನೌಕರರನ್ನು ವಿ.ವಿ ಮಂಡಳಿಯಿಂದಲೇ ನೇಮಿಸಿಕೊಂಡಿದ್ದು ಅವರಿಗೆ ಪ್ರತಿ ತಿಂಗಳು ಮಂಡಳಿಯೇ ಸಂಬಳ ನೀಡುತ್ತಿದೆ. ಇದನ್ನು ತಿಳಿಯದೇ ಆರೋಪ ಮಾಡುವುದು ಸರಿಯಲ್ಲ. ಯಾರೂ ಬೇಕಿದ್ದರೂ ಶಾಲೆಗೆ ತೆರಳಿ ಮಾಹಿತಿ ಪಡೆದುಕೊಂಡು ಬಳಿಕ ಮಾತನಾಡಲಿ ಎಂದರು.

ನಿರಂತರವಾಗಿ ಕ್ಷೇತ್ರದ ಅಭಿವೃದ್ಧಿ:
ಬೈಂದೂರು ಕ್ಷೇತ್ರದ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ತಂದಿದ್ದು, ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ. 30-54 ಯೋಜನೆಯಲ್ಲಿ 10 ಕೋಟಿ ಅನುದಾನ ಮತ್ತೆ ಕ್ಷೇತ್ರಕ್ಕೆ ಮಂಜೂರಾಗಿದೆ. ಬಹಳ ವರ್ಷದ ಬೇಡಿಕೆಯಾದ ಉಪ್ಪಿನಕುದ್ರು ಬೊಬ್ಬರ್ಯ ದೇವಸ್ಥಾನ, ಗುಜ್ಜಾಡಿಯ ಮಂಕಿ ಮಯ್ಯರ ಮನೆ ರಸ್ತೆ, ಮೋವಾಡಿ ಜವಳಿ ರಸ್ತೆ, ಬೆಳ್ಳಾಲ ಮೋಟು ಸೇತುವೆ, ವಂಡ್ಸೆ ನಂದ್ರೋಳಿ ರಸ್ತೆ, ಬಾಳಿಕೆರೆ ದೈವದ ಮನೆ ರಸ್ತೆ, ಕಟ್‌ಬೆಲ್ತೂರು ಭದ್ರಮಹಾಕಾಳಿ ರಸ್ತೆ ಮುಂತಾದ ರಸ್ತೆಗಳಿಗೆ ಅನುದಾನ ಮಂಜೂರಾಗಿದೆ ಎಂದರು.

ಶಾಸಕನಾಗಿ ತಾನು ತಂದಿರುವ ಅನುದಾನವನ್ನು ಕೇಂದ್ರ ಸರಕಾರದ್ದು ಎಂಬ ಸುಳ್ಳು ಮಾಹಿತಿಯನ್ನು ನೀಡುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಸರಕಾರದಿಂದ ಸಾಕಷ್ಟು ಅನುದಾನವನ್ನು ಕ್ಷೇತ್ರಕ್ಕೆ ತಂದಿದ್ದೇನೇಯೇ ಹೊರತೂ ಕೇಂದ್ರದ್ದಲ್ಲ. ಸುಳ್ಳನ್ನೇ ಹೇಳುತ್ತಾ ಬರುತ್ತಿರುವ ಬಿಜೆಪಿ ಪಕ್ಷದ ಮಾತುಗಳನ್ನು ಕೇಳದೇ ಕ್ಷೇತ್ರದ ಅಭಿವೃದ್ಧಿಯನ್ನು ತುಲನೆ ಮಾಡಿ ನೋಡಿಲಿ ಎಂದರು.

ಅ.1 ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಮತ್ತು ಘಟಕಗಳ ಪದಪ್ರದಾನ ಕಾರ್ಯಕ್ರಮ:
ಬೈಂದೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಹಾಗೂ ವಿವಿಧ ಘಟಕಳ ಪದಪ್ರದಾನ ಕಾರ್ಯಕ್ರಮ ಅಗಸ್ಟ 1ರ ಬೆಳಿಗ್ಗೆ 10:30ಕ್ಕೆ ತ್ರಾಸಿ ಅಣ್ಣಪ್ಪಯ್ಯ ಸಭಾಭವನದಲ್ಲಿ ಜರುಗಲಿದ್ದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅಧ್ಯಕ್ಷತೆ ವಹಿಸಲಿದ್ದು, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಉಸ್ತುವಾರಿ ಸಚಿವರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಹಲವು ನಾಯಕರು ಭಾಗವಹಿಸಲಿದ್ದಾರೆ.  ಕುಂದಾಪ್ರ ಡಾಟ್ ಕಾಂ ಸುದ್ದಿ.

ಈ ಸಂದರ್ಭ ವಂಡ್ಸೆ ಬ್ಲಾಕ್ ಹಿಂದೂಳಿದ ವರ್ಗಗಳ ವಿಭಾಗ, ಕಿಸಾನ್ ಘಟಕ, ಮಹಿಳಾ ಕಾಂಗ್ರೆಸ್, ಕಾರ್ಮಿಕ ಘಟಕ, ಬೈಂದೂರು ಬ್ಲಾಕ್ ಯುವ ಕಾಂಗ್ರೆಸ್, ಕಾರ್ಮಿಕ ಘಟಕ ಪರಿಶಿಷ್ಟ ಜಾತಿ ಘಟಕಗಳ ಪದಪ್ರದಾನ ಸಮಾರಂಭವೂ ನಡೆಯಲಿದೆ ಎಂದು ಶಾಸಕರು ತಿಳಿಸಿದರು.

Exit mobile version