ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮುಂದಿನ ದಿನಗಳಲ್ಲಿ ಪಕ್ಷದ ಕಾರ್ಯಕರ್ತರು ವಿಶ್ರಾಂತಿ ಪಡೆದುಕೊಳ್ಳದೆ ಪ್ರಧಾನಮಂತ್ರಿ ಮತ್ತು ಪಕ್ಷದ ಇಚ್ಛೆಯಂತೆ ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಲು ಕಾರ್ಯಕರ್ತರು ಶ್ರಮಿಸಬೇಕು. ಪಕ್ಷ ಸಂಘಟನೆ ಹಾಗೂ ಪಕ್ಷ ಬಲವರ್ಧನೆ ಬಗ್ಗೆ ಕಾರ್ಯಕರ್ತರು ಹೆಚ್ಚಿನ ಸಮಯವನ್ನು ನೀಡಬೇಕು ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಿ. ಎಂ. ಸುಕುಮಾರ್ ಶೆಟ್ಟಿ ಹೇಳಿದರು.
ಬೈಂದೂರು ವಿಧಾನಸಭಾ ಕ್ಷೇತ್ರದ ಜಡ್ಕಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ರಘು ಶೆಟ್ಟಿ ಅವರ ಮನೆಯಲ್ಲಿ ನಡೆದ ಬಿಜೆಪಿಯ ಗ್ರಾಮಸ್ಪಂದನ, ಕೋಟಿ ವೃಕ್ಷ ಅಭಿಯಾನ ಮತ್ತು ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕೇಂದ್ರದ ಯೋಜನೆಗಳಿಗೆ ರಾಜ್ಯ ಸರಕಾರದ ನಾಮಫಲಕ ಅಳವಡಿಸಿ ತಮ್ಮ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಬಿಪಿಎಲ್ ಕಾರ್ಡ್ ಹೊಂದಿರುವ ಬಡವರಿಗೆ ಕೇಂದ್ರ ಸರಕಾರ ಉಚಿತವಾಗಿ ಎಲ್‌ಪಿಜಿ ಸಂಪರ್ಕವನ್ನು ನೀಡುತ್ತಿದ್ದು ರಾಜ್ಯ ಸರಕಾರ ಇದನ್ನು ಅನಿಲ ಭಾಗ್ಯ ಯೋಜನೆ ಎಂದು ಬಿಂಬಿಸಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದೆ. ಅನ್ನಭಾಗ್ಯ ಯೋಜನೆಯಡಿ ವಿತರಿಸಲಾಗುತ್ತಿರುವ ಅಕ್ಕಿಗೆ ಕಿಲೋ ಒಂದಕ್ಕೆ ೨೯ ರೂ. ಸಬ್ಸಿಡಿ ನೀಡುತ್ತಿದ್ದರೂ ಎಲ್ಲೂ ಕೂಡ ರಾಜ್ಯ ಸರಕಾರ ಪ್ರಧಾನ ಮಂತ್ರಿಗಳ ಭಾವಚಿತ್ರ ಹಾಕುವ ಸೌಜನ್ಯ ತೋರುತ್ತಿಲ್ಲ ಎಂದ ಅವರು ಈ ಎಲ್ಲಾ ಕೇಂದ್ರ ಸರ್ಕಾರದ ಯೋಜನೆಗಳ ಮಾಹಿತಿಯನ್ನು ಪ್ರತಿಯೊಂದು ಮನೆಗಳಿಗೆ ತಲುಪಿಸುವ ವ್ಯವಸ್ಥೆ ಕಾರ್ಯಕರ್ತರಿಂದ ಆಗಬೇಕು ಎಂದರು
ಕ್ಷೇತ್ರಾಧ್ಯಕ್ಷ ಉಪ್ಪಿನಕುದ್ರು ಸದಾನಂದ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಎನ್. ದೀಪಕ್‌ಕುಮಾರ್ ಶೆಟ್ಟಿ, ಜಿಪಂ ಸದಸ್ಯರಾದ ಶಂಕರ ಪೂಜಾರಿ, ಸುರೇಶ್ ಬಟ್ವಾಡಿ, ಶಕ್ತಿಕೇಂದ್ರದ ಅಧ್ಯಕ್ಷ ಶಿವರಾಜ್ ಪೂಜಾರಿ, ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಗಣೇಶ ಪೂಜಾರಿ ಕೆಂಚನೂರು, ಪಕ್ಷದ ಮುಖಂಡ ಡಾ. ಅತುಲ್ ಕುಮಾರ್ ಶೆಟ್ಟಿ, ರಾಘವೇಂದ್ರ ನೆಂಪು, ಪ್ರಕಾಶ್ ಪೂಜಾರಿ ಜೆಡ್ಡು ಮತ್ತಿತರರು ಉಪಸ್ಥಿತರಿದ್ದರು.