ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕು ಕಾನೂನು ಸೇವಾ ಸಮಿತಿ ಕುಂದಾಪುರ, ಕುಂದಾಪುರ ಬಾರ್ ಅಸೋಸಿಯೇಷನ್ ರಿ. ಕುಂದಾಪುರ, ಅಭಿಯೋಗ ಇಲಾಖೆ ಕುಂದಾಪುರ ಮತ್ತು ಪೊಲೀಸ್ ಇಲಾಖೆ ಕುಂದಾಪುರ ಇವರ ಸಂಯಕ್ತ ಆಶ್ರಯದಲ್ಲಿ ರಾಜ್ಯ ಪೊಲೀಸ್ ದೂರು ಪ್ರಾಧಿಕಾರ ಮತ್ತು ನೊಂದವರ ಪರಿಹಾರದ ಬಗ್ಗೆ ಮಾಹಿತಿ ಶಿಬಿರವನ್ನು ತಾಲೂಕು ಪಂಚಾಯತ್ ಸಭಾಂಗಣ ಕುಂದಾಪುರದಲ್ಲಿ ಜರುಗಿತು.
ಕುಂದಾಪುರದ ಹೆಚ್ಚುವರಿ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಧೀಶರಾದ ಪ್ರವೀಣ ನಾಯಕ್ ಇವರು ಕಾರ್ಯಕ್ರಮವನ್ನು ಉದ್ಘಾಟಸಿ, ನೊಂದವರಿಗೆ ಪರಿಹಾರ ನೀಡಲು ಕಾನೂನು ಇದ್ದು ಸಿ.ಆರ್.ಪಿ.೩೫೭ಎ ಪ್ರಕಾರ ಅಪರಾಧ ಪ್ರಕರಣಗಳಲ್ಲಿ ನೊಂದವರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ನ್ಯಾಯಾಲಯ ಆದೇಶ ನೀಡುತ್ತದೆ, ಸಾವು, ನೋವು, ದೊಂಬಿ ಮುಂತಾದ ಪ್ರಕರಣಗಳಲ್ಲಿ ನೊಂದವರು ಪರಿಹಾರ ಪಡೆಯಬಹುದಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತಹ ತೀರ್ಪು ಹೊರಬಿದ್ದ ಬಳಿಕ ನೊಂದವರು ಪರಿಹಾರ ಪಡೆಯಲು ಅರ್ಹರು, ಆದ್ದರಿಂದ ನೊಂದವರು ಈ ಕಾಯಿದೆಯ ಪ್ರಯೋಜನ ಪಡೆಯಬೇಕು ಎಂದರು.
ಕುಂದಾಪುರ ಬಾರ್ ಅಸೋಸಿಯೇಷನ್ ಕುಂದಾಪುರ ಇದರ ಅಧ್ಯಕ್ಷರಾದ ಬನ್ನಾಡಿ ಸೋಮನಾಥ ಹೆಗ್ಡೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಜನರು ತಪ್ಪು ಮಾಡಿದಾಗ ಪೊಲೀಸರಿಗೆ ದೂರು ಕೊಡಬಹುದು, ಅದೇ ರೀತಿ ಪೊಲೀಸರು ತಪ್ಪು ಮಾಡಿದಾಗ ಪೊಲೀಸ್ ದೂರು ಪ್ರಾಧಿಕಾರಕ್ಕೆ ದೂರನ್ನು ನೀಡಿ ನ್ಯಾಯ ಪಡೆಯುವ ಸಲುವಾಗಿ ಪೊಲೀಸ್ ದೂರು ಪ್ರಾಧಿಕಾರವನ್ನು ರಚಿಸಲಾಗಿದೆ, ಜನ ಸಾಮಾನ್ಯರಲ್ಲಿ ಆತ್ಮಸ್ಥರ್ಯ ಹೆಚ್ಚಾಗಿ, ಯಾವುದೇ ಭೀತಿ ಇಲ್ಲದೆ ಪೊಲೀಸ್ ಠಾಣೆಗಳಿಗೆ ಬಂದು ಆರೋಪಿಗಳ ವಿರುದ್ದ ಫಿರ್ಯಾದು ನೀಡುವಂತಹ ವ್ಯವಸ್ಥೆ ನಿರ್ಮಾಣವಾಗಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಕುಂದಾಪುರದ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಕುಂದಾಪುರ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ಡಿ.ಪಿ ಕುಮಾರ ಸ್ವಾಮಿ, ಕುಂದಾಪುರ ಬಾರ್ ಅಸೋಸಿಯೇಷನ್ ರಿ. ಕುಂದಾಪುರ ಇದರ ಪ್ರಧಾನ ಕಾರ್ಯದರ್ಶಿ ಎಚ್. ರವೀಶ್ಚಂದ್ರ ಶೆಟ್ಟಿ, ಕುಂದಾಪುರದ ಸಹಾಯಕ ಸರಕಾರಿ ಅಭಿಯೋಜಕರಾದ ಸುಮಂಗಲಾ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿ, ಕುಂದಾಪುರದ ಹಿರಿಯ ವಕೀಲರಾದ ಟಿ.ಬಿ ಶೆಟ್ಟಿ ಇವರು ನೊಂದವರ ಪರಿಹಾರದ ಬಗ್ಗೆ ಮತ್ತು ಕುಂದಾಪುರದ ವೃತ್ತ ನಿರೀಕ್ಷಕರಾದ ಮಂಜಪ್ಪ ಡಿ ಆರ್ ಇವರು ರಾಜ್ಯ ಪೊಲೀಸ್ ದೂರು ಪ್ರಾಧಿಕಾರದ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಕುಂದಾಪುರ ಪೊಲೀಸ್ ಉಪ ನಿರೀಕ್ಷಕರಾದ ನಾಸೀರ್ ಹುಸೇನ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು, ಶಂಕರನಾರಾಯಣ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಸುನೀಲ್ ಕುಮಾರ್ ಇವರು ವಂದಿಸಿದರು.